×
Ad

ಕುರ್ಚಿಯ ಕುಸ್ತಿ ಬಿಟ್ಟು ಆದಿವಾಸಿಗಳ ಮಾನವ ಹಕ್ಕುಗಳನ್ನು ರಕ್ಷಿಸಿ: ರಾಜ್ಯ ಸರಕಾರಕ್ಕೆ ಬೃಂದಾ ಕಾರಟ್ ಒತ್ತಾಯ

Update: 2025-01-23 17:58 IST

ಮಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ಕುರ್ಚಿಗಾಗಿ ಕುಸ್ತಿ ನಡೆಸುತ್ತಿದ್ದು, ಅದನ್ನು ಬಿಟ್ಟು ಕೊರಗ ಸಮುದಾಯ ಸೇರಿದಂತೆ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ)ಗಳಾಗಿ ಗುರುತಿಸಲಾಗಿರುವ ಆದಿವಾಸಿಗಳ ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್‌ನ ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ಮಾಜಿ ಸಂಸದೆ ಬೃಂದಾ ಕಾರಟ್ ಹೇಳಿದ್ದಾರೆ.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಗುರುವಾರ ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಮಿನಿ ವಿಧಾನಸೌಧದವರೆಗೆ ಆಯೋಜಿಸಲಾದ ಆದಿವಾಸಿ ಆಕ್ರೋಶ್ ರ್ಯಾಲಿ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೊರಗ ಸಮುದಾಯದ ಹೀರೋ, ದೈವವಾಗಿ ಪೂಜಿಸಲ್ಪಡುವ ಕೊರಗಜ್ಜನ ಎದುರು ಅಡ್ಡಬಿದ್ದು, ಆಶೀರ್ವಾದ ಪಡೆಯ ಲಾಗುತ್ತದೆ. ಆದರೆ ವಾಸ್ತವದಲ್ಲಿ ಶತಮಾನಗಳಿಂದ ಅಸ್ಪಶ್ಯತೆ, ದೌರ್ಜನ್ಯದಿಂದ ನಲುಗಿರುವ ಕೊರಗ ಸಮುದಾಯವು ಭೂಮಿ ಹಕ್ಕು, ಪೌಷ್ಠಿಕ ಆಹಾರ, ಶಿಕ್ಷಣ, ಆರೋಗ್ಯದ ಹಕ್ಕಿನಿಂದ ವಂಚಿಸಲಾಗಿದೆ. ಕೊರಗಜ್ಜನನ್ನು ಗೋಡೆಯಲ್ಲಿಟ್ಟು ಪೂಜಿಸಲಾಗುತ್ತದೆ. ಆದರೆ ಆ ಸಮುದಾಯಕ್ಕಿನ್ನೂ ಸೂಕ್ತವಾದ ಗೋಡೆಗಳನ್ನೇ ಒದಗಿಸಲಾಗಿಲ್ಲ. ಇಂತಹ ಅನ್ಯಾಯ, ರಾಜಕೀಯ ಷಡ್ಯಂತ್ರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.

ಕೇರಳದ ಎಲ್‌ಡಿಎಫ್ ನೇತೃತ್ವದ ಸರಕಾರವು 2024ರ ನವೆಂಬರ್‌ನಲ್ಲಿ ಕಾಸರಗೋಡು, ಮಂಜೇಶ್ವರದಲ್ಲಿ ಕೊರಗರ 59 ಕಾಲನಿ, 15 ಗ್ರಾಮಗಳನ್ನು ಗುರುತಿಸಿ ‘ಅಪರೇಶನ್ ಸ್ಮೈಲ್’ ಹೆಸರಿನಲ್ಲಿ ೧೯೩.೪ ಹೆಕ್ಟೇರ್ ಭೂಮಿಯನ್ನು ಈ ಕೊರಗ ಕುಟುಂಬಗಳಿಗೆ ಗುರುತಿಸುವ ಮೂಲಕ ಅವರ ಬದುಕಿನಲ್ಲಿ ಮಂದಹಾಸ ಬೀರಲು ಕ್ರಮ ಕೈಗೊಂಡಿದೆ. ನಾವು ಕರ್ನಾಟಕ ಸರಕಾರದ ಮುಂದಿನ ಬಜೆಟನ್ನು ಎದುರು ನೋಡುತ್ತಿದ್ದು, ರಾಜ್ಯದ ಕೊರಗ ಹಾಗೂ ಇತರ ಆದಿವಾಸಿಗಳಿಗೆ ಯಾವ ರೀತಿಯ ಯೋಜನೆಗಳನ್ನು ಸರಕಾರ ಘೋಷಿಸಲಿದೆ ಎಂಬುದನ್ನು ಕಾಯುತ್ತಿದ್ದೇವೆ. ಸಂವಿಧಾನದ ಆಶಯಗಳಂತೆ ದಮನಿತ ಆದಿವಾಸಿಗಳಿಗೆ ಘನತೆಯ ಬದುಕಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಬೃಂದಾ ಕಾರಟ್ ಹೇಳಿದರು.

