×
Ad

ಮರ್ಕಂಜ: ಕಾಣೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

Update: 2024-09-28 22:10 IST

ಸುಳ್ಯ: ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಮರ್ಕಂಜದಲ್ಲಿ ನಡೆದಿದೆ.

ಮರ್ಕಂಜದ ಮಿತ್ತಡ್ಕದ ಮೋಹನ ಎಂಬವರ ಪತ್ನಿ ಶೋಭಾಲತಾ (35) ಸೆ. 24 ರಂದು ಮಧ್ಯಾಹ್ನ ಮನೆಯಿಂದ ಕಾಣೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಅನುಮಾನದಿಂದ ಅವರ ಮನೆಯ ಬಳಿಯ ಬಾವಿಯಲ್ಲಿ ಹುಡುಕಲು ಆರಂಭಿಸಲಾಗಿತ್ತು. ಆರಂಭದಲ್ಲಿ ನೀರು ಆರಿಸಿ ಹುಡುಕುವ ಪ್ರಯತ್ನ ಮಾಡಿದಾಗ ಬಾವಿಯ ಒಳ ಭಾಗದಲ್ಲಿ ಮಣ್ಣು ಕುಸಿಯ ತೊಡಗಿತು. ಹೀಗಾಗಿ ಹುಡುಕುವ ಪ್ರಯತ್ನ ನಿಲ್ಲಿಸಲಾಯಿತು. ಬಳಿಕ ಅಗ್ನಿಶಾಮಕ ದಳದವರು ಬಂದು ಸಲಕರಣೆ ಹಾಕಿ ಹುಡುಕತೊಡಗಿದರು. ಅಲ್ಲದೇ ಕ್ಯಾಮರಾ ಇಳಿಸಿಯೂ ಶೋಧಿಸಲಾಯಿತು. ಆದರೂ ಪತ್ತೆಯಾಗಲಿಲ್ಲ. ಬಾವಿಯಲ್ಲೇ ಇರುವ ಸಂಶಯ ಧೃಢವಾದ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರ ಸಹಕಾರದಿಂದ ಸುಳ್ಯ ತಹಶೀಲ್ದಾರರ ಸೂಚನೆಯಂತೆ ಬಾವಿಯನ್ನು ಒಂದು ಕಡೆಯಿಂದ ಅಗೆದು ಬಾವಿಯೊಳಗಿನ ಮಣ್ಣು ತೆಗೆಯುವ ಕಾರ್ಯಚರಣೆ ಶುಕ್ರವಾರ ಬೆಳಿಗ್ಗೆಯಿಂದ ಆರಂಭಿಸಲಾಯಿತು. ಶನಿವಾರ ಮಣ್ಣು ತೆಗೆದ ಬಳಿಕ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದವರು ಬಾವಿಯೊಳಗೆ ಇಳಿದು ಹುಡುಕುವ ಕಾರ್ಯಚರಣೆ ಆರಂಭಿಸಿದಾಗ ಮೃತದೇಹ ಪತ್ತೆಯಾಗಿದೆ. ಬಾವಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ, ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News