ಆಸ್ತಿ ತೆರಿಗೆ ಹೆಚ್ಚಳ ವಿಚಾರ: ಪಾಲಿಕೆ ಸಾಮಾನ್ಯ ಸಭೆ ಮೊಟಕು!
ಮಂಗಳೂರು: ಆಸ್ತಿ ಭಾರೀ ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿ ಮಂಗಳೂರು ಮಹಾನಗರ ಪಾಲಿಕೆಯ ವಿಪಕ್ಷ ಸದಸ್ಯರು ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ಕಾರಣ ಸಭೆಯಲ್ಲಿ ಗದ್ದಲ ಸೃಷ್ಟಿಯಾಗಿ, ಉತ್ತರ ನೀಡಲು ಸಾಧ್ಯವಾ ಗದೆ ಮೇಯರ್ ಎರಡೆರಡು ಬಾರಿ ಸಾಮಾನ್ಯ ಸಭೆಯನ್ನು ಮೊಟಕುಗೊಳಿಸಿ ಎದ್ದುಹೋದ ಪ್ರಸಂಗ ಗುರುವಾರ ನಡೆಯಿತು.
ಮನಪಾದ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆ ಬೆಳಗ್ಗೆ 10.30ಕ್ಕೆ ನಿಗದಿಯಾಗಿತ್ತು. ಅದರಂತೆ ನಾಡಗೀತೆಯೊಂದಿಗೆ ಸಭೆ ಆರಂಭಗೊಂಡು ಹಿಂದಿನ ಸಭೆಯ ನಿರ್ಣಯಗಳನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಸ್ಥಿರೀಕರಣಗೊಳಿಸುವ ಸಂದರ್ಭ ಆಡಳಿತ ಪಕ್ಷದ ಸದಸ್ಯೆ ಸಂಗೀತ ಆರ್. ನಾಯಕ್ ಅವರು ಆಸ್ತಿ ತೆರಿಗೆ ವಿಚಾರ ಪ್ರಸ್ತಾಪಿಸಲು ಮುಂದಾದರು.
ಈ ಸಂದರ್ಭ ಪ್ರತಿಪಕ್ಷವಾದ ಕಾಂಗ್ರೆಸ್‌ನ ಸದಸ್ಯರು ಕೈಯ್ಯಲ್ಲಿ ‘ತೆರಿಗೆ ಇಳಿಸಿ’, ‘ಸಾರ್ವಜನಿಕರಿಗೆ ಹೊರೆಯಾಗುವ ತೆರಿಗೆ ಇಳಿಸಿ’ ಎಂಬ ಭಿತ್ತಿಪತ್ರಗಳನ್ನು ಹಿಡಿದು ಮೇಯರ್ ಪೀಠದೆದುರು ತೆರಳಿ ಘೋಷಣೆ ಕೂಗಿದರು. ಬಿಜೆಪಿ ಸದಸ್ಯರನೇಕರು ಈ ಸಂದರ್ಭ ಕಾಂಗ್ರೆಸ್ ಸದಸ್ಯರು ರಾಜಕೀಯ ಮಾಡುತ್ತಿದ್ದಾರೆಂದು ತಮ್ಮ ಆಸನದ ಮೈಕ್‌ಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಪರಸ್ಪರ ಸದಸ್ಯರು ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಗದ್ದಲ ವಾತಾವರಣದ ನಡುವೆ, ಸಭೆ ನಿಯಂತ್ರಿಸಲಾಗದೆ, ಲಾಂಗ್ ಬೆಲ್ ಪ್ರೆಸ್ ಮಾಡಿ ಮೇಯರ್ ಏನೂ ಹೇಳದೆ ಸದನದಿಂದ ಹೊರ ನಡೆದರು.
ಈ ಸಂದರ್ಭ ಸದನದಲ್ಲಿದ್ದ ಆಡಳಿತ ಹಾಗೂ ವಿಪಕ್ಷ ಸದಸ್ಯರು ಪರಸ್ಪರ ಘೋಷಣೆಗಳನ್ನು ಮುಂದುವರಿಸಿದರು. ಕೆಲನಿಮಿಷಗಳ ಬಳಿಕ ಆಡಳಿತ ಪಕ್ಷದ ಸದಸ್ಯರೂ ಹೊರ ನಡೆದರು.
