"ವಿದೇಶದಲ್ಲಿ ದುಡಿಯುವ ಕರ್ನಾಟಕದ ಉದ್ಯೋಗಿ, ವ್ಯಾಪಾರಿಗಳ ಕಲ್ಯಾಣ ಯೋಜನೆ ಜಾರಿಗೆ ಆಗ್ರಹ"
ಮಂಗಳೂರು: ಗಲ್ಫ್ ಸೇರಿದಂತೆ ವಿದೇಶದಲ್ಲಿ ದುಡಿಯುವ ಕರ್ನಾಟಕದ ಉದ್ಯೋಗಿ, ವ್ಯಾಪಾರಿಗಳಿಗೆ ಕಲ್ಯಾಣ ಯೋಜನೆ ಜಾರಿಗೆ ತರುವಂತೆ ಸರಕಾರವನ್ನು ಆಗ್ರಹಿಸಿ ಡಿವೈಎಫ್‌ಐ ಕರ್ನಾಟಕ ರಾಜ್ಯ 12ನೇ ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡಿದೆ.
ಇಲ್ಲಿನ ತೊಕ್ಕೊಟ್ಟು ಯುನಿಟಿ ಸಭಾಂಗಣದಲ್ಲಿ ಡಿ.25ರಂದು ಆರಂಭಗೊಂಡಿದ್ದ ಮೂರು ದಿನಗಳ ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ವಿದೇಶಗಳಲ್ಲಿ ಅದರಲ್ಲೂ ಪ್ರಧಾನವಾಗಿ ಗಲ್ಫ್ ರಾಷ್ಟ್ರಗಳಲ್ಲಿ ಕರಾವಳಿ ಕರ್ನಾಟಕ ಸೇರಿದಂತೆ ಕರ್ನಾಟಕ ರಾಜ್ಯದ ಲಕ್ಷಾಂತರ ಜನರು ಉದ್ಯೋಗ, ವ್ಯಾಪಾರ, ಉದ್ದಿಮೆಗಳಲ್ಲಿ ತೊಡಗಿಕೊಂಡಿದ್ದಾರೆ. ತಾಯ್ನೆಲದಲ್ಲಿ ಉತ್ತಮ ಉದ್ಯೋಗಾವಕಾಶಗಳ ಕೊರತೆ, ನಿರುದ್ಯೋಗದಿಂದ ಕಂಗೆಟ್ಟು ಉತ್ತಮ ವೇತನ, ಘನತೆಯ ಬದುಕಿನ ಕನಸು ಗಳೊಂದಿಗೆ ನಮ್ಮ ಯುವ ಜನರು ಗಲ್ಫ್ ರಾಷ್ಟ್ರಗಳಿಗೆ ತೆರಳುತ್ತಾರೆ. ಈ ರೀತಿ ತೆರಳಿದ ಬಹುತೇಕರು ಶ್ರಮವನ್ನು ಬೇಡುವ, ದೊಡ್ಡ ಮಟ್ಟಿಗಿನ ವೇತನ, ಭದ್ರತೆಯಿಲ್ಲದ ಉದ್ಯೋಗಗಳನ್ನೇ ಅವಲಂಭಿಸಿದ್ದಾರೆ.
ತಮ್ಮ ದುಡಿಮೆಯ ಬಹುತೇಕ ಭಾಗವನ್ನು ತಮ್ಮನ್ನು ಅವಲಂಭಿಸಿರುವ ಕುಟುಂಬಕ್ಕಾಗಿ ಪ್ರತಿ ತಿಂಗಳು ಕಳುಹಿಸಿ ಕೊಡುತ್ತಾರೆ. ಈ ರೀತಿ ದಶಕಗಳ ಕಾಲ ಗಲ್ಫ್ ರಾಷ್ಟ್ರಗಳಲ್ಲಿ ದುಡಿದು ತಮ್ಮ ಗಳಿಕೆಯನ್ನು ಪೂರ್ತಿಯಾಗಿ ತಮ್ಮ ಕುಟುಂಬದ ನಿರ್ವಹಣೆಗೆ ಕಳುಹಿಸುತ್ತಾರೆ. ತಮ್ಮ ಯೌವನ ಪೂರ್ತಿಯಾಗಿ ಹೀಗೆ ವಿದೇಶಿ ನೆಲದಲ್ಲಿ ಕಳೆಯುವ ಇವರಲ್ಲಿ ಬಹುತೇಕರು ತಮ್ಮ ದುಡಿಮೆಯ ಕಾಲಾವಧಿ ಮುಗಿಸಿ ತಾಯ್ನೆಲಕ್ಕೆ ಮರಳಿದಾಗ ಇವರಲ್ಲಿ ಬಹುತೇಕರಲ್ಲಿ ಉಳಿತಾಯ ಎಂಬುದು ಇರುವುದಿಲ್ಲ. ಗಲ್ಫ್ ರಾಷ್ಟ್ರಗಳಲ್ಲಿ ಕಾಲ ಕಾಲಕ್ಕೆ ಬದಲಾಗುವ ನಿಯಮಗಳಿಂದಲೂ ಹೆಚ್ಚಿನವರು ತಮ್ಮ ಉದ್ಯೋಗ ಕಳೆದುಕೊಂಡು ದಿಢೀರನೆ ಭಾರತಕ್ಕೆ ಹಿಂದಿರುಗುವ ಸ್ಥಿತಿಯೂ ಉದ್ಭವವಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಅನಿವಾಸಿ ಭಾರತೀಯರ ಸ್ಥಿತಿ ದಾರುಣವಾಗಿರುತ್ತದೆ ಎಂದು ಡಿವೈಎಫ್‌ಐ ಕಳವಳ ವ್ಯಕ್ತಪಡಿಸಿದೆ.
