×
Ad

ಮೂಲ ದಾಖಲೆ ಹಿಂದಿರುಗಿಸದ ಬ್ಯಾಂಕ್‌ಗೆ ದಂಡ: ದ.ಕ.ಜಿಲ್ಲಾ ಗ್ರಾಹಕರ ವೇದಿಕೆ ಆದೇಶ

Update: 2024-07-15 22:10 IST

ಮಂಗಳೂರು,ಜು.15: ಸಾಲದ ಭದ್ರತೆಯಾಗಿ ಮಹಿಳೆ ನೀಡಿದ್ದ ಮೂಲ ದಾಖಲೆಗಳನ್ನು ಹಿಂದಿರುಗಿಸದ ಬ್ಯಾಂಕ್ 53.14 ಲ.ರೂ. ವನ್ನು ಮಹಿಳೆಗೆ ಪಾವತಿಸಬೇಕು ಎಂದು ದ.ಕ ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ನೀಡಿದೆ.

ಮಂಗಳೂರು ತಾಲೂಕಿನ ಕೆಂಜಾರಿನ ಸುನೀತಾ ಲಕ್ಷ್ಮಣ್ ಪೂಜಾರಿ ಎಂಬವರು ಕಂಕನಾಡಿಯಲ್ಲಿರುವ ಐಡಿಬಿಐ ಬ್ಯಾಂಕ್‌ನಿಂದ 12 ಲ.ರೂ.ವನ್ನು ಗೃಹಸಾಲವನ್ನಾಗಿ ಪಡೆದಿದ್ದರು. ಸಾಲಕ್ಕೆ ಪ್ರತಿಯಾಗಿ ತನ್ನ ಮನೆಯ ಎಲ್ಲ ಮೂಲ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ಜಮೆ ಮಾಡಿದ್ದರು. ಸಾಲದ ಮರುಪಾವತಿಯನ್ನು ನಿಗದಿತ ಅವಧಿಯ ಮುಂಚಿತವಾಗಿಯೇ ಮರುಪಾವತಿ ಮಾಡಿದ ಬಳಿಕ ತನ್ನ ಮಗಳಿಗೆ ಶಿಕ್ಷಣದ ಸಲುವಾಗಿ 9.90 ಲ.ರೂ. ಸಾಲ ಪಡೆದಿದ್ದರು. ಅದಕ್ಕೆ ಬ್ಯಾಂಕ್‌ನವರು ಭದ್ರತೆಯಾಗಿ ಮನೆಯ ಮೂಲ ದಾಖಲೆಗಳನ್ನು ವಶದಲ್ಲಿರಿಸಿಕೊಂಡಿದ್ದರು ಎನ್ನಲಾಗಿದೆ.

ತಾನು ಅವಧಿಗೆ ಮುಂಚೆಯೇ ಶಿಕ್ಷಣ ಸಾಲವನ್ನು ಮರುಪಾವತಿ ಮಾಡಿದ್ದೆ. ಆದರೆ ಬ್ಯಾಂಕ್‌ನವರು ಮೂಲ ದಾಖಲೆಗಳನ್ನು ಹಿಂದಿರುಗಿಸಲಿಲ್ಲ. ಅದಕ್ಕಾಗಿ ತಾನು ಪದೇ ಪದೇ ಬ್ಯಾಂಕ್‌ಗೆ ಅಲೆದಾಡಿದರೂ ಬ್ಯಾಂಕ್‌ನವರು ಸುಳ್ಳು ಕಾರಣಗಳನ್ನು ನೀಡಿ ವಾಪಸ್ ಕಳುಹಿಸುತ್ತಿದ್ದರು ಎಂದು ಸುನೀತಾ ಆರೋಪಿಸಿದ್ದರು.

ತನ್ನ ಮೂಲ ದಾಖಲೆಗಳು ಬ್ಯಾಂಕ್‌ನಲ್ಲಿ ಬೆಂಕಿಗಾಹುತಿಯಾಗಿದೆ ಎಂದ ಕಾರಣ ಸುನೀತಾ ದ.ಕ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ನ್ಯಾಯಲಯವು ಪ್ರಕರಣವನ್ನು ಪರಿಶೀಲಿಸಿ ಐಡಿಬಿಐ ಬ್ಯಾಂಕ್‌ನವರು ಆಸ್ತಿಯ ಮೂಲ ದಾಖಲೆಗಳನ್ನು ಹಿಂದಿರುಗಿಸದ್ದಕ್ಕೆ ಸುನೀತಾರಿಗೆ 48,14,980 ರೂ. ಪಾವತಿಸಬೇಕು. ಅಲ್ಲದೆ ಪರಿಹಾರ ಧನವಾಗಿ 5 ಲ.ರೂ.ಗಳನ್ನು ನೀಡಬೇಕು ಎಂದು ಆದೇಶ ನೀಡಿದೆ. ದೂರುದಾರರ ಪರವಾಗಿ ಮಂಗಳೂರಿನ ನ್ಯಾಯವಾದಿಗಳಾದ ಚಂದ್ರಹಾಸ್ ಕದ್ರಿ ಮತ್ತು ದೀನನಾಥ ಶೆಟ್ಟಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News