ಬಜ್ಪೆ: ದೋಣಿಯಲ್ಲಿ ತೆರಳಿ ವಿದ್ಯುತ್ ಸಮಸ್ಯೆ ಸರಿಪಡಿಸಿದ ಮೆಸ್ಕಾಂ ಸಿಬ್ಬಂದಿ
Update: 2024-07-28 22:31 IST
ಬಜ್ಪೆ: ಇಲ್ಲಿಗೆ ಸಮೀಪದ ಅದ್ಯಪಾಡಿಯಲ್ಲಿ ಜಲದಿಗ್ಭಂದನಕ್ಕೊಳಗಾಗಿದ್ದ ಪ್ರದೇಶಗಳಲ್ಲಿ ಮೆಸ್ಕಾಂ ಸಿಬ್ಬಂದಿ ದೋಣಿಯಲ್ಲಿ ಹೋಗಿ ವಿದ್ಯುತ್ ದುರಸ್ತಿಗೊಳಿಸಿದ ಘಟನೆ ಶನಿವಾರ ವರದಿಯಾಗಿದೆ.
ಮೆಸ್ಕಾಂ ಕಾವೂರು ಉಪವಿಭಾಗದ ಬಜ್ಪೆ ಅದ್ಯಪಾಡಿ ಕುದ್ರು ಎಂಬಲ್ಲಿ ಮರ ಬಿದ್ದು ವಿದ್ಯುತ್ ತಂತಿ ತುಂಡಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಮೆಸ್ಕಾಂ ಗೆ ದೂರು ನೀಡಿದ್ದರು.
ಅದರಂತೆ ನೆರೆ ನೀರಿನಿಂದ ಆವೃತ್ತವಾಗಿದ್ದ ಅದ್ಯಪಾಡಿ ಕುದ್ರುಗೆ ಬಜ್ಪೆ ವಿಭಾಗದ ಮೆಸ್ಕಾಂ ಸಿಬ್ಬಂದಿ ಬೋಜಣ್ಣ ಅವರು ದೋಣಿಯ ಮೂಲಕ ತೆರಳಿ ತುಂಡಾಗಿದ್ದ ವಿದ್ಯುತ್ ತಂತಿಯನ್ನು ಜೋಡಿಸಿ ದುರಸ್ತಿಪಡಿಸಿದರು ಎಂದು ತಿಳಿದು ಬಂದಿದೆ.
ಮೆಸ್ಕಾಂ ಸಿಬ್ಬಂದಿ ಬೋಜಣ್ಣ ಅವರ ಕಾರ್ಯವನ್ನು ಗ್ರಾಮಸ್ತರು ಶ್ಲಾಘಿಸಿದ್ದಾರೆ.