×
Ad

ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‍ನಿಂದ ಹೊಂದಾಣಿಕೆ ಸ್ಪರ್ಧೆ: ಬಿ.ಎಸ್.ಯಡಿಯೂರಪ್ಪ

Update: 2024-06-24 23:04 IST

ಸುಳ್ಯ: ಮುಂದೆ ನಡೆಯುವ ಜಿ.ಪಂ ಹಾಗೂ ತಾ.ಪಂ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧೆ ನಡೆಸಲು ನಿರ್ಧರಿಸಲಾಗಿದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಿದರೆ ಭ್ರಷ್ಟ ಕಾಂಗ್ರೆಸ್‍ನ್ನು ಅಧಿಕಾರದಿಂದ ಧೂಳೀಪಟ ಮಾಡಲು ಸಾಧ್ಯ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಸುಳ್ಯ ಬಿಜೆಪಿ ಮಂಡಲ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಸ್ಪರ್ಧೆ ಮಾಡಿದ ಕಾರಣ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಸೇರಿ ಮಾಡ ಬೇಕು. ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ರಾಜ್ಯದಲ್ಲಿ 19 ಲೋಕಸಭಾ ಕ್ಷೇತ್ರದಲ್ಲಿ ಎನ್‍ಡಿಎ ಗೆದ್ದು ಉತ್ತಮ ಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿ ಜೆಡಿಎಸ್ ಜಂಟಿ ಚರ್ಚಿಸಿ ಜೊತೆಯಾಗಿ ಪಕ್ಷವನ್ನು ಬಲಪಡಿಸುತ್ತೇವೆ. ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಗೆ ಅತ್ಯಂತ ಹೆಚ್ಚು ಲೀಡ ತಂದುಕೊಟ್ಟ ಕ್ಷೇತ್ರ ಸುಳ್ಯ ಎಂದು ಹೇಳಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಬಿಜೆಪಿಗೆ ಭದ್ರ ಬುನಾದಿ ಹಾಕಿಕೊಟ್ಟ ಸುಳ್ಯದಲ್ಲಿ ಒಂದು ಸ್ವಂತ ಕಟ್ಟಡ ಆಗಬೇಕು ಎಂಬುದು ಹಲವಾರು ದಶಕಗಳ ಕನಸು. ಹಿಂದಿನ ಎಲ್ಲಾ ಅಧ್ಯಕ್ಷರು ಸಂಘಟನೆಯನ್ನು ಬಲಪಡಿಸುವುದರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಜಿಲ್ಲೆಯಲ್ಲಿಯೇ ಸ್ವಂತ ಕಟ್ಟಡವನ್ನು ಸುಳ್ಯ ಮಂಡಲ ಬಿಜೆಪಿಯಲ್ಲಿ ಆಗಿದೆ ಎಂದು ಹೇಳಿದರು.

ಮಾಜಿ ಸಚಿವ ಎಸ್.ಅಂಗಾರ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಡಲ ಪ್ರಭಾರಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಅಟಲ್‍ಜಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ ಕಾರ್ಯಕ್ರಮ ನಿರೂಪಿಸಿದರು.

ಕಚೇರಿಯ ಸ್ಥಳ ನೀಡಿದ ಮಧುಸೂದನ ಕುಂಭಕ್ಕೋಡು ಹಾಗೂ ಲತಾ ಮಧುಸೂದನ್ ಹಾಗೂ ಇದುವರೆಗೆ ಕಚೇರಿ ಕೊಠಡಿ ನೀಡಿದ್ದ ಕೃಷ್ಣ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಿಎಂ. ಬಿ.ಎಸ್. ಯಡಿಯೂರಪ್ಪ ಅವರನ್ನು ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News