ಕೊರಗ ಸಮುದಾಯದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಅಪೌಷ್ಟಿಕತೆಯ ಜತೆಗೆ ಈ ಸಮುದಾಯ ಮಕ್ಕಳು ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದಾರೆ. ಕಡ್ಡಾಯ ಶಿಕ್ಷಣದ ಹಕ್ಕು ಜಾರಿಗೊಂಡಿದ್ದರೂ ಅದು ಆದಿವಾಸಿ ಸಮುದಾಯಕ್ಕೆ ಅನ್ವಯಿಸಿದಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತುಳುನಾಡಿನಲ್ಲಿ ನಿಷೇದ ಹೇರಲಾಗಿರುವ ಅಜಲು ಪದ್ಧತಿ ಕುರಿತಂತೆ ಪ್ರತಿಕ್ರಿಯಿಸಿದ ಬೃಂದಾ ಕಾರಟ್, ಮಾನವನ ಕೂದಲು ಹಾಗೂ ಉಗುರನ್ನು ಅನ್ನದಲ್ಲಿ ಸೇರಿಸಿ ಕೊರಗರಿಗೆ ನೀಡುವ ಹೀನ ಪದ್ಧತಿ ನಿಷೇಧಕ್ಕೆ 2000ದವರೆಗೆ ಕಾಯಬೇಕಾಯಿತು. ಆದರೂ ಇಂದಿಗೂ ಸಂಪ್ರದಾಯ, ಸಂಸ್ಕೃತಿ ಹೆಸರಿನಲ್ಲಿ ಬಿ ಇಂತಹ ಹೀನ ಆಚರಣೆಗಳನ್ನು ಮುಂದುವರಿಸುವ ಪ್ರಯತ್ನ ನಡೆಯುತ್ತಿದೆ. ಈ ರೀತಿ ಐತಿಹಾಸಿಕವಾಗಿ ಪಾಳಯಗಾರರು, ಭೂಮಾಲಿಕರ ತುಳಿತಕ್ಕೆ ಒಳಗಾಗಿ ಜೀವಿಸಿರುವ ಕೊರಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ, ಅವಿಭಜಿತ ದ.ಕ. ಜಿಲ್ಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೊರಗ ಸಮುದಾಯಕ್ಕೆ ಮುಹಮ್ಮದ್ ಪೀರ್ ವರದಿ ಆಧಾರದಲ್ಲಿ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಡಳಿತದ ಗಮನ ಸೆಳೆಯಲಾಗಿದೆ. ಆದರೆ ಪ್ರತಿಕ್ರಿಯೆ ದೊರಕಿಲ್ಲ ಎಂದರು.

