×
Ad

ವಿದ್ಯುತ್ ಅವಘಡದಿಂದ ಮೃತ್ಯು ಪ್ರಕರಣದ ಬಗ್ಗೆ ವರದಿ ನೀಡಲು ಮೆಸ್ಕಾಂ ಎಂಡಿಗೆ ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2024-06-29 22:11 IST

 ಮುಲ್ಲೈ ಮುಗಿಲನ್

ಮಂಗಳೂರು: ದ.ಕ.ಜಿಲ್ಲೆಯಲ್ಲಿ ವಿದ್ಯುತ್ ಅವಘಡದಿಂದ 3 ಪ್ರಾಣ ಹಾನಿ ಸಂಭವಿಸಿದ್ದು, ಈ ಬಗ್ಗೆ ಪರಿಶೀಲಿಸಿಕೊಂಡು ವರದಿ ನೀಡುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.

ಮೆಸ್ಕಾಂ ಹಿರಿಯ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ವಿಶೇಷ ನಡೆಸಿರುವ ಅವರು 1600 ಮೀಟರ್ ಬಾಕ್ಸ್‌ಗಳಲ್ಲಿ 2 ದಿನಗಳೊಳಗಾಗಿ ಟಿಪ್ಪರ್‌ಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಮರಗಳ ರೆಂಬೆ -ಕೊಂಬೆಗಳಿಗೆ ತಾಗಿಕೊಂಡಂತೆ ಹಾದು ಹೋಗುವ ವಿದ್ಯುತ್ ತಂತಿಗಳು ಮತ್ತು ಕಂಬಗಳು ಇರುವ ಪ್ರದೇಶಗಳನ್ನು 2 ದಿನಗಳಲ್ಲಿ ಗುರುತಿಸಿ ಇದನ್ನು ಅರಣ್ಯ ಇಲಾಖೆಯ ಸಹಯೋಗದಿಂದ ರೆಂಬೆಗಳನ್ನು ತೆರವುಗೊಳಿಸಿದ ಬಗ್ಗೆ ವರದಿ ನೀಡುವಂತೆ ಆದೇಶ ನೀಡಿದ್ದಾರೆ.

ದಾರಿದೀಪಗಳ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಲಿಕೇಜ್ ಟೆಸ್ಟ್‌ನ್ನು ಮೆಸ್ಕಾಂ ಹಾಗೂ ಮಂಗಳೂರು ಮಹಾ ನಗರ ಪಾಲಿಕೆ ಯವರು ಜಂಟಿಯಾಗಿ ನಡೆಸಬೇಕು. ವಿದ್ಯುತ್ ಅವಘಡ ಸಂಭವಿಸದಂತೆ ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳನ್ನು ಖುದ್ದಾಗಿ ಹೋಗಿ ಪರಿಶೀಲಿಸಲಾಗಿದ್ದು, ಮಳೆಗಾಲದ ಸಂದರ್ಭಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಹೆದ್ದಾರಿಯಿಂದ ಮಳೆ ನೀರು ಹೋಗಲು ಚರಂಡಿ ಕಾಮಗಾರಿ ವ್ಯವಸ್ಥೆಯನ್ನು ತುರ್ತಾಗಿ ಕೈಗೊಂಡು ವರದಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಎಲ್ಲ ‘ಇನ್ಸ್‌ಡೆಂಟ್ ಕಮಾಂಡರ್’ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ದೂರವಾಣಿಗಳು ವಾರದ 24*7 ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು. ವಿಪತ್ತು ಸಮಯದಲ್ಲಿ ಸಾರ್ವಜನಿಕರಿಂದ ದೂರುಗಳ ಕರೆಯನ್ನು ಸ್ವೀಕರಿಸಿ ಅಗತ್ಯದ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ದೂರವಾಣಿ ಸಂಪರ್ಕಕಕ್ಕ ಸಂಬಂಧಿಸಿದಂತೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ದೂರ ಸಂಪರ್ಕ ಇಲಾಖೆ ಹಾಗೂ ವಿವಿಧ ಕಂಪೆನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News