×
Ad

ಭಾರತದ ಭವಿಷ್ಯಕ್ಕೆ ಕೋಮುವಾದ ಬಹಳ ಅಪಾಯ: ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಇಮ್ತಿಯಾಝ್

Update: 2024-06-27 22:36 IST

ಮಂಗಳೂರು: ಕೇಂದ್ರದ ಬಿಜೆಪಿ ಸರಕಾರ ಇಂದು ಫ್ಯಾಸಿಸ್ಟ್ ಮಾದರಿಯಲ್ಲಿ ದೇಶವನ್ನಾಳುತ್ತಿದೆ. ಸಮಾಜದಲ್ಲಾಗುವ ಅನ್ಯಾಯ ದಬ್ಬಾಳಿಕೆಗಳ ವಿರುದ್ಧ ಧ್ವನಿ ಎತ್ತಿದರೆ ಅಂತಹ ಧ್ವನಿಯನ್ನು ಹಿಂಸೆಯ ಮೂಲಕ ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಡಿವೈಎಫ್‌ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದ್ದಾರೆ.

ಶ್ರೀನಿವಾಸ್ ಬಜಾಲ್ ಅವರ 22ನೇ ವರುಷದ ಹುತಾತ್ಮ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ಬಜಾಲ್ ಪರಿಸರದಲ್ಲಿ ನಡೆದ ಸಾಮರಸ್ಯ ಸಭೆ ಮತ್ತು ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿಯ ಆಡಳಿತಾವಧಿಯಲ್ಲಿ ಸಾರ್ವಜನಿಕ ರಂಗದ ಸೊತ್ತುಗಳನ್ನೆಲ್ಲಾ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆದು ಜನವಿರೋಧಿ ನೀತಿಗಳನ್ನೇ ಜಾರಿಗೊಳಿಸಿದೆ.ಇಂತಹ ನೀತಿಗಳಿಂದಾಗಿ ಇಂದು ಜನ ಸಾಮಾನ್ಯರ ಬದುಕು ಬೀದಿ ಪಾಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಿವೈಎಫ್‌ಐನ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಮಾತನಾಡಿ ದೇಶದಾದ್ಯಂತ ಆರ್‌ಎಸ್‌ಎಸ್ ನಡೆಸುವ ಕ್ರೌರ್ಯಕ್ಕೆ ಎದುರಾಗಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ನಡೆದ ಹೋರಾಟದಲ್ಲಿ ಹಲವಾರು ಡಿವೈಎಫ್‌ಐನ ಯುವ ಹೋರಾಟಗಾರರು ತನ್ನ ಪ್ರಾಣವನ್ನು ಮುಡಿಪಾಗಿಟ್ಟು ಹುತಾತ್ಮ ರಾಗಿರುತ್ತಾರೆ. ಇಂತಹ ಹೋರಾಟದ ಪಥದಲ್ಲಿ ಮುನ್ನಡೆದ ಬಜಾಲ್ ಪ್ರದೇಶದ ಡಿವೈಎಫ್‌ಐ ಮುಖಂಡ ಶ್ರೀನಿವಾಸ್ ಬಜಾಲ್ ಕೂಡ ಒಬ್ಬರು ಎಂದರು.

ಸಭೆಯನ್ನು ಉದ್ದೇಶಿಸಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಉಪಾಧ್ಯಕ್ಷ ಡಾ.ಜೀವನ್ ರಾಜ್ ಕುತ್ತಾರ್ ಮಾತನಾಡಿದರು.

ಡಿವೈಎಫ್‌ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್‌ಐ ಜಿಲ್ಲಾ ಮುಖಂಡ ನಿತಿನ್ ಕುತ್ತಾರ್, ಸ್ಥಳೀಯ ಮುಖಂಡ ನಾಗರಾಜ್ ಬಜಾಲ್, ಆನಂದ ಎನೆಲ್ಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಿವೈಎಫ್‌ಐ ನಗರಾಧ್ಯಕ್ಷ ಜಗದೀಶ್ ಬಜಾಲ್ ಸ್ವಾಗತಿಸಿ, ಧೀರಜ್ ಬಜಾಲ್ ವಂದಿಸಿದರು. ಕಾರ್ಯಕ್ರಮದ ನೇತೃತ್ವ ವನ್ನು ಡಿವೈಎಫ್‌ಐ ಪಕ್ಕಲಡ್ಕ ಘಟಕದ ಮುಖಂಡರಾದ ಪ್ರಕಾಶ್ ಶೆಟ್ಟಿ , ಅಶೋಕ್ ಎನೆಲ್‌ಮಾರ್,ಪ್ರೀತೇಶ್ , ದೀಪಕ್ ಬಜಾಲ್, ವರಪ್ರಸಾದ್, ಕೀರ್ತನ್ , ಪ್ರಥಮ್, ಲೋಕೇಶ್ ಎಮ್, ಅಶೋಕ್ ಸಾಲ್ಯಾನ್, ಸಿಂಚನ್ ಮುಂತಾದವರು ವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಡಿವೈಎಫ್‌ಐನ ನೂರಾರು ಕಾರ್ಯಕರ್ತರು ರಕ್ತದಾನ ಮಾಡಿದರು. ಸಾರ್ವಜನಿಕ ಸಭೆಯಲ್ಲಿ ಬಜಾಲ್ ವಿಭಾಗ ಮಟ್ಟದಲ್ಲಿ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News