×
Ad

ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್: ಪೊಲೀಸರ ನಡೆಗೆ ವ್ಯಾಪಕ ಖಂಡನೆ

Update: 2024-05-29 21:05 IST

ಮಂಗಳೂರು: ನಗರದ ಕಂಕನಾಡಿಯ ಮಸೀದಿಯೊಂದರ ಬಳಿಯ ರಸ್ತೆಯಲ್ಲಿ ಶುಕ್ರವಾರ ನಮಾಝ್ ನಿರ್ವಹಿಸಿದ ಹಿನ್ನೆಲೆಯಲ್ಲಿ ಕದ್ರಿ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದನ್ನು ವಿವಿಧ ಸಂಘಟನೆಗಳು ಖಂಡಿಸಿವೆ.

ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿ: ರಸ್ತೆಯ ಮೇಲೆ ನಮಾಝ್ ನಿರ್ವಹಿಸಿರುವುದಕ್ಕೆ ಮುಸಲ್ಮಾನರ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮಂಗಳೂರಿನ ಪೊಲೀಸರೆಂದರೆ ಇಲಾಖೆಯಿಂದ ತರಬೇತಿ ಪಡೆದು ಬಂದವರೇ ಅಥವಾ ಸಂಘಪರಿವಾರದ ಶಾಖೆಯಲ್ಲಿ ತರಬೇತಿ ಪಡೆದ ಆರೆಸೆಸ್ಸ್ ಕಾರ್ಯಕರ್ತರೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸರಕಾರ ಹೆಸರಿಗಷ್ಟೇ ಬದಲಾಗಿದೆ. ಆಡಳಿತ ನೀತಿಗಳಲ್ಲೆವೂ ಕೋಮುವಾದಿ ಮನಸ್ಥಿತಿಯದ್ದೇ ಆಗಿದೆ. ನಗರದ ರಸ್ತೆಗಳಲ್ಲಿ ನಮಾಝ್‌ನಿಂದ ಮಾತ್ರವಲ್ಲ ಜಾತ್ರೆ, ತೇರು, ಹೊರೆ ಕಾಣಿಕೆಯಿಂದ ಹಿಡಿದು ಸ್ಮಾರ್ಟ್‌ಸಿಟಿಯ ಅವೈಜ್ಞಾನಿಕ ಕಾಮಗಾರಿಯಿಂದ ದಿನವಿಡೀ ಯೂಟರ್ನ್ ಹೊಡೆಯುವ ಪರಿಸ್ಥಿತಿ ಬಂದಿದೆ. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

*ಯುನಿವೆಫ್ ಕರ್ನಾಟಕ: ಮಸೀದಿಯೊಳಗೆ ಸ್ಥಳದ ಅಭಾವವನ್ನು ಕಂಡು ತರಾತುರಿಯಲ್ಲಿ ಮಸೀದಿಯ ಆವರಣದ ಗೋಡೆಗೆ ತಾಗಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಮಾಝ್ ನಿರ್ವಹಿಸಲಾಗಿತ್ತು. ಕೇವಲ ಐದು ನಿಮಿಷ ಗಳಲ್ಲಿ ಮುಗಿದ ಈ ನಮಾಝನ್ನು ಯಾರೋ ಚಿತ್ರೀಕರಿಸಿ ಸಾರ್ವಜನಿಕರ ಮಧ್ಯೆ ಪ್ರಚೋದನಾತ್ಮಕವಾಗಿ ಬಿತ್ತರಿಸಿ ಮುಸ್ಲಿಂ ಸಮುದಾಯವು ಮಹಾ ಅಪರಾಧ ನಡೆಸಿದಂತೆ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಮುಂದುವರಿದ ಭಾಗವಾಗಿ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದು ಖಂಡನೀಯ ಎಂದು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಪರಂಪರಾಗತವಾಗಿ ಇಂತಹ ಪದ್ಧತಿ ಇದೆ. ಅದನ್ನು ಯಾರು ಕೂಡ ಆಕ್ಷೇಪಿಸುತ್ತಿರಲಿಲ್ಲ.ಆದರೆ ಕೇವಲ ರಾಜಕೀಯ ಹಿತಾಸಕ್ತಿಗಾಗಿ ಸಾರ್ವಜನಿಕರಿಗೆ ತೊಂದರೆಯಾಗದಿದ್ದರೂ ನಮಾಝ್ ನಿರ್ವಹಿಸಿರುವುದು ಪ್ರಚೋದೀತ ಕೆಲಸವೆಂದು ಬಿಂಬಿಸಿರುವುದು ಅಕ್ಷಮ್ಯ. ನಗರದ ವಿವಿಧೆಡೆ ಇತರ ಧರ್ಮೀಯರೂ ರಸ್ತೆ ತಡೆಮಾಡಿ ಧಾರ್ಮಿಕ ಆಚರಣೆ ಗಳನ್ನು ಮಾಡುತ್ತಾರೆ. ಆವಾಗ ಸಾರ್ವಜನರಿಗೆ ತೊಂದರೆ ಆಗುವುದಿಲ್ಲವೇ?. ಅವರ ಮೇಲೂ ಸ್ವಯಂ ಪ್ರೇರಿತ ದಾಖಲಾಗಬೇಡವೇ? ಕೇವಲ ನಮಾಝ್ ಮಾಡಿದವರ ಮೇಲೆ ಮಾತ್ರ ಏಕೆ ಕ್ರಮ ಎಂದು ಪ್ರಶ್ನಿಸಿದ್ದಾರೆ.