ಮತ್ತೆ ಸುಮಾರು 20 ನಿಮಿಷಗಳ ಬಳಿಕ ಆಡಳಿತ ಪಕ್ಷದ ಸದಸ್ಯರೊಂದಿಗೆ ಮೇಯರ್ ಸದನ ಪ್ರವೇಶಿಸಿ ಸಭೆ ಪುನರಾರಂಭಿಸಲು ಮುಂದಾದಾಗ ಮತ್ತೆ ವಿಪಕ್ಷ ಸದಸ್ಯರು ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆಗೆ ಮುಂದಾದರು. ಈ ಸಂದರ್ಭ ಆಡಳಿತ ಪಕ್ಷದ ಸದಸ್ಯರೂ ಕೈಯ್ಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಮತ್ತೆ ಇಕ್ಕಟ್ಟಿಗೆ ಸಿಲುಕಿದ ಮೇಯರ್ ಏನೂ ಮಾತನಾಡದೆ ಬೆಲ್ ಒತ್ತಿ ಸದನದಿಂದ ಹೊರನಡೆದರು. ಈ ಬಾರಿಯೂ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಪರಸ್ಪರ ಘೋಷಣೆ ಮುಂದುವರಿಯಿತು. ಬಳಿಕ ಆಡಳಿತ ಪಕ್ಷದ ಸದಸ್ಯರು ಸದನದಿಂದ ಹೊರಹೋದರು.
ಇದಾಗಿ ಸುಮಾರು ಅರ್ಧ ತಾಸಿನವರೆಗೆ ಪಾಲಿಕೆ ಆಯುಕ್ತರನ್ನು ಹೊರತುಪಡಿಸಿ ಉಳಿದ ಅಧಿಕಾರಿಗಳು ಹಾಗೂ ವಿಪಕ್ಷದ ಸದಸ್ಯರು ಸದನದಲ್ಲಿಯೇ ಕಾದು ಕುಳಿದಿದ್ದರು. 12.30ರ ವೇಳೆಗೆ ಅಧಿಕಾರಿಯೊಬ್ಬರು ಒಳಬಂದು ಸಭೆ ರದ್ದು ಮಾಡಲಾಗಿದೆ ಎಂದು ಹೇಳಿದಾಗ, ಕೆರಳಿದ ವಿಪಕ್ಷ ಸದಸ್ಯರು ಸದನಕ್ಕೆ ಅದರದ್ದೇ ಆದ ಗೌರವ ಇದೆ. ಸಭೆ ರದ್ದಾಗಿದೆ ಎಂದು ಹೇಳಲು ನೀವ್ಯಾರು ಎಂದು ಅಧಿಕಾರಿಯನ್ನು ತರಾಟೆಗೈದರು. ಮೇಯರ್ ಅವರು ಸಭೆ ರದ್ದು ಪಡಿಸುವ ಅಥವಾ ಮುಂದೂಡುವ ಬಗ್ಗೆ ಏನೂ ಮಾತು ಹೇಳದೆ ಸದನದಿಂದ ಹೊರಹೋಗುವ ಮೂಲಕ ಸನದಕ್ಕೆ ಅಗೌರವ ತೋರಿಸಿದ್ದಾರೆ ಎಂದು ವಿಪಕ್ಷ ಸದಸ್ಯರು ಮಾಧ್ಯಮದೆದುರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ 12.37ರ ವೇಳೆ ಅಷ್ಟರವರೆಗೆ ಸಭೆಯಲ್ಲಿದ್ದ ಅಧಿಕಾರಿಗಳೂ ಒಬ್ಬೊಬ್ಬರಾಗಿ ಹೊರನಡೆದರು. ಸದನದ ವಿದ್ಯುದ್ದೀಪಗಳನ್ನು ಆರಿಸುತ್ತಿದ್ದಂತೆಯೇ ಬಿಜೆಪಿಯ ವಿರುದ್ಧ ಘೋಷಣೆ ಕೂಗುತ್ತಾ ವಿಪಕ್ಷ ಸದಸ್ಯರೂ ಹೊರ ನಡೆದರು.
ಸದನದಿಂದ ಹೊರಬಂದ ವಿಪಕ್ಷ ಸದಸ್ಯರು ನಾಯಕ ಪ್ರವೀಣ್ ಚಂದ್ರ ಆಳ್ವ ನೇತೃತ್ವದಲ್ಲಿ ಮನಪಾ ಕಚೇರಿ ಕಟ್ಟಡ ಪ್ರವೇಶ ದ್ವಾರದ ಬಳಿ ಭಿತ್ತಿಪತ್ರ ಹಿಡಿದು ಮೇಯರ್ ಸದನಕ್ಕೆ ಅಗೌರವ ತೋರಿಸಿದ್ದಾರೆ ಎಂದು ಘೋಷಣೆ ಕೂಗುತ್ತಾ ಪ್ರತಿಭಟಿಸಿದರು.
