“ಅವಿಭಜಿತ ದ.ಕ. ಜಿಲ್ಲೆಯ ಶಾಲೆಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ”: ಶಿಕ್ಷಣ ತಜ್ಞ ವಾಸುದೇವ ಬೆಳ್ಳೆ ಗಂಭೀರ ಆರೋಪ
ಕಾಪು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಪಾಠ ಪ್ರವಚನಗಳಲ್ಲಾಗಲಿ, ಊಟೋಪಚಾರದಲ್ಲಾಗಲಿ ಇದು ನಡೆಯುತ್ತದೆ. ಮಕ್ಕಳು ಮತ್ತು ಪಾಲಕರು ಈ ಬಗ್ಗೆ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ಆಗಬೇಕು ಎಂದು ಶಿಕ್ಷಣ ತಜ್ಞ ವಾಸುದೇವ ಬೆಳ್ಳೆ ಒತ್ತಾಯಿಸಿದ್ದಾರೆ.
ಕಾಪು ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಂದಾಯ, ಪೊಲೀಸ್ ಹಾಗೂ ಇತರ ಇಲಾಖೆಗಳಿಗೆ ಸಂಬಂಧಿಸಿ ಕಾಪು ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ಕುಂದುಕೊರತೆ ಸಭೆಯಲ್ಲಿ ಅವರು ಈ ಗಂಭೀರ ವಿಷಯ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಪು ತಹಶೀಲ್ದಾರ್ ಪ್ರತಿಭಾ ಆರ್., ಶಾಲೆಗಳಲ್ಲಿ ಅಸ್ಪೃಶ್ಯತೆ ಆಚರಣೆಯಂತಹ ದೂರುಗಳಿದ್ದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಶಿಕ್ಷಣ ಸಂಸ್ಥೆಗಳಲ್ಲಿ ಇಲಾಖೆಗಳ ಮೂಲಕ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು ಎಂದು ನಿರ್ದೇಶಿಸಿದರು.
ಈ ಬಗ್ಗೆ ಉತ್ತರಿಸಿದ ಶಿಕ್ಷಣ ಇಲಾಖೆಯ ಬಿಇಒ ಯಲ್ಲಮ್ಮ, ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧಿಸಿ, ಶೈಕ್ಷಣಿಕ ಚಟುವಟಿಕೆ ಗಳಿಗೆ ಸಂಬಂಧಿಸಿ ಸಮಾಲೋಚನಾ ಸಭೆಯಲ್ಲಿ ಇದುವರೆಗೂ ಅಂತಹ ಯಾವುದೇ ದೂರುಗಳು ಬಂದಿಲ್ಲ. ಅಂತಹ ದೂರುಗಳು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ನಡೆಯದಂತೆ ಎಲ್ಲಾ ಶಾಲೆಗಳಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು.
►ಶಾಲೆಗಳಲ್ಲಿ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಗೆ ಸೂಕ್ರ ಕ್ರಮಕೈಗೊಳ್ಳಿ
ಸರಕಾರದಿಂದ ಲಭಿಸುವ ವಿದ್ಯಾರ್ಥಿ ವೇತನಗಳ ಬಗ್ಗೆ ಶಾಲೆಗಳಲ್ಲಿ ಸರಿಯಾದ ಮಾಹಿತಿ ಸಿಗದೆ ವಿದ್ಯಾರ್ಥಿಗಳು ಆ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಪ್ರತೀ ಶಾಲೆಗಳಲ್ಲಿ ಓರ್ವ ಶಿಕ್ಷಕರನ್ನು ನೋಡೆಲ್ ಅಧಿಕಾರಿಯಾಗಿ ನೇಮಕ ಮಾಡಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರಕಿಸಿಕೊಡುವಲ್ಲಿ ಮುತುವರ್ಜಿ ವಹಿಸುವಂತೆ ಶಿಕ್ಷಣಾಧಿಕಾರಿ ನಿರ್ದೇಶನ ನೀಡಬೇಕು ಬೆಳ್ಳೆ ವಾಸುದೇವ ಅಹವಾಲು ಒತ್ತಾಯಿಸಿದರು.
15 ದಿನಗಳ ಹಿಂದೆ ಕಾಪು ಮತ್ತು ಉಡುಪಿ ತಾಲೂಕಿನ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಕರೆದು ಯಾವುದೇ ಮಕ್ಕಳು ವಿದ್ಯಾರ್ಥಿವೇತನ ಸಹಿತ ಇಲಾಖೆ ಯಾವುದೇ ಸೌಲಭ್ಯದಿಂದ ವಂಚಿತರಾಗದಂತೆ ವಿಶೇಷ ಕಾಳಜಿ ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಬಿಇಒ ಯಲ್ಲಮ್ಮ ಉತ್ತರಿಸಿದರು.