*ಎಸ್ಕೆಎಸೆಸ್ಸೆಫ್ ದ.ಕ.ಈಸ್ಟ್ ಜಿಲ್ಲಾ ಸಮಿತಿ: ಕಂಕನಾಡಿಯ ಮಸೀದಿ ಸಮೀಪದ ರಸ್ತೆಯಲ್ಲಿ ನಮಾಜ್ ನಿರ್ವಹಿಸಿದ್ದನ್ನು ಅಪರಾಧ ಎಂಬಂತೆ ಬಿಂಬಿಸಿ ಕೆಲವು ಕೋಮುವಾದಿ ಫ್ಯಾಶಿಸ್ಟ್‌ಶಕ್ತಿಗಳು ಪ್ರಯತ್ನ ನಡೆಸುವುದು ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಕೆಲವು ಧರ್ಮದ ಉತ್ಸವದ ಸಂದರ್ಭ ಕಿಲೋ ಮೀಟರ್ ತನಕ ರಸ್ತೆ ತಡೆ ನಡೆಸಿದಾಗ ಮತ್ತು ಇತ್ತೀಚೆಗೆ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿ ಕಾರ್ಯಕ್ರಮ ನಡೆಸಿದವರ ಮೇಲೆ ಸ್ವಯಂ ಪ್ರೇರಿತ ಕೇಸು ದಾಖಲಿಸದ ಕರ್ನಾಟಕ ಸರಕಾರ ಮತ್ತು ಪೊಲೀಸ್ ಇಲಾಖೆಯ ದ್ವಿಮುಖ ನೀತಿಯನ್ನು ಎಸ್ಕೆಎಸೆಸ್ಸೆಫ್ ದ.ಕ.ಈಸ್ಟ್ ಜಿಲ್ಲಾ ಸಮಿತಿ ಖಂಡಿಸಿದೆ. ಅಲ್ಲದೆ ದಾಖಲಿಸಿದ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದೆ.

*ಎಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ: ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮತ್ತು ಕಾನೂನು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಹಾಗೂ ದೂರುದಾರರು ಮುಂದೆ ಬರಲು ಭಯಪಡುವಂತಹ ಪ್ರಕರಣಗಳಲ್ಲಿ ದಾಖಲಿಸ ಬಹುದಾದ ಸ್ವಯಂ ಪ್ರೇರಿತ ಕೇಸ್ ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಳಕೆಯಾಗಿರುವುದು ಆತಂಕಕಾರಿಯಾಗಿದೆ ಎಂದು ಕರ್ನಾಟಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ.

ಮಂಗಳೂರಿನ ನಮಾಝ್ ಪ್ರಕರಣದಲ್ಲಿ ಯಾವುದೇ ಸಾರ್ವಜನಿಕ ಸಮಸ್ಯೆ ಉಂಟಾಗಿಲ್ಲ. ಬೆರಳೆಣಿಕೆಯ ಮಂದಿ ರಸ್ತೆ ಬದಿಯಲ್ಲಿ ನಿಶಬ್ಧವಾಗಿ ಐದಾರು ನಿಮಿಷಗಳ ಕಾಲ ನಮಾಝ್ ನಿರ್ವಹಿಸಿದ್ದಾರೆ. ಇದನ್ನೇ ಕೆಲವು ಕ್ಷುದ್ರ ಶಕ್ತಿಗಳು ಚಿತ್ರೀಕ ರಿಸಿದೆ. ಇಷ್ಟಕ್ಕೆ ಕದ್ರಿ ಠಾಣೆಯಲ್ಲಿ ಪೊಲೀಸರು ಸುಮೊಟೊ ದಾಖಲಾಗಿರುವುದು ಖಂಡನೀಯ ಎಂದು ತಿಳಿಸಿದೆ.

*ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ: ಇತ್ತೀಚೆಗೆ ಕಂಕನಾಡಿಯ ಮಸೀದಿಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಮಾಝ್ ನಿರ್ವಹಿಸಿದ್ದನ್ನೇ ಅಪರಾಧ ಎಂಬಂತೆ ಬಿಂಬಿಸಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದನ್ನು ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಖಂಡಿಸಿದ್ದಾರೆ.

ಇದನ್ನು ಚಿತ್ರೀಕರಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ವ್ಯಕ್ತಿಯ ವಿರುದ್ಧ ಮತ್ತು ಇತರ ಧರ್ಮೀಯರಯ ರಸ್ತೆಯಲ್ಲೇ ಪ್ರಾರ್ಥನೆ ನಡೆಸುವುದರ ವಿರುದ್ಧವೂ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಿ ಎಂದು ಆಗ್ರಹಿಸಿದ್ದಾರೆ.

*ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್: ಕಂಕನಾಡಿಯ ಮಸೀದಿ ಪಕ್ಕದ ರಸ್ತೆಯಲ್ಲಿ ನಮಾಝ್ ನಿರ್ವಹಿಸಿದ ಕಾರಣ ಕ್ಕಾಗಿ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿರುವುದು ಖಂಡನೀಯ. ಮಾ.6ರಂದು ಬಜರಂಗದಳದ ನೇತೃತ್ವ ದಲ್ಲಿ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಅಯೋಧ್ಯೆ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿ ಸಾರ್ವಜನಿಕ ರಿಗೆ ಅಡ್ಡಿಪಡಿಸಿದಾಗ ಸ್ವಯಂ ಪ್ರೇರಿತ ಕೇಸು ಯಾಕೆ ದಾಖಲಿಸಲಿಲ್ಲ ಎಂದು ದ.ಕ. ಜಿಲ್ಲಾ ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಪ್ರಶ್ನಿಸಿದ್ದಾರೆ.

*ರಸ್ತೆಯಲ್ಲಿ ನಮಾಝ್ ನಿರ್ವಹಿಸಿದ್ದಕ್ಕೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಪೊಲೀಸರ ನಡೆಯು ಖಂಡನೀಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಖಂಡಿಸಿದ್ದಾರೆ. ಈ ಘಟನೆಯ ಬಗ್ಗೆ ಸುಮೊಟೊ ಪ್ರಕರಣ ದಾಖಲಿಸುವ ಅಗತ್ಯವೇ ಇರಲಿಲ್ಲ. ಈ ಹಿಂದೆ ಮಂಗಳೂರಿನ ನಡು ರಸ್ತೆಯಲ್ಲಿ ಪೂಜೆ ಪುನಸ್ಕಾರ ರಾಜಕೀಯ ಸಮ್ಮೇಳನ ದಂತಹ ವಿವಿಧ ಕಾರ್ಯಕ್ರಮಗಳು ಮಾಡಿದಾಗ ಪ್ರಕರಣ ದಾಖಲಿಸಿಕೊಳ್ಳದ ಪೋಲಿಸರು, ಶಾಸಕ ಹರೀಶ್ ಪೂಂಜಾ ಠಾಣೆಗೆ ನುಗ್ಗಿ ಪೋಲಿಸರಿಗೆ ಬೆದರಿಕೆ ಹಾಕಿ ಗೂಂಡಾಗಿರಿ ಮಾಡಿದಾಗ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲು ಮೀನಮೇಷ ಎಣಿಸುತ್ತಿದ್ದರು. ಅವರನ್ನು ಬಂಧಿಸಲು ಹೋದಾಗ ಪ್ರತಿಭಟನೆ ಮತ್ತು ರಸ್ತೆ ತಡೆ ಮಾಡಿದಾಗಲೂ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News