×
Ad

ಸುರತ್ಕಲ್: ಹೆದ್ದಾರಿಯ ಗುಂಡಿಗೆ ಬಿದ್ದು ದ್ವಿಚಕ್ರ ವಾಹನ ಸವಾರನಿಗೆ ಗಾಯ

Update: 2024-06-26 22:31 IST

ಸುರತ್ಕಲ್: ಸುರತ್ಕಲ್ ಮುಖ್ಯ ಪೇಟೆಯ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದ ಗುಂಡಿಗೆ ದ್ವಿಚಕ್ರ ಸವಾರರೊಬ್ಬರು ಬಿದ್ದು ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ವರದಿಯಾಗಿದೆ.

ಗುಂಡಿಗೆ ಬಿದ್ದ ವ್ಯಕ್ತಿ ವಾಹನವನ್ನು ಗುಂಡಿಯಲ್ಲೇ ಇಟ್ಟು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು. ತಕ್ಷಣ ಅಲ್ಲೇ ಇದ್ದ ಟ್ರಾಪಿಕ್ ಪೊಲೀಸರು ಸ್ಥಳಕ್ಕೆ ಬಂದು ದ್ಬಿಚಕ್ರ ವಾಹನ ಮತ್ತು ವ್ಯಕ್ತಿಯನ್ನು ಮೇಲೆತ್ತಿ ಚಿಕಿತ್ಸೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ‌.

ಕಳೆದ ವರ್ಷ ಶಾಸಕ ಭರತ್ ಶೆಟ್ಟಿ ಅವರ ಆಪ್ತರೊಬ್ಬರಿಗೆ ಸುರತ್ಕಲ್ - ಕಾನ ರಸ್ತೆ ನಿರ್ಮಾಣ ಟೆಂಡರ್ ನೀಡಲಾಗಿತ್ತು. ಈ ವೇಳೆ ಗುತ್ತಿಗೆದಾರ ಸುರತ್ಕಲ್ - ಕಾನ ರಸ್ತೆ ಸಂಪರ್ಕಿಸುವ ಸುರತ್ಕಲ್ ಪೇಟೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಒಂದು ಪಾಶ್ವ ಅಗೆದು ಕಾಂಕ್ರಿಟ್ ಮಾಡಿಸಿದ್ದರು. ಈ ವೇಳೆ ಅಗೆಯಲಾಗಿದ್ದ ಹೆಚ್ಚುವರಿಗೆ ಗುಂಡಿಗೆ ಹಳೆಯ ರಸ್ತೆಯಿಂದ ಅಗೆದು ತೆಗೆಯಲಾಗಿದ್ದ ಡಾಂಬರು‌ ಮಿಶ್ರಣವನ್ನು ಹಾಕಲಾಗಿತ್ತು. ಬಳಿಕ ಮಳೆಗಾಲ ಆರಂಭವಾದ ಕಾರಣ ವಾಹನ ಸಂಚಾತದಿಂದ ರಸ್ತೆ ಗುಂಡಿಬಿದ್ದಿತ್ತು. ಮಳೆಗಾಲ‌ ಮುಗಿದ ಬಳಿಕ ಮತ್ತೆ ಡಾಂಬರು ಮಿಶ್ರಣವನ್ನು ತುಂಬಿಸಿ ಮೇಲ್ಭಾಗಕ್ಕೆ ಡಾಂಬರೀಕರಣ ಮಾಡಲಾಗಿತ್ತು ಎಂದು ಸಾರ್ವಜನಿಕರು ಹೇಳಿದ್ದಾರೆ.

ಸದ್ಯ ಅದೇ ಸ್ಥಳದಲ್ಲಿ ಈಗ ಮರಣ ಗುಂಡಿಗಳು ನಿರ್ಮಾಣವಾಗಿದ್ದು, ದ್ವಿಚಕ್ರ ಸವಾರರೊಬ್ಬರು ಬೃಹತ್ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದಾಗಿ ಹೊಂಡ ನಿರ್ಮಾಣವಾಗಿದ್ದು, ಇದಕ್ಕೆ ಗುತ್ತಿಗೆದಾರನೆ ನೇರಹೊಣೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸುಸಜ್ಜಿತ ರಸ್ತೆ ಕಾಮಗಾರಿ ನಡೆಸಿ ಶಾಸಕರು ವಾಹನ ಸವಾರರ ಹಿತ ಕಾಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News