ಕೊರಗರಿಗೆ ಭೂಮಿ ಹಕ್ಕಿನಡಿ ಕೃಷಿಯೋಗ್ಯ ಭೂಮಿ ಒದಗಿಸಬೇಕು. 2008ರಿಂದೀಚೆಗೆ ಐಟಿಡಿಪಿಯಿಂದ 54 ಕುಟುಂಬಗಳಿಗಷ್ಟೇ ಭೂಮಿ ಒದಗಿಸಲಾಗಿದೆ. ಅದು ಕೂಡಾ ಎರಡು ಕುಟುಂಬಗಳಿಗೆ ಮಾತ್ರವೇ 2 ಎಕರೆ ಭೂಮಿ ಲಭಿಸಿರುವುದು. ಹಾಗಾಗಿ ವಿಶೇಷ ಕಂದಾಯ ಅದಾಲತ್ ನಡೆಸಿ ಜಾಗದ ದಾಖಲೆ ಹೊಂದಿರದ ಕುಟುಂಬಗಳಿಗೆ ಅದರ ವ್ಯವಸ್ಥೆ ಕಲ್ಪಿಸಬೇಕು. ಪೌರ ಕಾರ್ಮಿಕರಾಗಿ ದುಡಿಯುವ ಕೊರಗರನ್ನು ಖಾಯಂಗೊಳಿಸಬೇಕು. ಯುವಕರಿಗೆ ಸರಕಾರಿ, ಸಹಕಾರಿ ಇಲಾಖೆಗಳಲ್ಲಿ ಉದ್ಯೋಗಕ್ಕಾಗಿ ವಿಶೇಷ ನೇಮಕಾತಿ ಮಾಡಬೇಕು. ಒಳ ಮೀಸಲಾತಿ ಕಲ್ಪಿಸಬೇಕು, ಮನೆ ನಿರ್ಮಾಣದ ಅನುದಾನ 10 ಲಕ್ಷರೂ.ಗಳಿಗೆ ಏರಿಸಬೇಕು ಎಂಬ ಸರಕಾರದ ಮುಂದಿಡಲಾಗಿರುವ ಬೇಡಿಕೆಗಳನ್ನು ಅವರು ವಿವರಿಸಿದರು.

ಅತಿಥಿಯಾಗಿ ಭಾಗವಹಿಸಿದ್ದ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಳಿವಿನಂಚಿನಲ್ಲಿರುವ ಕೊರಗ, ಕುಡುಬಿ, ಮಲೆಕುಡಿಯ ಸೇರಿದಂತೆ ಇತರ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಬಗ್ಗೆ ಕ್ರಮ ವಹಿಸುವ ಬದಲು ಜಿಲ್ಲಾಡಳಿತವು ಕಂಬಳ, ಕರಾವಳಿ ಉತ್ಸವ, ಆಹಾರ ಉತ್ಸವದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ ಅವರು, ಕೊರಗ ಸಮುದಾಯ ಸೇರಿದಂತೆ ಆದಿವಾಸಿಗಳ ಈ ಆಕ್ರೋಶ ರ್ಯಾಲಿ ಮೂಲಕ ತುಳುನಾಡಿನ ಇತಿಹಾಸವನ್ನು ಎತ್ತಿಹಿಡಿಯಲಿದ್ದೇವೆ ಎಂದರು.

ಬಹಿರಂಗ ಸಭೆಯಲ್ಲಿ ಸಮಿತಿಯ ರಾಜ್ಯ ಸಹ ಸಂಚಾಲಕರಾದ ಡಾ.ಎಸ್.ವೈ. ಗುರುಶಾಂತ್, ಶ್ರೀಧರ ನಾಡ ಮೊದಲಾದವರು ಮಾತನಾಡಿದರು.

ಸಮಿತಿಯ ಮಂಗಳಜ್ಯೋತಿ ಅಧ್ಯಕ್ಷ ಕರಿಯ ಕೆ. ಅಧ್ಯಕ್ಷತೆ ವಹಿಸಿದ್ದರು. ಶೇಖರ್ ವಾಮಂಜೂರು, ಕೃಷ್ಣ ಇನ್ನಾ, ತುಳಸಿ ಬೆಳ್ಮಣ್ಣು, ಶಶಿಧರ್ ಕೆರೆಕಾಡು, ನಿದೇಶ್ ಗುಂಡಾವುಪದವು, ಜಯ ಮಧ್ಯ, ಕೇಶವ ಕೆರೆಕಾಡು, ಅಭಿಜಿತ್, ಕಿರಣ್ ಕತ್ತಲ್‌ಸಾರ್, ಭಾಗೇಶ್ ಮೆಣ್ಣಬೆಟ್ಟು, ಆಶಿಕ್ ಮೆಣ್ಣಬೆಟ್ಟು, ಪ್ರಶಾಂತ್ ಕಂಕನಾಡಿ, ಪದ್ಮನಾಭ ಮಧ್ಯ, ಜ್ಯೋತಿ ಮಧ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ರಶ್ಮಿ ಮಂಗಳಜ್ಯೋತಿ ವಂದಿಸಿದರು. ಯೋಗೀಶ್ ಜಪ್ಪಿನಮೊಗರು ಕಾರ್ಯಕ್ರಮ ನಿರೂಪಿಸಿದರು.