►ಅಂಬೇಡ್ಕರ್ ಪುತ್ಥಳಿ ನಿರ್ಮಿಸಿ
ಕಾಪು ತಾಲೂಕು ಆಡಳಿತ ಸೌಧ ಮುಂಭಾಗ ಅಂಬೇಡ್ಕರ್ ಪುತ್ಥಳಿ ನಿರ್ಮಿಸುವಂತೆ ಕೇಶವ ಸಾಲ್ಯಾನ್ ಹೆಜಮಾಡಿ ಆಗ್ರಹಿಸಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಹಸೀಲ್ದಾರ್ ತಿಳಿಸಿದರು.
ಪಂಬದ ಸಮುದಾಯಕ್ಕೆ ಸಮುದಾಯಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯವರು ಸಮಾಜಕಲ್ಯಾಣ ಇಲಾಖೆಯಡಿ ತೆಂಕ ಗ್ರಾಮದಲ್ಲಿ ಜಾಗ ಕಾಯ್ದಿರಿಸಿದ್ದರು. ಅದನ್ನು ಹಸ್ತಾಂತರಕ್ಕೆ ಶೀಘ್ರ ಕ್ರಮ ವಹಿಸುವಂತೆ ಬೆಳ್ಳೆ ಆಗ್ರಹಿಸಿದರು. ಪಂಬದ ಸಮಾಜಕ್ಕೆ ಪಹಣಿ ಆಗಿದ್ದು, ಶೀಘ್ರ ಅದನ್ನು ಹಸ್ತಾಂತರಿಸಲು ಕ್ರಮ ವಹಿಸುವಂತೆ ತಹಸೀಲ್ದಾರ್ ಕಂದಾಯ ನಿರೀಕ್ಷಕರಿಗೆ ಸೂಚಿಸಿದರು.
ಡಿಸಿ ಮನ್ನಾ ಭೂಮಿ ಅತಿಕ್ರಮಣವಾಗಿದ್ದು, ಅದನ್ನು ತೆರವುಗೊಳಿಸಿ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ವಿತರಿಸಿ. ಈಗಾಗಲೇ ಇದಕ್ಕೆ ಬೇಕಾದ ಸರ್ವೇ ಆಗಿದೆ. ಅದರಂತೆ ಅರ್ಹರಿಗೆ ಡಿಸಿ ಮನ್ನಾ ಭೂಮಿ ವಿತರಿಸಿ ಎಂದು ದಲಿತ ಮುಖಂಡ ಶೇಖರ್ ಹೆಜಮಾಡಿ ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀಡುವ ಶೇ. 25ರ ವಿದ್ಯಾರ್ಥಿ ವೇತನದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳನ್ನು ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲ. ಎಲ್ಲರೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆಯುವುದು ಇಂದಿನ ಅನಿವಾರ್ಯ. ಈ ನಿಟ್ಟಿನಲ್ಲಿ ಈ ಆದೇಶವನ್ನು ಹಿಂಪಡೆಯಬೇಕು ಎಂದು ಶೇಖರ್ ಹೆಜ್ಮಾಡಿ ಒತ್ತಾಯಿಸಿದರು.
►ಅಂಬೇಡ್ಕರ್ ಭವನ ದುರಸ್ತಿಗೆ ಅನುದಾನ ಬೇಡಿಕೆ
ಪಡುಬಿದ್ರಿಯಲ್ಲಿ ನೂತನವಾಗಿ 20 ಲಕ್ಷದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದು, ಅದರ ಮುಂಭಾಗದಲ್ಲಿನ ಹಳೆ ಭವನ ದುರಸ್ತಿಗೆ 10 ಲಕ್ಷ ರೂ ಅನುದಾನಕ್ಕಾಗಿ 3 ವರ್ಷದಿಂದ ಬೇಡಿಕೆ ಸಲ್ಲಿಸಿದರೂ ಪ್ರಯೋಜನ ವಾಗಿಲ್ಲ. ತಾಪಂನಿಂದ 4.5 ಹಾಗೂ ಪಡುಬಿದ್ರಿ ಗ್ರಾಮ ಪಂಚಾಯಿತಿನಿಂದ 2 ಲಕ್ಷ ಅನುದಾನ ದೊರೆತಿದ್ದು, ಬಾಕಿ ಮೊತ್ತ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಬೇಕು. ಅದು ದುರಸ್ತಿಯಾಗದೆ ಹೊಸ ಭವನ ಉದ್ಘಾಟಿಸದಂತಾಗಿದೆ ಎಂದು ಕೃಷ್ಣ ಬಂಗೇರ ಅಲವತ್ತುಕೊಂಡರು.
