×
Ad

ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಅಧಿಕಾರಿಗಳು: ಸಂಸದರಿಂದ ತರಾಟೆ

Update: 2024-12-26 21:38 IST

ಮಂಗಳೂರು: ಯೋಜನಗೆಳ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಲು ತಡಕಾಡಿದ ಅಧಿಕಾರಿಗಳನ್ನು ಸಂಸದ ಬ್ರಿಜೇಶ್ ಚೌಟ ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ದ.ಕ. ಜಿಲ್ಲಾ ಬ್ಯಾಂಕ್‌ಗಳ ಪರಿಶೀಲನ ಸಮಿತಿ ಸಭೆಯಲ್ಲಿ ಕಂಡು ಬಂತು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆ ನಡೆಸಿ ಇಲಾಖೆಯ ಅಧಿಕಾರಿಯ ಬಳಿ ಯೋಜನೆಯ ಪ್ರಗತಿ ಕುರಿತಂತೆ ಪ್ರಶ್ನಿಸಿದರು. ಈ ವೇಳೆ ಅಧಿಕಾರಿಯು ಅಂಕಿ-ಅಂಶ ಸಹಿತ ಉತ್ತರ ನೀಡಲು ತಡಕಾಡಿದರಲ್ಲದೆ ಜಿಲ್ಲೆಯಲ್ಲಿ 8900 ಅರ್ಜಿಗಳು ಸಲ್ಲಿಕೆಯಾಗಿದ್ದು, 3950 ಮಂದಿಯ ತರಬೇತಿ ಪೂರ್ಣ ಗೊಂಡಿದೆ ಎಂದಷ್ಟೇ ಪ್ರತಿಕ್ರಿಯಿಸಿದರು. ಇದರಿಂದ ಅಸಮಾಧಾನಗೊಂಡ ಸಂಸದರು ಸಂಪೂರ್ಣ ಮಾಹಿತಿಯಿಲ್ಲದೆ ಸಭೆಗೆ ಹಾಜರಾಗಿದ್ದು ಯಾಕೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಲ್ಲದೆ ಪಿ.ಎಂ. ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸುವಂತೆ ಜಿಪಂ ಸಿಇಒ ಡಾ. ಆನಂದ್‌ಗೆ ಸೂಚಿಸಿದರು.

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಕಾರ್ಯಾಗಾರ ಜ.2ರಂದು ಕಾವೂರಿನಲ್ಲಿ ನಡೆಯಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಮೆಸ್ಕಾಂ ಮತ್ತು ಬ್ಯಾಂಕ್‌ಗಳು ಜಂಟಿಯಾಗಿ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಸಂಸದ ಬ್ರಿಜೇಶ್ ಚೌಟ ಸೂಚಿಸಿದರು.

ಪ್ರಧಾನಮಂತಿ ಜನ್-ಧನ್ ಯೋಜನೆ ಯೋಜನೆಯಲ್ಲಿ ನಿಗದಿತ ಗುರಿ ಸಾಧನೆ ಇನ್ನೂ ಆಗದಿರುವ ಬಗ್ಗೆ ಸಿಇಒ ಡಾ. ಆನಂದ್ ಅಸಮಧಾನ ವ್ಯಕ್ತಪಡಿಸಿದರು. ರೇಷನ್‌ಕಾರ್ಡ್ ಮತ್ತು ಆಧಾರ್ ಕಾರ್ಡ್ ಮಾಹಿತಿಗಳನ್ನು ಪರಿಶೀಲಿಸಿ ಯಾರು ಖಾತೆ ಮಾಡಿಸಿಲ್ಲ ಎಂದು ತಿಳಿದು ಖಾತೆ ಮಾಡಿಸಬೇಕು, ಶಿಬಿರಗಳನ್ನೂ ಆಯೋಜಿಸಬೇಕು ಎಂದು ಸೂಚಿಸಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಎನ್. ಶೆಟ್ಟಿ ಮಾತನಾಡಿ, ಯೋಜನೆಯಡಿ ಜಿಲ್ಲೆಯಲ್ಲಿ ಸೆ.30ರ ವರೆಗೆ 24582 ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ ಎಂದರು.

ಆರ್‌ಬಿಐ ಬೆಂಗಳೂರು ಎಜಿಎಂ ಅರುಣ್ ಕುಮಾರ್ ಪಿ. ಮಾತನಾಡಿ, ಪಿಎಂ ಎಸ್‌ಬಿವೈನಲ್ಲಿ ಜಿಲ್ಲೆ ರಾಜ್ಯದಲ್ಲಿ 13ನೇ ಮತ್ತು ಪಿಎಂಜೆಜೆಬಿವೈನಲ್ಲಿ ೨೮ನೇ ಸ್ಥಾನದಲ್ಲಿದೆ. ಎಲ್ಲ ಬ್ಯಾಂಕ್‌ಗಳು ಮಾರ್ಚ್ ಒಳಗೆ ಶೇ.75ರಷ್ಟು ಗುರಿ ಸಾಧಿಸಬೇಕು. ಶಿಕ್ಷಣ ಸಾಲ ಪಡೆಯುವ ವಿದ್ಯಾರ್ಥಿಗಳಿಗೆ ಅಟಲ್ ಪಿಂಚಣಿ ಯೋಜನೆಯಲ್ಲಿ ನೋಂದಣಿ ಮಾಡಿಸುವಂತೆ ಸೂಚಿಸಿದರು.

ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಲ್ಲಿ ಕೆಲವು ಫಲಾನುಭವಿಗಳು ಮಂಜೂರಾದ ಸಾಲ ಪಡೆಯಲು ಬ್ಯಾಂಕ್‌ಗಳಿಗೆ ಬರುತ್ತಿಲ್ಲ. ಇದರಿಂದ ಯೋಜನೆಯಲ್ಲಿ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಸಭೆಯ ಗಮನ ಸೆಳೆದರು.

ವೇದಿಕೆಯಲ್ಲಿ ನಬಾರ್ಡ್ ಡಿಜಿಎಂ ಸಂಗೀತಾ ಎಸ್.ಕರ್ತಾ ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News