ಇಂದು ಕರಾವಳಿ ಕರ್ನಾಟಕ, ಮಲೆನಾಡಿನ ಆರ್ಥಿಕತೆ ಗಲ್ಫ್ ಹಣವನ್ನು ಅವಲಂಭಿಸಿದೆ. ಅಲ್ಲಿ ಕಡಿಮೆ ವೇತನಕ್ಕೆ ದುಡಿಯುವ, ಸಣ್ಣಪುಟ್ಟ ವ್ಯಾಪಾರದಲ್ಲಿ ತೊಡಗಿರುವವರು ತಮ್ಮ ಕುಟುಂಬದ ನಿರ್ವಹಣೆಗೆ ಕಳುಹಿಸಿದ ಶ್ರಮದ ಗಳಿಕೆಯೇ ಆಗಿದೆ.ಈ ರೀತಿ ಇಲ್ಲಿನ ನಿರುದ್ಯೋಗದಿಂದ ಬೇಸತ್ತು ಅನಿವಾರ್ಯವಾಗಿ ವಿದೇಶಗಳಿಗೆ ತೆರಳಿ ದುಡಿದು ವಾಪಾಸಾಗುವ ಆರ್ಥಿಕವಾಗಿ ದುರ್ಬಲ ವಿಭಾಗಗಳಿಗೆ ನೆರವಾಗುವುದು ಸರಕಾರದ ಕರ್ತವ್ಯ. ಅವರು ಕಳುಹಿಸಿದ ವಿದೇಶಿ ಹಣ ಇಲ್ಲಿನ ಸರಕಾರದ ಖಜಾನೆಯನ್ನೂ ಬಲಗೊಳಿಸಿದೆ. ಮಾರುಕಟ್ಟೆ ಆರ್ಥಿಕತೆಗೆ ದೊಡ್ಡ ಶಕ್ತಿ ನೀಡಿದೆ. ಶಿಕ್ಷಣ, ಆರೋಗ್ಯ, ರಿಯಲ್ ಎಸ್ಟೇಟ್ ವ್ಯವಹಾರಗಳು ಬಹುತೇಕ ಅನಿವಾಸಿಗಳು ಕಳುಹಿಸುವ ಕರೆನ್ಸಿಯನ್ನೆ ಅವಲಂಬಿಸಿದೆ. ತಮ್ಮ ವಿಶ್ರಾಂತಿ ರಹಿತ ಶ್ರಮದ ದುಡಿಮೆಯಿಂದ ಮಲೆನಾಡು, ಕರಾವಳಿ ಕರ್ನಾಟಕ ಮಾತ್ರವಲ್ಲದೆ ರಾಜ್ಯದ ಆರ್ಥಿಕತೆಗೆ ದೊಡ್ಡ ಶಕ್ತಿ ನೀಡಿರುವ ಅನಿವಾಸಿ ದುಡಿಮೆಗಾರರು, ವ್ಯಾಪಾರಿಗಳಿಗೆ ನೆರವು, ಪ್ರೋತ್ಸಾಹ, ಪುನರ್ವಸತಿ ಒದಗಿಸುವುದು, ವಿಶೇಷ ಪ್ಯಾಕೇಜ್ ಘೋಷಿಸುವುದು ಸರಕಾರದ ಕರ್ತವ್ಯವಾಗಿದೆ.
ಅನಿವಾಸಿ ಭಾರತೀಯರು ಹಲವು ವರ್ಷಗಳಿಂದ ಸರಕಾರದ ಮುಂದೆ ಹಕ್ಕೊತ್ತಾಯ ಸಲ್ಲಿಸುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೆ ದೊಡ್ಡ ನಿಯೋಗ ಬಂದು ಮುಖ್ಯಮಂತ್ರಿಗಳ ಸಹಿತ ವಿರೋಧ ಪಕ್ಷಗಳ ನಾಯಕರನ್ನೂ ಭೇಟಿಯಾಗಿ ಮನವಿ ಸಲ್ಲಿಸಿರುತ್ತಾರೆ. ಕರ್ನಾಟಕ ರಾಜ್ಯ ಸರಕಾರ ತಕ್ಷಣವೇ ಅನಿವಾಸಿ ಭಾರತೀಯ ದುಡಿಮೆಗಾರರ, ವ್ಯಾಪಾರಿಗಳ ಬೇಡಿಕೆಯನ್ನು ಈಡೇರಿಸಬೇಕು, ಕೇರಳ ಸರಕಾರ ಈಗಾಗಲೆ ಅನಿವಾಸಿಗಳಿಗಾಗಿ ವಿಶೇಷ ಯೋಜನೆ, ಪುನರ್ವಸತಿ ಪ್ಯಾಕೇಜ್‌ಗಳನ್ನು ಕಾರ್ಯಗತಗೊಳಿಸಿದೆ. ಕರ್ನಾಟಕ ಸರಕಾರವೂ ಕನಿಷ್ಠ ಕೇರಳ ಮಾದರಿಯಲ್ಲಾದರೂ ಯೋಜನೆ ಯನ್ನು ಘೋಷಿಸಬೇಕು ಎಂದು ಡಿವೈಎಫ್‌ಐ ಕರ್ನಾಟಕ ರಾಜ್ಯ 12ನೇ ಸಮ್ಮೇಳನ ಸರಕಾರವನ್ನು ಆಗ್ರಹಿಸಿದೆ ಎಂದು ಪ್ರಕಟನೆ ತಿಳಿಸಿದೆ.