ಸಂಸದ ಬ್ರಿಜೇಶ್ ಚೌಟರಿಗೆ ಸ್ವಕ್ಷೇತ್ರದಲ್ಲಿ ಭರ್ಜರಿ ಸ್ವಾಗತ
ಮಂಗಳೂರು: ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶನಿವಾರ ಸಂಜೆ ಸ್ವಕ್ಷೇತ್ರಕ್ಕೆ ವಾಪಸಾಗಿರುವ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಬ್ರಿಜೇಶ್ ಚೌಟ ಸಂಜೆ ದಿಲ್ಲಿಂದ ವಿಮಾನದಲ್ಲಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿ ಅವರನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಶಾಲು ಹೊದಿಸಿ ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ಹೊರಟ ಸಂಸದ ಚೌಟರನ್ನು ಪಕ್ಷದ ಕಾರ್ಯಕರ್ತರು ವೈವಿಧ್ಯಮಯ ಹೂಮಾಲೆ ಹಾಕಿ, ಶಾಲು ಹಾಕಿ, ಆರತಿ ಬೆಳಗಿ ಮತ್ತೆ ಸ್ವಾಗತಿಸಿದರು. ಚುನಾವಣೆ ಸಂದರ್ಭ ಚೌಟ ಅವರಿಗೆಂದೇ ಸಿದ್ಧಪಡಿಸಲಾದ ಹಾಡುಗಳಿಗೆ ಕಾರ್ಯಕರ್ತರು ಹೆಜ್ಜೆ ಹಾಕುವುದು ಕಂಡುಬಂತು.
ವಿಜಯೋತ್ಸವ ಮೆರವಣಿಗೆಯಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಹರೀಶ್ ಪೂಂಜಾ ಸಾಥ್ ನೀಡಿದರು. ಮೆರವಣಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ ನಗರದ ಟಿಎಂಎ ಪೈ ಸಭಾಂಗಣ ತನಕ ಸಾಗಿತು.