ಇಲಾಖೆಯಿಂದ ದುರಸ್ತಿಗೆ ಯಾವುದೇ ಅನುದಾನ ಲಭಿಸುವುದಿಲ್ಲ ಎಂದು ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ರೋಶನ್ ಉತ್ತರಿಸಿದರು. ಪಡುಬಿದ್ರಿ ಕೆಪಿಎಸ್ ಶಾಲಾ ಆವರಣದಲ್ಲಿರುವ ಶಿಥಿಲ ಸರ್ಕಾರಿ ಕಟ್ಟಡಗಳನ್ನು ಕೆಡಹುವಂತೆ ಕೃಷ್ಣ ಮನವಿ ಮಾಡಿದರು. ಅದನ್ನು ಪರಿಶೀಲಿಸಿ ಕ್ರಮವಹಿಸುವುದಾಗಿ ತಹಸೀಲ್ದಾರ್ ತಿಳಿಸಿದರು.
ಮೂಡುಬೆಳ್ಳೆ ಗ್ರಾಮದ ನೆಲ್ಲಿಕಟ್ಟೆಯಲ್ಲಿನ ಡಿಸಿ ಮನ್ನಾ ಭೂಮಿ ಗ್ರಾಪಂ ನೀಡಿರುವುದು ಅರಿಯಲ್ಲ, ಅದನ್ನು ಪಡೆದು ನಿವೇಶನ ರಹಿತ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ನೀಡುವಂತೆ, ತೋಕೊಳಿ ಸಮುದಾಯ ಭವನ ಮೂಲ ಸೌಕರ್ಯ ಜೋಡಣೆ ಮಾಡುವಂತೆ ರಾಘವ ಬೆಳ್ಳೆ ಒತ್ತಾಯಿಸಿದರು. ಬಡಾ ಗ್ರಾಮದಲ್ಲಿ ರುಧ್ರಭೂಮಿ ಇನ್ನೂ ನಿರ್ಮಾಣವಾಗದ ಬಗ್ಗೆ, ಡಿಸಿ ಮನ್ನಾ ಜಮೀನು ವಿವರ ನೀಡುವಂತೆ ವಿಠಲ್ ಆಗ್ರಹಿಸಿದರು.
ಇನ್ನಂಜೆ ಪಾಂಗಾಳಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಹಾಗೂ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ದಾಖಲೆಗಳನ್ನು ನೀಡಿದರೂ ಶೈಕ್ಷಣಿಕ ಸಾಲ ಮಂಜೂರು ಮಾಡದೆ ರಾಷ್ಟ್ರೀಕೃತ ಬ್ಯಾಂಕ್‌ನವರು ಸತಾಯಿಸುತ್ತಿರುವ ಬಗ್ಗೆ ಗೀತಾ ಪಾಂಗಾಳ ಗಮನ ಸೆಳೆದರು.
ಶಿರ್ವ ಗ್ರಾಮ ಪಂಚಾಯಿತಿಯಲ್ಲಿ ಶೇ.25ರ ನಿಧಿಯ ವಿದ್ಯಾರ್ಥಿ ವೇತನ ಮಂಜೂರಾದರೂ ತೆರಿಗೆ ಪಾವತಿ ಮಾಡದೆ ಅದನ್ನು ನೀಡದಿರುವ ಬಗ್ಗೆ ಚಂದ್ರಹಾಸ ದೂರಿದರು.
ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಕಾಪು ಠಾಣಾಧಿಕಾರಿ ತೇಜಸ್ವಿ ಇದ್ದರು.
ವಿದ್ಯಾರ್ಥಿ ನಿಲಯಕ್ಕೆ ಬೇಡಿಕೆ
ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲಾ ಕೇಂದ್ರಗಳಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳಿದ್ದು, ಮಧ್ಯ ಭಾಗದಲ್ಲಿನ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಇಚ್ಚಿಸುವ ಹೊರ ಜಿಲ್ಲೆಯ ಬಡ ಮಕ್ಕಳು ಅದರಲ್ಲೂ ಹೆಣ್ಮಕ್ಕಳು ವಿದ್ಯಾರ್ಥಿ ನಿಲಯಗಳಿಲ್ಲದೆ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುತ್ತಾರೆ ಎಂದು ವಾಸುದೇವ ಬೆಳ್ಳೆ ಆಗ್ರಹಿಸಿದರು.
ಪದವಿ ಪೂರ್ವ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಕಾಪು ತಾಲೂಕಿನಲ್ಲಿ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಹಸೀಲ್ದಾರ್ ಪ್ರತಿಭಾ ಆರ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.