ಮಂಗಳೂರು: ಹರಿಕಥೆ ಸಮ್ಮೇಳನ ಉದ್ಘಾಟನೆ
ಮಂಗಳೂರು, ಜ.19: ಮಂಗಳೂರು, ಜ.ಹರಿಕಥಾ ಪರಿಷತ್, ರಾಮಕೃಷ್ಣ ಮಠ, ಷಡ್ಜ ಕಾಲ ಕೇಂದ್ರ ಟ್ರಸ್ಟ್ ಹಾಗೂ ಹರಿಕಥಾ ಸಮ್ಮೇಳನ್ ಸಮಿತಿಯ ವತಿಯಿಂದ ರವಿವಾರ ಹರಿಕಥೆ ಸಮ್ಮೇಳನ ನಡೆಯಿತು.
ಸಮ್ಮೇಳನ ಉದ್ಘಾಟಿಸಿದ ರಾಮಕೃಷ್ಣ ಮಠದ ಜಿತಕಾಮಾನಂದಜಿ ಪರಂಪರೆಗೆ ಮಕ್ಕಳೇ ವಾರಸುದಾರರಾಗಿರುವರು. ಕಲೆಯಿಂದ ವಿಮುಖರಾಗಿರುವುದು ಮಕ್ಕಳ ತಪ್ಪಲ್ಲ. ಕಲೆಗಳನ್ನು ವರ್ಗಾಯಿಸುವ ಕೆಲಸವನ್ನು ಹಿರಿಯರು ಮಾಡದ ಕಾರಣ ಒಂದು ತಲೆಮಾರು ಪರಂಪರೆಯ ಕೊಂಡಿಯಿಂದ ಕಳಚಿಕೊಂಡಿತು. ಈಗಿನ ಮಕ್ಕಳಲ್ಲಿ ಕಲೆಯ ಆಸಕ್ತಿಯನ್ನು ಮೂಡಿಸ ಬೇಕಿದೆ ಎಂದು ಅಭಿಪ್ರಾಯಪಟ್ಟರು.
ಆಶಯ ಭಾಷಣ ಮಾಡಿದ ವಿದ್ವಾಂಸ ಪ್ರಭಾಕರ ಜೋಶಿ, ಹರಿಕಥೆ ಮತ್ತು ಯಕ್ಷಗಾನ ವೇದಾಂತದ ಸಾರವನ್ನು ವ್ಯವಹಾರದ ಒಟ್ಟಿಗೆ ಕಟ್ಟಿಕೊಡುತ್ತಿವೆ. ಉಪನಿಷತ್, ವೇದ, ಗಾದೆ, ಮಾತು ಎಲ್ಲವೂ ಹರಿಕಥೆಯೊಳಗೆ ಬರುತ್ತದೆ ಎಂದರು.
ಹರಿಕಥಾ ಪರಿಷತ್ತಿನ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ (ದೇವಕಿತನಯ ಕೂಡ್ಲು) ಅವರ ಕುರಿತ ಮಹಾಪರ್ವ ಕೃತಿಯನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅನಾವರಣಗೊಳಿಸಿದರು.
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್, ಹರಿಕಥೆ ಸಮ್ಮೇಳನ ಸಮಿತಿ ಕಾರ್ಯಾಧ್ಯಕ್ಷ ಬೆಟ್ಟಂಪಾಡಿ ಸುಂದರ ಶೆಟ್ಟಿ, ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಕ್ಯಾ. ಗಣೇಶ ಕಾರ್ಣಿಕ್ ಸ್ವಾಗತಿಸಿದರು. ಸಂಚಾಲಕ ಸುಧಾಕರ ರಾವ್ ಪೇಜಾವರ ವಂದಿಸಿದರು. ಸಂತೋಷ ಆಳ್ವ ಕಾರ್ಯಕ್ರಮ ನಿರೂಪಿಸಿದರು.