×
Ad

ಸುಳ್ಯ : ರಸ್ತೆ ಅಪಘಾತ; ಬೈಕ್‌ ಸವಾರ ಮೃತ್ಯು

Update: 2024-02-27 20:00 IST

ಸುಳ್ಯ: ಕಾರಿನ ಹಿಂಬದಿಗೆ ಬೈಕ್ ಢಿಕ್ಕಿಯಾಗಿ, ಬೈಕ್ ಸವಾರ ರಸ್ತೆಗೆ ಬಿದ್ದ ಸಂದರ್ಭ ಬಸ್ಸೊಂದು ಬೈಕ್ ಸವಾರನನ್ನು ರಸ್ತೆಯಲ್ಲಿ ಎಳೆದೊಯ್ದ ಪರಿಣಾಮ, ಗಂಭೀರ ಗಾಯಗೊಂಡ ಬೈಕ್ ಸವಾರ ಮೃತಪಟ್ಟ ಘಟನೆ ಸುಳ್ಯ ಸಮೀಪದ ಅರಂಬೂರಿನಲ್ಲಿ ಮಂಗಳವಾರ ನಡೆದಿದೆ.

ಸಂಪಾಜೆ ಗ್ರಾಮದ ದೊಡ್ಡಡ್ಕ ನಿವಾಸಿ ಪರಮೇಶ್ವರ ಪೆರುಂಗೋಡಿ (53) ಮೃತರು ಎಂದು ಗುರುತಿಸಲಾಗಿದೆ.

ಸುಳ್ಯದ ಗಾಂಧಿನಗರದಲ್ಲಿ ಬಡಗಿ ಕೆಲಸ ಮಾಡುತ್ತಿದ್ದ ಅವರು ಕೆಲಸ ಮುಗಿಸಿ ಹೋಗುತ್ತಿದ್ದಾಗ ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರೊಂದು ಅರಂಬೂರಿನಲ್ಲಿ ತಕ್ಷಣ ಬ್ರೇಕ್ ಹಾಕಿ ಇಡ್ಯಡ್ಕ ಕಡೆಗೆ ತಿರುಗಿಸಿದಾಗ, ಕಾರಿನ ಹಿಂಬದಿಯಿದ್ದ ಇನ್ನೊಂದು ಕಾರಿನ ಚಾಲಕ ತಕ್ಷಣ ಬ್ರೇಕ್ ಹಾಕಿದ್ದರು. ಬ್ರೇಕ್ ಹಾಕಿದ ಕಾರಿನ ಹಿಂದೆ ತೆರಳುತ್ತಿದ್ದ ಬೈಕ್ ಸವಾರ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದರು.

ಈ ಸಂದರ್ಭ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಖಾಸಗಿ ಟೂರಿಸ್ಟ್ ಬಸ್‍ನ ಅಡಿಗೆ ಪರಮೇಶ್ವರ ಅವರ ತಲೆ ಸಿಲುಕಿ ಒಂದಷ್ಟು ದೂರ ಎಳೆದೊಯ್ದಿದೆ. ಪರಿಣಾಮ ಪರಮೇಶ್ವರ ಅವರ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ತಕ್ಷಣ ಸ್ಥಳೀಯರು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಆದರೆ ತಲೆಗೆ ಗಂಭೀರವಾಗಿ ಗಾಯವಾಗಿದ್ದ ಪರಮೇಶ್ವರ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಕೇಸು ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News