×
Ad

ಶಿಕ್ಷಣದ ಮೂಲಕ ಮಾತ್ರ ಬಲಿಷ್ಠ ದೇಶವನ್ನು ಕಟ್ಟುವುದಕ್ಕೆ ಸಾಧ್ಯ: ಸ್ಪೀಕರ್ ಯು.ಟಿ. ಖಾದರ್

Update: 2024-07-27 22:30 IST

ಪುತ್ತೂರು: ಶಿಕ್ಷಣದ ಮೂಲಕ ಮಾತ್ರ ಬಲಿಷ್ಠ ದೇಶವನ್ನು ಕಟ್ಟುವುದಕ್ಕೆ ಸಾಧ್ಯವಿದೆ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಮಕ್ಕಳಿಗೆ ಮಾನವೀಯತೆ, ಸಹೋದರತ್ವ ತುಂಬಿದ ಮೌಲ್ಯಾಧಾರಿತ ಶಿಕ್ಷಣ ನೀಡುವುದೇ ನಿಜವಾದ ದೇಶಪ್ರೇಮವಾಗಿದೆ ಎಂದು ಕರ್ನಾಟಕ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಪುತ್ತೂರು ನೆಹರುನಗರದ ಸುಧಾನ ವಿದ್ಯಾಸಂಸ್ಥೆಯಲ್ಲಿ ಶನಿವಾರ ನೂತನ ಪದವಿಪೂರ್ವ ಕಾಲೇಜ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಡತನದಿಂದ ದೂರವಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ. ನೀವು ಉತ್ತಮ ಶಿಕ್ಷಣ ಪಡೆದರೆ ನಾವು ಮಾತ್ರವಲ್ಲ ನಮ್ಮ ಕುಟುಂಬವೂ ಉನ್ನತ ಸ್ಥಾನ ಪಡೆದುಕೊಳ್ಳುತ್ತದೆ. ಮಕ್ಕಳ ಶೈಕ್ಷಣಿಕ ಸಂತಸದಲ್ಲಿ ತಂದೆತಾಯಿ ಕೂಡಾ ಉತ್ಸಾಹದಿಂದ ಭಾಗವಹಿಸಬೇಕು. ನಮಗೆ ಬೀಚ್, ಉದ್ಯಾನವನ, ಜಾತ್ರೆಗಳಿಗೆ ಮಕ್ಕಳೊಂದಿಗೆ ಹೋಗಲು ಪುರುಸೊತ್ತು ಇರುವುದು ನಿಜವಾದರೆ ಮಕ್ಕಳ ಶಾಲೆಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಲು ಯಾಕೆ ಸಮಯ ಸಿಗುವುದಿಲ್ಲ ಎಂದು ಪೋಷಕರನ್ನು ಪ್ರಶ್ನಿಸಿದ ಅವರು ಶಿಕ್ಷಣದ ಜತೆಗೆ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಕೇವಲ ಅಂಕ ಮಾತ್ರವಲ್ಲ ನಿಮ್ಮ ವ್ಯಕ್ತಿತ್ವವೂ ನಿಮ್ಮ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಭಾರತದಂತಹ ಸಂವಿಧಾನ ಬೇರೆ ಯಾವ ದೇಶಕ್ಕೆ ಹೋದರೂ ಸಿಗುವುದು ಸಾಧ್ಯವಿಲ್ಲ. ಸುಧಾನದಂತಹ ಶಿಕ್ಷಣ ಸಂಸ್ಥೆಗಳಿಂದ ಹೊರಬರುವಾಗ `ದೇಶದ ಸಂಪತ್ತು' ಗಳಾಗಿ ಹೊರಬನ್ನಿ. ನಿಮ್ಮ ಜತೆಗೆ ಮಾನವೀಯತೆ ಇರಲಿ, ತಾಳ್ಮೆ ಇರಲಿ. ನೀವಾಡುವ ಮಾತು ಮಾಡುವ ಕೆಲಸ ದೇಶದ ಹಿತ ಕಾಯುವಿಕೆಗೆ ಪೂರಕವಾಗಬೇಕು. ಯಾವುದೇ ಸಂದರ್ಭ ದಲ್ಲೂ ಮಾರಕವಾಗಬಾರದು. ಉತ್ತಮ ರಾಜಕಾರಣಿಗಳಾಗಿ. ಹೆಣ್ಣುಮಕ್ಕಳಿಗೆ ನಾಯಕತ್ವ ಗುಣ ಹುಟ್ಟು ಕೊಡುಗೆಯಾ ಗಿದೆ. ತನ್ನ ಹುಟ್ಟಿದ ಮನೆಯಲ್ಲಿ ಈ ನಾಯಕತ್ವ ಗುಣ ಬೆಳೆಯುತ್ತದೆ. ಪತಿಯ ಮನೆಯಲ್ಲಿ ಈ ಗುಣ ಮತ್ತಷ್ಟು ಮೌಲ್ಯ ಪಡೆದುಕೊಳ್ಳುತ್ತದೆ. ನಾವಿಡುವ ಒಂದು ಚಿಕ್ಕ ಹೆಜ್ಜೆ ಶೈಕ್ಷಣಿಕ ಕ್ರಾಂತಿಯ ದೊಡ್ಡ ಹೆಜ್ಜೆಯಾಗಬೇಕು. ಶೈಕ್ಷಣಿಕ ನೆಲೆಯಿಂದ ಹೊರಬಂದಾಗ ಉತ್ತಮ ವೈದ್ಯ, ವಕೀಲ, ಎಂಜಿನಿಯರ್ ಗಳಾಗಿ, ಜತೆಗೆ ಉತ್ತಮ ರಾಜಕಾರಣಿಗಳಾಗಿ ಯಾಕೆಂದರೆ ಸಮಾಜವನ್ನು ಸುಧಾರಿಸುವ ಕಾರ್ಯ ರಾಜಕಾರಣಿಗಳಿಂದ ಮಾತ್ರ ಸಾಧ್ಯ. ಯುವಜನತೆ ಶಿಕ್ಷಣದ ಜತೆಗೆ ಸಾಹಿತ್ಯದತ್ತ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಯುವ ಜನತೆಯೆ ಕೊರತೆ ಎದ್ದುಕಾಣುತ್ತಿದೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸುಧಾನ ಶಿಕ್ಷಣ ಸಂಸ್ಥೆಗಳ ಸಮಿತಿ ಅಧ್ಯಕ್ಷ ರೆ. ವಿಜಯ ಹಾರ್ವಿನ್ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಮಂಗಳೂರು ಯುನಿವರ್ಸಿಟಿಯ ಉಪನಿರ್ದೇಶಕ ಜಯಣ್ಣ, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಧಾನ ವಿದ್ಯಾಸಂಸ್ಥೆಗಳ ಆಡಳಿತ ಸಮಿತಿಯ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸುಧಾನ ಪದವಿಪೂರ್ವ ಕಾಲೇಜಿನ ಸುಪ್ರೀತ್ ಕೆ.ಸಿ ವಂದಿಸಿದರು. ಶಿಕ್ಷಕಿಯರಾದ ಕ್ಯಾರಲ್ ಫೆರ್ನಾಂಡೀಸ್ ಮತ್ತು ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News