ಸಾಮಾನ್ಯ ಸಭೆ ಆರಂಭಗೊಂಡ ಬಳಿಕ ಮೊದಲ ಬಾರಿಗೆ ಸಭೆ ಮೊಟಕುಗೊಳಿಸಿ ಹೊರ ಹೋದ ಮೇಯರ್ ಪತ್ರಕರ್ತ ರನ್ನು ತಮ್ಮ ಕೊಠಡಿಗೆ ಬರಹೇಳಿ ಆಸ್ತಿ ತೆರಿಗೆ ಬಗ್ಗೆ ವಿವರ ನೀಡಿದರು. ಪಾಲಿಕೆ ವ್ಯಾಪ್ತಿಯಲ್ಲಿ 2023-24ನೇ ಸಾಲಿಗೆ ಚಾಲ್ತಿ ಪರಿಷ್ಕೃತ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಅಳವಡಿಸಿ ತೆರಿಗೆ ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿತ್ತು. 2024-25ನೇ ಸಾಲಿನ ತೆರಿಗೆಯನ್ನು ಪರಿಷ್ಕೃತ ಮಾರುಕಟ್ಟೆ ದರಗಳ ಬದಲಿಗೆ ಈ ಹಿಂದೆ ಇದ್ದ ಆಸ್ತಿ ತೆರಿಗೆಗೆ ಶೇ.3ರಷ್ಟು ಹೆಚ್ಚಿಸಿ ಪರಿಷ್ಕರಣೆಗೊಳಿಸಲು ಸಂಬಂಧಿತ ತಂತ್ರಾಂಶದಲ್ಲಿ ಅಳವಡಿಸಿ ತಿದ್ದುಪಡಿ ಮಾಡಲು ಕಳೆದ ಪಾಲಿಕೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಪಾಲಿಕೆ ಆಯುಕ್ತರು ಸರಕಾರದ ಆದೇಶದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಷ್ಕೃತ ಮಾರುಕಟ್ಟೆ ದರಗಳ ಮೇಲೆ ಸಾರ್ವಜನಿಕರಿಂದ ಆಸ್ತಿ ತೆರಿಗೆಯನ್ನು ವಸೂಲು ಮಾಡಲು ಆದೇಶ ನೀಡಿದ್ದಾರೆ. ಹೊಸ ಮಾರುಕಟ್ಟೆ ದರದ ಪ್ರಕಾರ ಸೆಂಟ್ಸ್‌ಗೆ 5 ಲಕ್ಷ ಇದ್ದ ಜಾಗದ ಮಾರುಕಟ್ಟೆ ಮೌಲ್ಯ 10. 20 ಲಕ್ಷ ರೂ. ದರ ಎಂದು ನಿಗದಿ ಮಾಡಲಾಗಿದೆ. ಇದರ ಆಧಾರದಲ್ಲಿ ಶೇ.3ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚುವರಿ ಮಾಡಬೇಕು ಎಂಬುದು ಸರಕಾರದ ನಿಯಮವಾಗಿದೆ ಎಂದರು.
ಆದರೆ, ಆಸ್ತಿ ತೆರಿಗೆ ಅಧಿಕ ಮಾಡುವ ಸಂದರ್ಭ ಜನರಿಗೆ ಯಾವುದೇ ಹೊರೆ ಆಗಬಾರದು ಎಂಬ ಸ್ಪಷ್ಟ ಸೂಚನೆ ಇದೆ. ಜತೆಗೆ ಕಳೆದ ಬಾರಿಯ ಆಸ್ತಿ ತೆರಿಗೆಗಿಂತ ಈ ವರ್ಷ ಕಡಿಮೆ ಆಗಬಾರದು ಎಂಬ ಅಂಶವಿದೆ. ಆ ಆಧಾರದಲ್ಲಿ ಕಳೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರಿಗೆ ಹೊರೆ ಆಗಬಾರದು ಎಂಬ ಕಾರಣದಿಂದ 2023-24ನೇ ಸಾಲಿನ ಚಾಲ್ತಿ ಪರಿಷ್ಕೃತ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿಯನ್ನು ಅಳವಡಿಸುವ ಬದಲು ಕಳೆದ ಅವಧಿಯ (2021)ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆಯೇ ಶೇ.3ರಷ್ಟು ಆಸ್ತಿ ತೆರಿಗೆ ಏರಿಸಲು ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಪಾಲಿಕೆ ಆಯುಕ್ತರು ಇದನ್ನು ಪಾಲನೆ ಮಾಡಬೇಕಿತ್ತು. ಆದರೆ, ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದ ಪರಿಷತ್ತು ನಿರ್ಧಾರವನ್ನು ಪಾಲನೆ ಮಾಡದೆ ಸರಕಾರದ ಒತ್ತಡದಿಂದ 2023ರ ಪರಿಷ್ಕೃತ ಮಾರುಕಟ್ಟೆ ದರಗಳ ಮೇಲೆ ಆಸ್ತಿ ತೆರಿಗೆ ವಿಧಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ವಿಚಾರ ಗಮನಕ್ಕೆ ಬಂದ ತತ್‌ಕ್ಷಣ ಪ್ರತಿಪಕ್ಷದವರನ್ನು ಸೇರಿ ಸಭೆ ಮಾಡಲಾಗಿದೆ. ಹೊಸ ಮಾರುಕಟ್ಟೆ ದರಗಳ ಮೇಲೆ ಆಸ್ತಿ ತೆರಿಗೆ ವಿಧಿಸಬಾರದು ಎಂಬ ಸೂಚನೆಯನ್ನು ಆಯುಕ್ತರಿಗೆ ನೀಡಲಾಗಿತ್ತು. ಜತೆಗೆ ಮುಖ್ಯಮಂತ್ರಿ, ನಗರಾಭಿವೃದ್ದಿ ಸಚಿವರಿಗೆ ಕೆಲವೇ ದಿನದಲ್ಲಿ ಇಬ್ಬರು ಶಾಸಕರು ಹಾಗೂ ಮುಖಂಡರ ಜತೆಗೆ ನಿಯೋಗದೊಂದಿಗೆ ಭೇಟಿ ನೀಡಿ ಆಸ್ತಿ ತೆರಿಗೆ ಏರಿಕೆ ಮಾಡದಂತೆ ಮನವಿ ಸಲ್ಲಿಸಲಾಗುವುದು. ಆದರೆ, ಈ ವಿಚಾರದಲ್ಲಿ ಪಾಲಿಕೆ ಸಭೆಯಲ್ಲಿ ಚರ್ಚೆ ಆಗುವ ಸಂದರ್ಭ ಕಾಂಗ್ರೆಸ್‌ನವರು ರಾಜಕೀಯ ಉದ್ದೇಶಕ್ಕಾಗಿ ಫಲಕದೊಂದಿಗೆ ಪ್ರತಿಭಟನೆ ನಡೆಸಿದ್ದಾರೆ ಎಂದು ಆರೋಪಿಸಿದರಲ್ಲದೆ, ಕಾಂಗ್ರೆಸ್‌ಗೆ ಜನರ ಕಾಳಜಿ ಇರುತ್ತಿದ್ದರೆ ಸರಕಾರದ ಅಥವಾ ನಗರಾಭಿವೃದ್ಧಿ ಸಚಿವರ ಗಮನಕ್ಕೆ ಈ ವಿಚಾರ ತಂದು ತೆರಿಗೆ ಕಡಿಮೆ ಮಾಡುವ ಬಗ್ಗೆ ಮನವಿ ಮಾಡಬಹುದಿತ್ತು. ಆದರೆ ಅದನ್ನು ಮಾಡದೆ ಕಾಂಗ್ರೆಸ್ ಕೇವಲ ರಾಜಕೀಯ ಮಾಡುತ್ತಿದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮಂಗಳೂರಿನಲ್ಲಿ ತೆರಿಗೆ ಹೆಚ್ಚಳವಾಗುತ್ತದೆ. 2002ರಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾರಿಗೆ ಬಂದಾಗ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಶಶಿಧರ ಹೆಗ್ಡೆ ಮೇಯರ್ ಆಗಿದ್ದರು. ಐದು ವರ್ಷ ಸ್ವಯಂ ಘೋಷಿತ ಆಸ್ತಿ ತೆರಿಗೆ ಹಾಕಿರಲಿಲ್ಲ. ಬಳಿಕ ಬಂದ ಬಿಜೆಪಿ ಸರಕಾರ ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾರಿಗೊಳಿಸಿ ಜನರಿಗೆ ಹೊರೆ ಹಾಕಿದೆ. 