×
Ad

ಅಡ್ಡೂರು| ಇನ್ನೂ ತೆರವಾಗದ ಪಾಳು ಬಿದ್ದಿರುವ ಅಂಗನವಾಡಿ ಕಟ್ಟಡ: ಪೋಷಕರು, ಗ್ರಾಮಸ್ಥರಿಂದ ಪ್ರತಿಭಟನೆಯ ಎಚ್ಚರಿಕೆ

Update: 2025-01-21 22:18 IST

ಅಡ್ಡೂರು: ಒಂದೂವರೆ ವರ್ಷದಿಂದ ಪಾಳು ಬಿದ್ದಿರುವ ಅಡ್ಡೂರು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕಟ್ಟಡವನ್ನು ಇನ್ನೂ ತೆರವುಗೊಳಿಸದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಮ್ಮ ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರು ಮತ್ತು ಗ್ರಾಮಸ್ಥರು ದೂರಿದ್ದಾರೆ.

ಒಂದೂವರೆ ವರ್ಷದಿಂದ ಅಡ್ಡೂರು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಡಿ.24ರಂದು ಈ ಕಟ್ಟಡ ಬಿದ್ದು ವಿದ್ಯಾರ್ಥಿಯೋರ್ವ ಗಾಯಗೊಂಡಿದ್ದ. ಈ ಸಂಬಂಧ ಮಕ್ಕಳ ಪೋಷಕರು ವಾರ್ತಾಭಾರತಿಗೆ ನ್ಯಾಯ ಒದಗಿಸಿಕಡುವಂತೆ ಮನವಿ ಸಲ್ಲಿಸಿ ಆಗ್ರಹಿಸಿದ್ದರು. ಪೋಷಕರ ಮನವಿಗೆ ಸ್ಪಂದಿಸಿದ್ದ ವಾರ್ತಾಭಾರತಿ ಘಟನೆಗೆ ಸಂಬಂಧಿಸಿ ವಿಸ್ತೃತ ವರದಿಯನ್ನು ಪ್ರಕಟಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆಯನ್ನು ಎಚ್ಚರಿಸುವ ಕೆಲಸ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಖಾರ್ಗಿ ಅವರು, ಸದ್ಯ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡವನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಪೂರಕವಾಗುವಂತೆ ರೂಪುರೇಷೆಗಳನ್ನು ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಇಲಾಖೆಯಿಂದ ಮತ್ತು ನರೇಗಾ ದಿಂದ 20ಲಕ್ಷ ರೂ. ಅನುದಾನವನ್ನು ಕಾಯ್ದಿರಿಸಲಾಗಿದೆ. ಕಟ್ಟಡ ಕಾಮಗಾರಿ ನಿರ್ವಹಿಸುವ ಸಂಬಂಧ ಪಿಡಬ್ಲ್ಯೂಡಿ ಇಲಾಖೆಗೆ ಈಗಾಗಲೇ ಲಿಖಿತ ಮನವಿಯನ್ನೂ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.

