×
Ad

ರಾಮ ಮಂದಿರ ಕಲ್ಲಿನಲ್ಲಿ ಕಟ್ಟಿದ್ದೀರಿ, ಇಟ್ಟಿಗೆ ಏನಾಗಿದೆ ? ಈ ಪ್ರಶ್ನೆ ಕೇಳಬಾರದೇ ? : ನಟ ಪ್ರಕಾಶ್ ರೈ

Update: 2024-02-27 21:02 IST

ಮಂಗಳೂರು: ದೇಶದಲ್ಲಿ ಹಿಂದೆಯೂ ದೇವಸ್ಥಾನಗಳನ್ನು ಕಟ್ಟಲಾಗಿದೆ. ಉದ್ಘಾಟನೆ ಮಾಡಲಾಗಿದೆ. ಆದರೆ ಅಪೂರ್ಣ ವಾಗಿರುವ ರಾಮಮಂದಿರವನ್ನು ಉದ್ಘಾಟಿಸಲಾಗಿದೆ. ರಾಮ ಮಂದಿರ ಕಲ್ಲಿನಲ್ಲಿ ಕಟ್ಟಿದ್ದೀರಿ, ಆದರೆ ಮಂದಿರಕ್ಕಾಗಿ ಸಂಗ್ರಹಿಸಿದ ಇಟ್ಟಿಗೆ ಏನಾಗಿದೆ ಎಂದು ಪ್ರಶ್ನೆ ಕೇಳಬಾರದೇ ಎಂದು ಬಹುಭಾಷಾ ಚಲನಚಿತ್ರ ನಟ ಪ್ರಕಾಶ್ ರೈ ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ.

ತೊಕ್ಕೊಟ್ಟಿನ ಯುನಿಟಿ ಮೈದಾನದ ಶ್ರೀನಿವಾಸ್ ಬಜಾಲ್ ನಗರದ ಭಾಸ್ಕರ ಕುಂಬ್ಳೆ ವೇದಿಕೆಯಲ್ಲಿ ಮಂಗಳವಾರ ಡಿವೈಎಫ್‌ಐನ 12ನೆ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಂಗವಾಗಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಮ್ಮ ಮಾತಿನುದ್ದಕ್ಕೂ ಹೆಸರನ್ನೇ ಉಲ್ಲೇಖಿಸದೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್ ರೈ, ಏಳು ದಶಕಗಳ ಹಿಂದೆ ಸ್ವಾತಂತ್ರಕ್ಕಾಗಿ ಉಪವಾಸ ಮಾಡುವ ನಾಯಕರು ನಮ್ಮ ದೇಶದಲ್ಲಿದ್ದರು. ಆದರೆ ಈಗ ದೇವಸ್ಥಾನ ಉದ್ಘಾಟನೆಗೆ ಉಪವಾಸ ಮಾಡುವ ನಾಯಕರಿದ್ದಾರೆ ಎಂದರು.

2019ರ ಚುನಾವಣೆಯ ಸಂದರ್ಭ ಗುಹೆ ಸೇರಿದ್ದರು. ಈಗ ಮತ್ತೆ ಕ್ಯಾಮರಾ ಹಿಡಿದು ನೀರಿಗಿಳಿದಿದ್ದಾರೆ. ಮುಂದಿನ ಚುನಾವಣೆಯ ಹೊತ್ತಿಗೆ ಚಂದ್ರನ ಮೇಲೇರಬಹುದೇನೋ? ಎಂದು ಕಿಚಾಯಿಸಿದ ಪ್ರಕಾಶ್ ರೈ, ದಿನವೊಂದರಲ್ಲಿ ಐದು ಬಟ್ಟೆ ಬದಲಾಯಿಸುವ ಪ್ರಧಾನಿ ನಮಗಿದ್ದಾರೆ. ಮಂದಿರ ಉದ್ಘಾಟನೆ ಸಂದರ್ಭ ಪ್ರಧಾನಿ ಇಲ್ಲದೆ 11 ದಿನ ದೇಶ ನಡೆಯಿತು. ವಂದೇ ಭಾರತ್‌ಗೆ ಇವರು ಹಸಿರು ನಿಶಾನೆ ತೋರಿಸಿದಷ್ಟು ಸ್ಟೇಷನ್ ಮಾಸ್ಟರ್ ಕೂಡಾ ತೋರಿಸಿರಲಿಕ್ಕಿಲ್ಲ. ಮಣಿಪುರ ಹತ್ತಿ ಉರಿಯುತ್ತಿದ್ದರೂ, ಇಂತಹ ಕಾರ್ಯದಲ್ಲಿ ತೊಡಗಿರುವವರನ್ನು ಪ್ರಶ್ನಿಸಬಾರದೇ ಎಂದರು.