2021ರ ಫೆಬ್ರವರಿಯಲ್ಲಿ ಕೇಂದ್ರ ಸರಕಾರದ ಆದೇಶದ ಮೇರೆಗೆ ಕರ್ನಾಟಕದಲ್ಲಿಯೂ ಬಿಜೆಪಿ ಸರಕಾರ ಆಡಳಿತದಲ್ಲಿದ್ದು ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಖಾಲಿ ಜಾಗಕ್ಕೂ ತೆರಿಗೆ ಅನ್ವಯ ಮಾಡಲಾಗಿದೆ. ಕೇಂದ್ರ ಸರಕಾರ ಈ ಆದೇಶ ಮಾಡಿದಾಗ ಬಿಜೆಪಿಯ ತ್ರಿಬಲ್ ಇಂಜಿನ್ ಸರಕಾರವಿದ್ದರೂ ಜನಪ್ರತಿನಿಧಿಗಳು ಯಾರೊಬ್ಬರೂ ಚಕಾರ ಎತ್ತಿಲ್ಲ. ಈಗ ತೆರಿಗೆ ಕೇವಲ ಮನೆ ಮೇಲೆ ಮಾತ್ರ ಅಲ್ಲ, ಅಂಗಳಕ್ಕೂ ಹಾಕಲಾಗಿದೆ. 10 ಸಾವಿರ ತೆರಿಗೆ ಕಟ್ಟಬೇಕಿದ್ದವರು ಈ ಹೆಚ್ಚಳದಿಂದ ಸುಮಾರು 50 ಸಾವಿರ ಮೇಲೆ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಕಾಂಗ್ರೆಸ್‌ನಿಂದ ತುಳಸಿಕಟ್ಟೆಗೆ ತೆರಿಗೆ ಎಂದು ಬಿಜೆಪಿ ಆರೋಪಿಸಿತ್ತು. ಅಂದು ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದು, ಜನಾರ್ದನ ಪೂಜಾರಿಯವರು ಸ್ವಯಂ ಘೋಷಿತ ತೆರಿಗೆ ಹಾಕಲು ಮನವಿ ಮಾಡಿ ತೆರಿಗೆ ವಿಧಿಸಲು ಅವಕಾಶ ನೀಡಿರಲಿಲ್ಲ ಎಂದು ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಹೇಳಿದರು.
ಮನಪಾ ಸಾಮಾನ್ಯ ಸಭೆಯ ಆರಂಭದಿಂದ ಸಭೆಯ ಎಲ್ಲಾ ವಿದ್ಯಾಮಾನಗಳನ್ನು ಮೌನವಾಗಿ ವೀಕ್ಷಿಸುತ್ತಿದ್ದ ಪಾಲಿಕೆಯ ಸದಸ್ಯರಾದ, ಎಸ್‌ಡಿಪಿಐನ ಮುನೀಬ್ ಬೆಂಗರೆ ಮತ್ತು ಸಂಶಾದ್, ಮಾಹಿತಿ ನೀಡದೆ ಸಭೆಯನ್ನು ಮುಕ್ತಾಗೊಳಿಸುವ ಮೂಲಕ ಸಂವಿಧಾನ ವಿರೋಧಿ ನಡೆ ಹಾಗೂ ಪರಿಷತ್ತಿನ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾನ್ಯ ಸಭೆಯಲ್ಲಿ ಬಿಜೆಪಿಯ ಸದಸ್ಯರೊಬ್ಬರು ಎದ್ದು ತೆರಿಗೆ ವಿಚಾರದಲ್ಲಿ ಮಾತನಾಡುವ ಸಂದರ್ಭ ಕಾಂಗ್ರೆಸ್ ಸದಸ್ಯರು ತೆರಿಗೆ ಇಳಿಕೆ ಮಾಡಬೇಕೆಂದು ಬಾವಿಗಿಳಿದು ಪ್ರತಿಭಟಿಸಿದರು. ಈ ಸಂದರ್ಭ ಮೇಯರ್ ಮೇಯರ್ ಎರಡುಬಾರಿ ಸಭೆಯಿಂದ ಹೊರಹೋದರು. ಆದರೆ ಬಳಿಕ ದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಸಭೆಯನ್ನು ಮುಕ್ತಾಯ ಗೊಳಿಸಿರುವುದು ಸಂವಿಧಾನ ವಿರೋಧಿಯಾಗಿದೆ. ಜನ ಸಾಮಾನ್ಯರ ಸಮಸ್ಯೆಗಳ ರ್ಚೆಯನ್ನು ಮಾಡಿ ಪರಿಹರಿಸಲು ಅವಕಾಶ ನೀಡದಿರುವ ನಡೆಯನ್ನು ಖಂಡಿಸುವುದಾಗಿ ಮುನೀಬ್ ಬೆಂರೆ ಮತ್ತು ಸಂಶಾದ್ ಅಬೂಬಕರ್ ತಿಳಿಸಿದರು.