ಪೊಲೀಸ್ ಕಮಿಷನರ್ ವಿರುದ್ಧ ಕ್ರಮಕ್ಕೆ ಮುನೀರ್ ಕಾಟಿಪಳ್ಳ ಆಗ್ರಹ
ಮಂಗಳೂರು, ಜು.29: ನಗರದ ಕಂಕನಾಡಿಯ ಮಸೀದಿ ಬಳಿಯ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಮಾಝ್ ನಿರ್ವಹಿಸಿದವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಸ್ಥಳಾವಕಾಶದ ಕೊರತೆ ಇದ್ದಾಗ ಕೇವಲ ಐದಾರು ನಿಮಿಷಗಳ ಕಾಲ ಮಸೀದಿ ಬಳಿಯ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಮಾಝ್ ನಿರ್ವಹಿಸುತ್ತಿರುವುದು ಹೊಸತೇನಲ್ಲ. ಬಿಜೆಪಿ ಸರಕಾರ ಇದ್ದಾಗಲೂ ಇಲ್ಲಿ ನಮಾಝ್ ನಿರ್ವಹಿಸಲಾಗಿದೆ. ಆವಾಗ ದಾಖಲಾದ ಸ್ವಯಂ ಪ್ರೇರಿತ ಪ್ರಕರಣವು ಇದೀಗ ಅಲ್ಪಸಂಖ್ಯಾತ ಸಂರಕ್ಷಕ ಪೋಷಾಕಿನಲ್ಲಿ ರುವ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದಾಖಲಾಗಿರವುದು ಖಂಡನೀಯ.
ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವ ಮುನ್ನ ಮಸೀದಿಯ ಆಡಳಿತ ಸಮಿತಿಯ ಪದಾಧಿಕಾರಿಗಳನ್ನು ಕದ್ರಿ ಠಾಣೆಗೆ ಕರೆಸಿಕೊಂಡಿರುವ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿರುವುದು ಅಚ್ಚರಿಗಿಂತಲೂ ಆಘಾತಕಾರಿ ವಿದ್ಯಮಾನವಾಗಿದೆ. ಹಾಗಾಗಿ ಮಂಗಳೂರು ಪೊಲೀಸ್ ಕಮಿಷನರ್ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಸ್ಲಿಂ ಸಮುದಾಯದಿಂದ ನೋವು, ಹತಾಶೆಯ ಪ್ರತಿಕ್ರಿಯೆ ಬರುತ್ತಿದ್ದರೂ, ಜಿಲ್ಲೆಯ ಕಾಂಗ್ರೆಸ್ ನಾಯಕತ್ವ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರಕಾರದ ಪ್ರತಿನಿಧಿಗಳದ್ದೂ ಮೌನ ನಿಲುವಾಗಿದೆ. ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಸ್ಲಿಂ ನಾಯಕರ ನಿಯೋಗವು ಪೊಲೀಸ್ ಕಮಿಷನರ್ ಬಳಿ ಮೊಕದ್ದಮೆ ವಾಪಸ್‌ಗೆ ಮನವಿ ಮಾಡಿದ್ದಾರೆ. ಆದರೆ ಇದು ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಮಾತ್ರ ಧ್ವನಿ ಎತ್ತಬೇಕಾದ ಸಂಗತಿಯಲ್ಲ. ಜಿಲ್ಲಾ ಕಾಂಗ್ರೆಸ್ ನಾಯಕತ್ವ ಧ್ವನಿ ಎತ್ತಬೇಕಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.