ಸುರತ್ಕಲ್: ಭಾರೀ ಗಾಳಿ ಮಳೆಗೆ ಅಪಾರ ಹಾನಿಗೀಡಾಗಿದ್ದ ಪ್ರದೇಶಕ್ಕೆ ಇನಾಯತ್ ಅಲಿ ಭೇಟಿ
ಸುರತ್ಕಲ್: ಕರಾವಳಿಯಾದ್ಯಂತ ಸುರಿದ ಭಾರೀ ಗಾಳಿ ಮಳೆಗೆ ಅಪಾರ ಹಾನಿಗೀಡಾಗಿದ್ದ ಮಂಗಳೂರು ತಾಲೂಕು ಸುರತ್ಕಲ್ ಹೋಬಳಿಯ ಕಾಟಿಪಳ್ಳ ಗ್ರಾಮಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಶನಿವಾರ ಭೇಟಿ ನೀಡಿದರು.
ಹಾನಿಗೀಡಾಗಿರುವ ಸುಮಾರು 30 ಮನೆಗಳಿಗೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ಅವರು, ತನ್ನ ಐ ಅಯಾಮ್ ( i am) ಫೌಂಡೇಶನ್ ವತಿಯಿಂದ ಸಂತ್ರಸ್ತರಿಗೆ ಪರಿಹಾರದ ಧನವನ್ನು ಹಸ್ತಾಂತರಿಸಿದರು.
ಮಳೆಹಾನಿಯಿಂದ ಸಂಪೂರ್ಣ ಜಖಂಗೊಂಡಿದ್ದ ಕಾರುಣ್ಯ ವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಇನಾಯತ್ ಅಲಿ, ಶಾಲೆಯ ಮುಖ್ಯಸ್ಥರಲ್ಲಿ ಚರ್ಚೆ ನಡೆಸಿದಿರು. ಸರಕಾರದಿಂದ ಅತೀ ಹೆಚ್ಚಿನ ಪರಿಹಾರವನ್ನು ಕಲ್ಪಿಸುವ ಬಗ್ಗೆ ಭರವಸೆ ನೀಡಿದರು. ಇನ್ನೂ, ಹೆಂಚು ಬಿದ್ದು ಗಾಯಗೊಂಡಿದ್ದ ಕಾರುಣ್ಯ ವಿದ್ಯಾಲಯದ ವಿದ್ಯಾರ್ಥಿನಿ ಆಯಿಶಾ ಹೈಝಾಳ ನಿವಾಸಕ್ಕೆ ತೆರಳಿ ಸಾಂತ್ವನದ ಜೊತೆಗೆ ವೈದ್ಯಕೀಯವೆಚ್ಚ ಹಾಗೂ ಪರಿಹಾರದ ಮೊತ್ತ ಹಸ್ತಾಂತರಿಸಿದರು.
ಸ್ಥಳಕ್ಕೆ ಆರ್‌ಐ ಅವರನ್ನು ಕರೆಸಿಕೊಂಡು ಸುರತ್ಕಲ್ ಹೋಬಳಿಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು. ಮತ್ತು ಈ ಸಂಬಂಧ ಸೋಮವಾರದ ಒಳಗಾಗಿ ಕ್ರಮ ವಹಿಸುವಂತೆ ಸೂಚನೆ ನೀಡಿದರು. ಅಲ್ಲದೆ, ಮೆಸ್ಕಾಂ ಅಧಿಕಾರಿ ಗಳೊಂದಿಗೆ ಮಾತನಾಡಿದ ಇನಾಯತ್ ಅಲಿ, ಸರಕಾರದ ಮಟ್ಟದಿಂದ ಎಲ್ಲಾ ರೀತಿಯ ಸಹಾಯವನ್ನು ನೀಡಲಾಗು ವುದು, ಸೋಮವಾರದ ಒಳಗಾಗಿ ಕಾಟಿಪಳ್ಳ ಗ್ರಾಮಕ್ಕೆ ವಿದ್ಯುತ್ ಸರಬರಾಜಾಗುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿರು.
ಈ ಸಂದರ್ಭ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಶಮೀರ್ ಕಾಟಿಪಳ್ಳ, ಮಾಜಿ ಕಾರ್ಪೊರೇಟರ್ ಗುಲ್ಝಾರ್ ಬಾನು, ಅಯಾಝ್ ಕೃಷ್ಣಾಪುರ, ಸತ್ತಾರ್ ಕೃಷ್ಣಾಪುರ, ಮೂಡಾ ಸದಸ್ಯ ಅಬ್ದುಲ್ ಜಲೀಲ್ ಬದ್ರಿಯಾ, ವಲಯ ಅಧ್ಯಕ್ಷ ಕಮಲ್ ಚೊಕ್ಕಬೆಟ್ಟು, ಯೂಸೂಫ್ ಹೈವೆ, ಮೊಯ್ದೀನ್ ಚೊಕ್ಕಬೆಟ್ಟು, ಮನಪಾ ನಾಮನಿರ್ದೇಶಿತ ಸದಸ್ಯ ಕಿಶೋರ್ ಶೆಟ್ಟಿ ಮೊದಲಾದವರು ಇದ್ದರು.