ಆದರೆ, ಈ ಎಲ್ಲಾ ಘಟನೆಗಳು ನಡೆದು ತಿಂಗಳಾದರೂ ಇನ್ನೂ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡವನ್ನು ತೆರವು ಮಾಡುವ ಕುರಿತಾಗಿ ಇಲಾಖೆಗಳು ಯಾವುದೇ ಮುತುವರ್ಜಿ ವಹಿಸದೇ ಇರುವ ಪರಿಣಾಮವಾಗಿ ಕಟ್ಟಡ ಇನ್ನೂ ಹಾಗೇ ಉಳಿದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆ ನಮ್ಮ ಪುಟ್ಟ ಮಕ್ಕಳ ಜೀವನದಜೊತೆ ಚೆಲ್ಲಾಟ ವಾಡುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಅವಳಿ ಇಲಾಖೆಗಳು ತಕ್ಷಣ ಎಚ್ಚೆತ್ತುಕೊಂಡು ಶಿಥಿಲಾವಸ್ಥೆಯ ಕಟ್ಟಡವನ್ನು ವಾರದ ಒಳಗಾಗಿ ಸಂಪೂರ್ಣ ತೆರವುಗೊಳಿಸದಿದ್ದಲ್ಲಿ ಮಕ್ಕಳಳೊಂದಿಗೆ ಶಾಲೆಗೆ ಬೀಗಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡ ತೆರವಿಗೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಮ್ಮ ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರು ಮತ್ತು ಗ್ರಾಮಸ್ಥರು ದೂರಿದ್ದರು. ಇದೇ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್‌ ಅವರನ್ನು ವಾರ್ತಾಭಾರತಿ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಕೇಳಿದಾಗ, ನಾವು ಅಂಗನವಾಡಿ ಕಟ್ಟಡ ನಡೆಸುತ್ತಿರಲಿಲ್ಲ. ಅದನ್ನು ಮುಚ್ಚಿ ಬೇರೆಡೆ ಸ್ಥಳಾಂತರಿಸಲಾಗಿದೆ. ಅಂಗನವಾಡಿಗೆ ಮಂಜೂರಾತಿ ನೀಡಿ ಆದೇಶ ನೀಡಲಾಗಿದೆ. ಪಂಚಾಯತ್‌ ರಾಜ್‌ ಇಲಾಖೆಯ ಇಂಜಿನಿಯರ್‌ಗಳು ಕಾಮಗಾರಿಗೆ ಟೆಂಟರ್‌ ಕರೆದು ಕಟ್ಟಡ ನಿರ್ಮಾಣ ಮಾಡುತ್ತಾರೆ. ಆ ಸಂದರ್ಭ ಹಳೆಯ ಕಟ್ಟಡ ತೆರವು ಮಾಡಿ ಹೊಸಕಟ್ಟಡ ಕಟ್ಟುತ್ತಾರೆ. ನೂತನ ಅಂಗನವಾಡಿ ಕಟ್ಟಡ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ನಮ್ಮ ಕಾನೂನು ಮೀರಿ ಏನನ್ನೂ ಮಾಡಲು ಆಗುವುದಿಲ್ಲ ಎಂದಿದ್ದಾರೆ. ಮಕ್ಕಳ ಜೀವಕ್ಕಿಂತಲೂ ಕಾನೂನು ಮುಖ್ಯವೇ ಎಂಬ ವಾರ್ತಾಭಾರತಿಯ ಪ್ರಶ್ನೆಗೆ ಉತ್ತರಿಸದ ಊಪನಿರ್ದೇಶಕರು ಕರೆ ಕಟ್‌ ಮಾಡಿದ್ದಾರೆ.

"ಹಳೆಯ ಅಂಗನವಾಡಿ ಕಟ್ಟಡ ತೆರವಿಗೆ ಆಗ್ರಹಿಸಿ ಒಂದು ತಿಂಗಳಾಯಿತು. ಕಟ್ಟಡದ ಅರ್ಧ ತೆರವುಗೊಳಿಸಿದ್ದಾರೆ, ಹೊರತು ಪೂರ್ಣ ಪ್ರಮಾಣದಲ್ಲಿ ತೆರವು ಮಾಡಿಲ್ಲ. ಹೊಸ ಅಂಗನವಾಡಿ ಕಟ್ಟಡ ಕಾಮಗಾರಿಯನ್ನೂ ಆರಂಭಿಸಿಲ್ಲ. ಅನುದಾನ ಕಾಯ್ದಿರಿಸಲಾಗಿದೆ, ಕಾರ್ಯಾದೇಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟೆಂಡರ್‌ ಪಡೆದು ಕೊಳ್ಳಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಮಕ್ಕಳ ರಕ್ಷಣೆ ನಮಗೆ ಮುಖ್ಯ. ಹಾಗಾಗಿ ಗುತ್ತಿಗೆದಾರರಿಗೆ ನೀಡುವ ಅನುದಾನವನ್ನು ಶಾಲಾಭಿವೃದ್ಧಿ ಸಮಿತಿಗೆ ನೀಡಿದರೆ ಸಮಿತಿಯೇ ಮುಂದೆ ನಿಂತು ಅಂಗನವಾಡಿ ಕಟ್ಟಡ ನಿರ್ಮಿಸಲು ಸಿದ್ಧವಿದೆ".

- ಮುಹಮ್ಮದ್‌ ಅಲಿ ಬಂಡಸಾಲೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News