ಇತಿಹಾಸದಲ್ಲಿ ಆಗಿನ ಸಂದರ್ಭಕ್ಕೆ ದೇಶದ ಶ್ರೀಮಂತಿಕೆಯ ಕೊಳ್ಳೆ ಹೊಡೆಯಲು ಇಲ್ಲಿ ಸಾಕಷ್ಟು ದಾಳಿ ನಡೆದು, ಮಂದಿರ, ಮಠ, ಬೌದ್ಧ ವಿಹಾರಗಳು ನಾಶವಾಗಿದೆ. ಪ್ರಜಾಪ್ರಭುತ್ವದ ಈ 20ನೆ ಶತಮಾನದಲ್ಲಿ ಇಲ್ಲಿನ ಮಸೀದಿಗಳು ಅಗೆದರೆ ಮಂದಿರವೇ ಸಿಗಬಹುದು. ಇನ್ನೂ ಆಳಕ್ಕೆ ಅಗದರೆ ಬುದ್ಧನೂ ಸಿಗಬಹುದು. ಎಷ್ಟು ಅಗೆಯುತ್ತೀರಿ. ಈ ರೀತಿ ಅಗೆಯುತ್ತಾ ಧರ್ಮದ ಅಮಲಿನಲ್ಲಿ ದೇಶವನ್ನು ಶಿಲಾಯುಗಕ್ಕೆ ಕೊಂಡೊಯ್ಯುವಿರಾ? ಹಸಿರು ಇಷ್ಟ ಇಲ್ಲದಿದ್ದರೆ ತರಕಾರಿ, ತಿನ್ನುವುದನ್ನು ಬಿಡುವಿರಾ? ಮುಸ್ಲಿಮರು ಬೇಡವೆಂದಾದರೆ ಅರಬ್ ರಾಷ್ಟ್ರಗಳಿಂದ ಬರುವ ಪೆಟ್ರೋಲ್ ಬೇಡ ಅನ್ನುವಿರಾ? ಎಂದವರು ಆರೆಸ್ಸೆಸ್ ಹಾಗೂ ಬಿಜೆಪಿಯ ವಿರುದ್ಧ ಹರಿಹಾಯ್ದರು.

ಆರೆಸ್ಸೆಸ್ ಅಜೆಂಡಾದಂತೆ ಹಿಂದೂ ರಾಷ್ಟ್ರದ ಉದ್ದೇಶಕ್ಕಾಗಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಹಾಗೆಂದು ಈ ದೇಶ ಹಿಂದೂ ರಾಷ್ಟ್ರವಾಗಿ ಉಳಿಯದೆ ಬ್ರಾಹ್ಮಣ, ಕ್ಷತ್ರಿಯರು, ಶೂದ್ರರು ಎಂಬ ತಾರತಮ್ಯ ಶುರು ಆಗಲಿದೆ. ಇವರಿಗೆ ನಮ್ಮ ಮುಂದಿನ ಭವಿಷ್ಯದ ಬಡತನ, ಹಸಿವು, ನಿರುದ್ಯೋಗ ಅರ್ಥ ಆಗದು. ನಾವು ಪ್ರಶ್ನೆ ಮಾಡಬೇಕಾಗಿರುವುದು ಇದನ್ನು ಎಂದವರು ಹೇಳಿದರು.

ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯ ಎ.ಎ. ರಹೀಂ, ಒಂದು ದೇಶ, ಒಂದು ಭಾಷೆ ಮತ್ತು ಒಂದು ಸಂಸ್ಕೃತಿ ಎಂಬ ಆರೆಸ್ಸೆಸ್ ಮತ್ತು ಬಿಜೆಪಿಯ ಅಜೆಂಡಾ ಭಾರತದ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಸಂವಿಧಾನಕ್ಕೆ ವಿರುದ್ಧವಾಗಿದೆ. ಆದ್ದರಿಂದ ನಾವದನ್ನು ವಿರೋಧಿಸುತ್ತಿದ್ದೇವೆ ಎಂದರು.

ಚುನಾವಣೆ ಸಮೀಪಿಸುತ್ತಿರುವುಂತೆಯೇ ನಮ್ಮ ಮುಂದಿರುವ ಪ್ರಶ್ನೆ ಭಾರತ ಜೀವಿಸಬೇಕೇ, ನಶಿಸಬೇಕೇ ಎಂಬುದಾಗಿದೆ. 10 ವರ್ಷಗಳಿಂದ ದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಹೇಳಿಕೊಳ್ಳಲು ತಾನು ಮಾಡಿರುವ ಯಾವುದೇ ಸಾಧನೆಗಳಿಲ್ಲ. ಅವರು ಮಾಡಿರುವುದು ನೋಟು ಅಮ್ಯಾನೀಕರಣ, ಸಿದ್ಧತೆ ಇಲ್ಲದ ಜಿಎಸ್‌ಟಿ, ಕೋವಿಡ್ ಸಾವು, ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 111ನೆ ಸ್ಥಾನದಲ್ಲಿ ನಿಲ್ಲಿಸಿರುವುದೇ ಅವರ ಸಾಧನೆ. ಅದಕ್ಕಾಗಿ ಅವರು ರಾಮನನ್ನೂ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದರು.

ಸ್ವಾತಂತ್ರ್ಯ ಭಾರತದ ಮೊದಲ ದೊಡ್ಡ ಅಪರಾಧ ಮಹಾತ್ಮಗಾಂಧಿಯ ಹತ್ಯೆ. ಆ ಸಂದರ್ಭದಲ್ಲಿಯೂ ಗಾಂಧೀಜಿ ಬಾಯಲ್ಲಿ ಹೇ ರಾಮ್ ಎಂಬ ಶಬ್ಧದ ಮೂಲಕ ರಾಮನೇ ಸಾಕ್ಷಿಯಾಗಿದ್ದ. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿಯೂ ರಾಮನೇ ಸಾಕ್ಷಿ. ರಾಮನ ಭಕ್ತರಾಗಿದ್ದ ಗಾಂಧೀಜಿ ರಾಮನ ಜತೆ ಈಶ್ವರ ಅಲ್ಲಾ ತೇರೇ ನಾಮ್ ಎಂದಿದ್ದರು. ಈಗ ದೇಶದಲ್ಲಿ ಗಾಂಧೀಜಿಯನ್ನು ಅಳಿಸುವ ಯತ್ನ ನಡೆಯುತ್ತಿದೆ. ಸಂವಿಧಾನವನ್ನು ಹೂತು ಹಾಕುವ ಪಿತೂರಿ ನಡೆಯುತ್ತಿದೆ. ನಾವದಕ್ಕೆ ಅವಕಾಶ ನೀಡಬಾರದು. ಮತೀಯವಾದಕ್ಕೆ ಮಂಗಳೂರು ಸಂಘ ಪರಿವಾರದ ಪ್ರಯೋಗ ಶಾಲೆ ಆಗಿರುವುದನ್ನು ತಪ್ಪಿಸಬೇಕು. ನಮ್ಮ ಮೌನ ದೇಶಕ್ಕೆ ಅಪಾಯ ಎಂಬುದನ್ನು ನಾವು ಅರಿಯಬೇಕು ಎಂದು ಎ.ಎ. ರಹೀಂ ಹೇಳಿದರು.

ಅಧ್ಯಕ್ಷತೆಯನ್ನು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ವಹಿಸಿದ್ದರು. ವೇದಿಕೆಯಲ್ಲಿ ಡಿವೈಎಫ್‌ಐ ಅಖಿಲ ಭಾರತ ಸಮಿತಿ ಸದಸ್ಯರಾದ ಜ್ಯಾಕ್ ಸಿ. ಥಾಮಸ್, ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಸ್ವಾಗತ ಸಮಿತಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ ಇನ್ನಿತರರು ಉಪಸ್ಥಿತರಿದ್ದರು.

ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಸ್ವಾಗತಿಸಿದರು. ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

‘ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ’ ಎಂಬ ಘೋಷ ವಾಕ್ಯದೊಂದಿಗೆ ಮೂರು ದಿನಗಳ ಕಾಲ ನಡೆದ ಸಮಾವೇಶ ಇಂದು ಕುತ್ತಾರ್ ಜಂಕ್ಷನ್‌ನಿಂದ ಯುವಜನರ ವರ್ಣ ರಂಜಿತ ಮೆರವಣಿಗೆಯ ಬಳಿಕ ಬಹಿರಂಗ ಸಭೆಯ ಮೂಲಕ ಮುಕ್ತಾಯಗೊಂಡಿತು.

40 ವರ್ಷಗಳ ಹಿಂದೆ ನಾನು ಸಣ್ಣವನಿದ್ದಾಗ ಬರುತ್ತಿದ್ದ ವೇಳೆ ಇದ್ದ ತುಳುನಾಡು ಬದಲಾಗಿದೆ. ಈ ರೀತಿ ಆಗಬಹುದು ಎಂದು ನಾನು ಊಹೆ ಮಾಡಿರಲಿಲ್ಲ. ನಮ್ಮ ಯುವಕರು ಜೈಲಿನಲ್ಲಿದ್ದಾರೆ. ಇವರನ್ನು ಛೂಬಿಟ್ಟ ಎಂಪಿ, ಎಂಎಲ್‌ಎಗಳ ಮಕ್ಕಳು ಯಾರಾದರೂ ಜೈಲಿನಲ್ಲಿದ್ದಾರೆಯೇ? ಇದನ್ನು ನಾವು ಪ್ರಶ್ನಿಸಬೇಕಾಗಿದೆ. ಯುವಕರಿಗೆ ಧರ್ಮದ ಅಫೀಮು ತಿನ್ನಿಸಿ, ಶಾಲೆಗಳಲ್ಲೂ ರಾಜಕೀಯ ನಡೆಸಲಾಗುತ್ತಿದೆ. ಈ ಬಗ್ಗೆ ಯುವಜನರು ಪ್ರಶ್ನಿಸಬೇಕು ಎಂದು ಪ್ರಕಾಶ್ ರೈ ಹೇಳಿದರು.

ಪ್ರಜಾಪ್ರಭುತ್ವವೆಂದರೆ ಒಂದು ಪಕ್ಷವನ್ನು ಕೆಳಗಿಳಿಸಿ ಇನ್ನೊಂದು ಪಕ್ಷ ಮೇಲೇರುವ ಪ್ರಕ್ರಿಯೆ ಅಲ್ಲ. ಅದು ಹೊಸ ನಾಯಕನ ಹುಟ್ಟಿಗೆ ಕಾರಣವಾಗಬೇಕಾದ ವ್ಯವಸ್ಥೆ. ದೇಶದ ಯಾವುದೇ ನಾಯಕ ನಾಳಿನ ಭರವಸೆ ಅಲ್ಲ. ದೇಶ ಬದಲಾಗಬೇಕಾದರೆ ನಾವು ಬದಲಾಗಬೇಕು. ಪ್ರಜಾಪ್ರಭುತ್ವದಲ್ಲಿ ನಾಯಕರಿಗೆ ಅಧಿಕಾರ ಕೊಡುವ ಶಕ್ತಿ ನಮಲ್ಲಿದೆ. ಪ್ರಜಾಪ್ರಭುತ್ವವೆಂದರೆ ಬಹುಸಂಖ್ಯಾತವೆಂದಲ್ಲ. ಅಲ್ಪಸಂಖ್ಯಾತರು, ಮಹಳೆಯರನ್ನು ಸುರಕ್ಷಿತವಾಗಿಡುವುದು ಬಹುಸಂಖ್ಯಾತರ ಜವಾಬ್ಧಾರಿ ಮತ್ತು ಹೊಣೆ ಎಂದು ಪ್ರಕಾಶ್ ರೈ ನುಡಿದರು.



























 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News