×
Ad

ಟೋಲ್ ಸಿಬ್ಬಂದಿಯ ದೌರ್ಜನ್ಯಕ್ಕೆ ಕಡಿವಾಣ ಹಾಕಿ: ನೌರೀನ್ ಆಲಂಪಾಡಿ

Update: 2025-01-18 21:58 IST

ಮಂಗಳೂರು: ಸರಕಾರದ ನಿಯಮ ಹಾಗೂ ಆದೇಶಗಳನ್ನು ಗಾಳಿಗೆ ತೂರಿ ಮೂಲಭೂತ ಸೌಕರ್ಯಗಳನ್ನು ನೀಡದೆ ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳದ ಬ್ರಹ್ಮರಕೊಟ್ಲು ಟೋಲ್ ಸಿಬ್ಬಂದಿಯು ಲಾರಿ ಚಾಲಕನಿಗೆ ಗೂಂಡಾ ರೀತಿಯಲ್ಲಿ ಹಲ್ಲೆ ನಡೆಸಿರುವುದನ್ನು ವಿಮ್ ಗ್ರಾಮಾಂತರ ಜಿಲ್ಲಾಧ್ಯಕ್ಷೆ ನೌರೀನ್ ಆಲಂಪಾಡಿ ಖಂಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟೋಲ್‌ಗೇಟ್ ಸುಲಿಗೆಯ ತಾಣವಾಗುತ್ತಿದೆ. ಸಾರ್ವಜನಿಕರಿಗೆ ಬೇಕಾದ ಶೌಚಾಲಯ, ಕುಡಿಯುವ ನೀರು ಆ್ಯಂಬುಲೆನ್ಸ್ ಸೇವೆಗಳನ್ನು ಸರಿಯಾಗಿ ನೀಡದೆ ಅಕ್ರಮ ಟೋಲ್ ವಸೂಲಿ ಮಾಡುತ್ತಿರುವುದನ್ನು ಪ್ರಶ್ನಿಸುವವರ ವಿರುದ್ಧ ಗೂಂಡಾಗಳ ರೀತಿಯಲ್ಲಿ ಸಿಬ್ಬಂದಿಗಳು ಹಲ್ಲೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ ಪ್ರಕಾರ ಒಂದು ಟೋಲ್‌ನಿಂದ ಮತ್ತೊಂದು ಟೋಲ್‌ಗೆ 60 ಕಿ.ಮೀ ಅಂತರವಿರಬೇಕು. ಜಿಲ್ಲೆಯ ಮಂಗಳೂರಿನ ಸುತ್ತಮುತ್ತ 48 ಕಿ.ಮೀ ಅಂತರದಲ್ಲಿ 4 ಟೋಲ್‌ಗಳ ಮೂಲಕ ಹಗಲು ದರೋಡೆ ಮಾಡಲಾಗುತ್ತಿದೆ. ಟೋಲ್ ಸಂಗ್ರಹದ ಗುತ್ತಿಗೆ ಪಡೆದಿರುವ ಕಂಪೆನಿಗಳು ಎನ್‌ಎಚ್‌ಎಐ ರೂಪಿಸಿದ ನಿಯಮಗಳನ್ನು ಮೀರಿ ನೂರಾರು ಕೋ.ರೂ.ದೋಚುತ್ತಿರುವ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಹಾಗಾಗಿ ಸರಕಾರ ಕೂಡಲೇ ಎಚ್ಚೆತ್ತು ಸೂಕ್ತ ಕ್ರಮಕೈಗೊಂಡು ಅಮಾಯಕರ ಮೇಲೆ ನಡೆಯುವ ದೌರ್ಜನ್ಯವನ್ನು ನಿಲ್ಲಿಸಬೇಕು ಎಂದು ನೌರೀನ್ ಆಲಂಪಾಡಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News