ಮನೆ ನಿರ್ಮಾಣದಲ್ಲಿ ಸುರಕ್ಷತೆಗೆ ಆದ್ಯತೆ ನೀಡಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ
ಮಂಗಳೂರು: ಮನೆ ನಿರ್ಮಾಣಕ್ಕೆ ಸಾರ್ವಜನಿಕರು ಸಲ್ಲಿಸುವ ಪ್ಲಾನ್‌ಗೆ ಅನುಮತಿ ನೀಡುವ ಮೊದಲು ಮನೆಯ ಕನಿಷ್ಠ ಸುರಕ್ಷತೆಯನ್ನು ಕಡ್ಡಾಯವಾಗಿ ಖಾತರಿ ಪಡಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕುತ್ತಾರ್ ಮದನಿ ನಗರದಲ್ಲಿ ಮನೆಯ ಮೇಲೆ ತಡೆಗೋಡೆ ಕುಸಿದು ಬಿದ್ದು ನಾಲ್ವರು ಮೃತಪಟ್ಟ ಘಟನಾ ಸ್ಥಳಕ್ಕೆ ಭೇಟಿ ನೀಡದ ಬಳಿಕ ಬುಧವಾರ ರಾತ್ರಿ ಮನಪಾದ ಮಂಗಳಾ ಸಭಾಂಗಣದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಇಂತಹ ದುರಂತಗಳನ್ನು ತಡೆಗಟ್ಟಲು ಯಾಕೆ ಸಾಧ್ಯವಾಗುವುದಿಲ್ಲ ಎನ್ನುವುದರ ಬಗ್ಗೆ ಯೋಚಿಸಬೇಕಾಗಿದೆ. ಜೀವಹಾನಿ ಸಂಭವಿಸಿದರೆ ಅದನ್ನು ಮತ್ತೆ ಪಡೆಯಲು ಸಾಧ್ಯವಾಗುವುದಿಲ್ಲ. ಪರಿಹಾರ ಕೊಟ್ಟರೆ ಕುಟುಂಬಕ್ಕೆ ಆಗಿರುವ ನಷ್ಟವನ್ನು ಭರಿಸಲು ಸಾಧ್ಯವಾಗುವುದಿಲ್ಲ. ಜನರ ಪ್ರಾಣ ರಕ್ಷಣೆ ಮಾಡುವುದು ಸರಕಾರ ಮತ್ತು ಸಮಾಜದ ಕರ್ತವ್ಯವಾಗಿದೆ ಎಂದು ಹೇಳಿದರು.
ಜಿಲ್ಲಾಡಳಿತ, ವಿಪತ್ತು ಘಟಕಗಳು, ಅಗ್ನಿಶಾಮಕ, ಪೊಲೀಸ್ ಸೇರಿದಂತೆ ಹಲವು ಇಲಾಖೆ, ತಂಡಗಳು ಕಾರ್ಯಾಚರಿಸುತ್ತಿ ದ್ದರೂ, ಮಾನವ ನಿರ್ಮಿತ ಪ್ರಾಕೃತಿಕ ದುರ್ಘಟನೆಗಳು ಸಂಭವಿಸುತ್ತಿರುವುದಕ್ಕೆ ಅವರು ಕಳವಳ ವ್ಯಕ್ತಪಡಿಸಿದರು.
ಮಳೆಗಾಲ ಆರಂಭದಲ್ಲಿ ಆಗಿರುವ ಪ್ರಾಕೃತಿಕ ವಿಕೋಪ ಪ್ರಕರಣಗಳು, ಸಂಭಾವ್ಯ ಅನಾಹುತಗಳ ನಿರ್ವಹಣೆಗೆ ಜಿಲ್ಲಾಡಳಿತದ ತಯಾರಿಯ ಬಗ್ಗೆ ಆಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಹಿಂದೆ ತೋಡುಗಳಲ್ಲಿ ಕಾಲು ಸಂಕಗಳನ್ನು ದಾಟುವಾಗ ನೀರು ಪಾಲಾದ ಘಟನೆಗಳು ಇವೆ. ಹೀಗಾಗಿ ಅಪಾಯಕಾರಿ ಕಾಲು ಸಂಕಗಳ ಬಗ್ಗೆ ಎಚ್ಚರವಿರಲಿ, ಭೂ ಕುಸಿತದ ಅನಾಹುತಗಳು ಕಂಡು ಬರುತ್ತದೆ. ಇವುಗಳ ಬಗ್ಗೆ ಗಮನವಿರಲಿ ಎಂದರು.
ವಿಪತ್ತು ನಿರ್ವಹಣೆಗೆ ಪ್ರತಿ ಗ್ರಾಮ ಮಟ್ಟದಲ್ಲಿ ತಂಡ ರಚನೆಯಾಗಬೇಕು. ಸಂಭಾವ್ಯ ದುರ್ಘಟನೆ ತಡೆಗಟ್ಟಲು ವಿಫಲವಾದ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಡಿಸಿಗೆ ಸಲಹೆ ನೀಡಿದರು.
ರಾಜ್ಯ ವಿಪತ್ತು ನಿರ್ವಹಣಾಧಿಕಾರಿ ಲಕ್ಷ್ಮೀ ಮಹೇಶ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ , ಜಿ.ಪಂ ಸಿಇಒ ಡಾ.ಆನಂದ್ ಕೆ, ಡಿಸಿಪಿ ಸಿದ್ದಾರ್ಥ ಗೋಯಲ್, ಮನಪಾ ಆಯುಕ್ತ ಆನಂದ ಸಿಎಲ್ ಉಪಸ್ಥಿತರಿದ್ದರು.