×
Ad

ಮಂಗಳೂರು: ʼನಾರಿಯರ ಸಂಭ್ರಮದ ಓಟ-ನಡಿಗೆʼ

Update: 2024-09-29 21:42 IST

ಮಂಗಳೂರು, ಸೆ.29: ನಗರದ ನಾರಿ ಕ್ಲಬ್ ರವಿವಾರ ನಗರದಲ್ಲಿ ಆಯೋಜಿಸಿದ್ದ ಓಟ ಮತ್ತು ನಡಿಗೆಯಲ್ಲಿ ನಾರಿಯರು ಸಂಭ್ರಮದಿಂದ ಪಾಲ್ಗೊಂಡರು.

ನಾರಿಯರು ವಿಭಿನ್ನ ಶೈಲಿಯ, ಬಣ್ಣ ಬಣ್ಣದ ಸೀರೆಯುಟ್ಟು ಉರ್ವದ ಕೆನರಾ ಶಾಲೆಯ ಮೈದಾನದಿಂದ ಆರಂಭಗೊಂಡ ಓಟ ಮತ್ತು ನಡಿಗೆಯು ಮಣ್ಣುಗುಡ್ಡ ಗುರ್ಜಿ, ದುರ್ಗಾಮಾಲ್, ಬಲ್ಲಾಳ್‌ಬಾಗ್ ವೃತ್ತದ ಮೂಲಕ ಮಂಗಳೂರು ನಗರ ಪಾಲಿಕೆ ಕಚೇರಿ ಬದಿಯ ರಸ್ತೆ ಮೂಲಕ ಸಾಗಿ ಮತ್ತೆ ಶಾಲೆಯ ಮೈದಾನ ತಲುಪಿದರು.

ಮೊದಲು ಜುಂಬಾ ಡ್ಯಾನ್ಸ್‌ನಲ್ಲಿ ಪಾಲ್ಗೊಂಡ ಸ್ಪರ್ಧಾಳುಗಳು ತಾಳ್ಮೆಯ ಹೆಜ್ಜೆಗಳನ್ನಿರಿಸಿದರು. ಬಳಿಕ ಸ್ಪರ್ಧೆಯಲ್ಲೂ ಅದೇ ಲಯ ಕಾಪಾಡಿಕೊಂಡರು. ರವಿವಾರ ಹೃದಯದ ದಿನವೂ ಆದ ಕಾರಣ ನಾರಿಯರ ಕೈಯಲ್ಲಿ ಹೃದಯದ ಸಂಕೇತವಿರುವ ಬಲೂನ್‌ಗಳು ರಾರಾಜಿಸುತ್ತಿತ್ತು.

ಓಟದಲ್ಲಿ ಯೆನೆಪೋಯ ದಂತ ವೈದ್ಯಕೀಯ ಆಸ್ಪತ್ರೆಯ ಡಾ.ಅನ್ನಪೂರ್ಣಾ ರಾವ್ ಪ್ರಥಮ ಮತ್ತು ಮಂಗಳೂರಿನ ಪ್ರಿಯಾಂಕಾ ದ್ವಿತೀಯ ಹಾಗೂ ಬಂಟ್ವಾಳದ ರೋಹಿಣಿ ಬಿ. ತೃತೀಯ ಸ್ಥಾನ ಗಳಿಸಿದರು. ಇವರಿಗೆ ಕ್ರಮವಾಗಿ 3,500 ರೂ., 2,500 ರೂ.,1,500 ರೂ. ಬಹುಮಾನ ನೀಡಲಾಯಿತು. ನಡಿಗೆಯಲ್ಲಿ ಸ್ಪರ್ಧೆ ಇರಲಿಲ್ಲ. ಓಟ ಹಾಗೂ ನಡಿಗೆಯಲ್ಲಿ ಪಾಲ್ಗೊಂಡ ಎಲ್ಲರೂ ಪದಕ ಮತ್ತು ಪ್ರಮಾಣಪತ್ರ ಪಡೆದುಕೊಂಡರು.

ಸ್ಪ್ರಿಂಟರ್, ಭಾರತ ಮಹಿಳೆಯರ ರಿಲೆ ಮತ್ತು ಮಿಶ್ರ ರಿಲೆ ತಂಡದ ಸದಸ್ಯೆ ಎಂ.ಆರ್.ಪೂವಮ್ಮ ಸ್ಪರ್ಧೆಗೆ ಚಾಲನೆ ನೀಡಿದರು. ಈ ಸಂದರ್ಭ ಪೂವಮ್ಮ ಮತ್ತು ಮೂವರು ಸಾಧಕಿಯರನ್ನು ಗೌರವಿಸಲಾಯಿತು. ಹೆಚ್ಚು ಸ್ಪರ್ಧಿಗಳನ್ನು ನೋಂದಣಿ ಮಾಡಿಸಿದ ಯೂನಿಯನ್ ಬ್ಯಾಂಕ್ ಮತ್ತು ಬ್ರಿಗೇಡ್ ಪಿನಾಕಲ್ ಅಪಾರ್ಟ್‌ಮೆಂಟ್‌ಗೆ ಬಹುಮಾನ ನೀಡಲಾಯಿತು.

ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕಿ ರೇಣು ನಾಯರ್, ಎಜೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸ್ವಾತಿ, ಯೂನಿಯನ್ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ರಾಜಾಮಣಿ ಮತ್ತು ನಾರಿ ಕ್ಲಬ್‌ನ ರಾಜೇಶ್ ರಾಮಯ್ಯ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News