×
Ad

ಮಂಗಳೂರು: ವಿಶಿಷ್ಟ ಮೇಳದಲ್ಲಿ ನಲಿದಾಡಿದ ಭಿನ್ನ ಸಾಮರ್ಥ್ಯದ ಮಕ್ಕಳು

Update: 2025-01-19 18:40 IST

ಮಂಗಳೂರು, ಜ.19: ಸೇವಾ ಭಾರತಿಯ ಅಂಗಸಂಸ್ಥೆಯಾದ ಆಶಾ ಜ್ಯೋತಿಯು ಕೆನರಾ ಶಿಕ್ಷಣ ಸಮೂಹ ಸಂಸ್ಥೆಯ ಸಹಯೋಗದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ನಗರದ ಡೊಂಗರಕೇರಿಯ ಕೆನರಾ ಪ್ರೌಢಶಾಲಾ ಆವರಣದಲ್ಲಿ ರವಿವಾರ ಆಯೋಜಿಸಿದ ವಿಶಿಷ್ಟ ಮೇಳದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳು ನಲಿದಾಡಿ ಸಂಭ್ರಮಿಸಿದರು. ಭಿನ್ನ ಸಾಮರ್ಥ್ಯದ ಮಕ್ಕಳು ಮತ್ತವರ ಪೋಷಕರು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.

ತಿರುಗುವ ಮರದ ಕುದುರೆ, ತೊಟ್ಟಿಲು, ಜಂಪಿಂಗ್ ಬಾಲ್, ಒಂಟೆ ಸವಾರಿ, ತಿಲಕ ಧಾರಣೆ, ಮೆಹಂದಿ ಹಾಕುವುದು, ರಿಂಗ್ ಬಿಸಾಡುವುದು, ಕುದುರೆ ಚಿತ್ರಕ್ಕೆ ಬಾಲ ಬಿಡಿಸುವುದು ಇತ್ಯಾದಿ ಆಟದ ಮೂಲಕ ಜಾತ್ರೆಯ ವಾತಾವರಣದ ಖುಷಿ ಅನುಭ ವಿಸಿದರು. ಚರುಮುರಿ, ಪಾನಿಪೂರಿ, ಐಸ್‌ಕ್ರೀಂ, ಐಸ್‌ಕ್ಯಾಂಡಿ, ಕಲ್ಲಂಗಡಿ ಹಣ್ಣು, ಮಸಾಲೆ ಪುರಿ, ಸಕ್ಕರೆ ಮಿಠಾಯಿ, ಚಕ್ಕುಲಿ ಉಂಡೆ, ನೆಲಕಡಲೆ, ಸ್ಯಾಂಡ್‌ವಿಚ್, ಪೋಡಿ, ಗೋಲಿ ಸೋಡ, ಬೇಲ್‌ಪುರಿ, ಹಣ್ಣಿನ ಜ್ಯೂಸ್, ಕಬ್ಬಿನ ಜ್ಯೂಸ್ ಇತ್ಯಾದಿ ಆಹಾರ-ಪಾನೀಯವು ಭಾಗವಹಿಸಿದ ಎಲ್ಲರಿಗೂ ಉಚಿತವಾಗಿತ್ತು.

ಕೆನರಾ ಶಾಲೆಯ ಆವರಣವನ್ನು ಜಾತ್ರೆಯಂತೆ ಮೇಳವನ್ನು ಸಜ್ಜುಗೊಳಿಸಲಾಗಿತ್ತು. ಹಲವು ತಿಂಡಿ ತಿನಿಸುಗಳ ಸ್ಟಾಲ್‌ ಗಳನ್ನು ಜೋಡಿಸಲಾಗಿತ್ತು. ಬಿಸಿಲಿನ ಝಳವನ್ನೂ ಲೆಕ್ಕಿಸದೆ ಮಕ್ಕಳು, ವೃದ್ಧರು, ಪೋಷಕರ ಸಹಿತ ಸಾವಿರಾರು ಮಂದಿ ಮೇಳದಲ್ಲಿ ಪಾಲ್ಗೊಂಡಿದ್ದರು.

ಮೇಯರ್ ಮನೋಜ್ ಕುಮಾರ್ ಕೋಡಿಕಲ್ ವಿಶಿಷ್ಟ ಮೇಳವನ್ನು ಉದ್ಘಾಟಿಸಿದರು. ಆಶಾಜ್ಯೋತಿಯ ಗೌರವಾಧ್ಯಕ್ಷ ಡಾ.ವಿ. ಮುರಳೀಧರ ನಾಯಕ್, ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ಕಲ್ಲಡ್ಕ ಪ್ರಭಾಕರ ಭಟ್ ಉಪಸ್ಥಿತರಿದ್ದರು.

ದ.ಕ. ಮತ್ತು ಆಸುಪಾಸಿನ ಜಿಲ್ಲೆಗಳ 1,500ಕ್ಕೂ ಅಧಿಕ ವಿಶೇಷ ಸಾಮರ್ಥ್ಯದ ಮಕ್ಕಳು, 2,000ಕ್ಕೂ ಮಕ್ಕಳ ಪೋಷ ಕರು ಭಾಗವಹಿಸಿದರು. ಆಳ್ವಾಸ್ ಮೂಡುಬಿದಿರೆ, ಅಡ್ಯಾರ್ ಸಹ್ಯಾದ್ರಿ ಕಾಲೇಜು, ಕಾವೂರು ಸರಕಾರಿ ಕಾಲೇಜು, ಮಂಗಳೂರು ರಥಬೀದಿ ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಸಿಸಿ, ಸ್ಕೌಟ್ ವಿದ್ಯಾರ್ಥಿಗಳು ಸ್ವಯಂ ಸೇವಕ ರಾಗಿ ಸಹಕರಿಸಿದರು.








 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News