‘ಸೊಲ್ಮೆಲು’ ಎಂಬ ತುಳು ಶಬ್ಧದೊಂದಿಗೆ ಮಾತು ಆರಂಭಿಸಿದ ಬೃಂದಾ ಕಾರಟ್‌ರವರ ಆಂಗ್ಲ ಭಾಷೆಯ ಭಾಷಣವನ್ನು ಕೃಷ್ಣ ಗೌಡ ಕನ್ನಡದಲ್ಲಿ ಭಾಷಾಂತರಿಸಿದರು.

ಸಾವಿರಾರು ಮಂದಿ ಆದಿವಾಸಿ ರ್ಯಾಲಿಯಲ್ಲಿ ಭಾಗಿ

ಬಹಿರಂಗ ಸಭೆಗೂ ಮುನ್ನ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯಿಂದ ಆದಿವಾಸಿ ಕೊರಗ ಸಮುದಾ ಯದ ಜ್ವಲಂತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನ ಸೌಧದವರೆಗೆ ನಡೆದ ‘ಆದಿವಾಸಿ ಆಕ್ರೋಶ್ ರ್ಯಾಲಿ’ಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಬಹಿರಂಗ ಸಭೆಯ ವೇದಿಕೆ ಹಾಗೂ ಸಭಾಂಗಣದಲ್ಲಿ ಕೊರಗರ ಕುಲಕಸುಬಾದ ಬೆತ್ತದಿಂದ ತಯಾರಿಸಲಾಗುವ ಕೆಲ ಕರಕುಶಲ ಪ್ರಾಕಾರಗಳನ್ನು ಅಳವಡಿಸಲಾಗಿತ್ತು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಜನರನ್ನು ವಿಭಜಿಸುವ ಮೂಲಕ ಬ್ರಿಟಿಷರ ಒಡೆದು ಆಳುವ ನೀತಿ ಯನ್ನು ಅನುಸರಿಸುತ್ತಿದೆ. ಅದಕ್ಕೆ ತದ್ವಿರುದ್ಧವಾಗಿ ನಾವು ಐಕ್ಯತೆಯ ಶಕ್ತಿಯನ್ನು ತೋರಿಸುವ ಕೆಲಸ ಮಾಡುತ್ತೇವೆ. ಬಂಡವಾಳ ಶಾಹಿಗಳ ಶೋಷಣೆಯಿಂದ ಮುಕ್ತಗೊಳಿಸಿ, ದೇಶದಲ್ಲಿ ಅಸ್ತಿತ್ವದಲ್ಲಿರುವ ವಿನಾಶಕಾರಿ ಜಾತಿ ವ್ಯವಸ್ಥೆಯ ವಿರುದ್ಧ ಐಕ್ಯತೆಯನ್ನು ಸಾರುತ್ತೇವೆ. ಭಾರತದ ಗಣರಾಜ್ಯದ 75ನೆ ವರ್ಷಾಚರಣೆಗೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಜ್ಜಾಗುತ್ತಿದೆ. ಆದರೆ ಆ ಸರಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸಂವಿಧಾನದ ಮೇಲೆ ದಾಳಿ ಮಾಡಿ ನಾಶಕ್ಕೆ ಪ್ರಯತ್ನಿಸುತ್ತಿರುವುದು ಜನತೆಗೆ ಅರಿವಿದೆ. ಸಂಸತ್ತಿನಲ್ಲಿ ದೇಶದ ಗೃಹ ಸಚಿವ ಅಮಿತ್ ಶಾ ‘ಅಂಬೇಡ್ಕರ್ ಎನ್ನುವುದು ಫ್ಯಾಶನ್ ಆಗಿದೆ’ ಎಂದು ಹೇಳಿರುವ ಅವಮಾನದ ಮಾತನ್ನು ಜನತೆ ಮರೆತಿಲ್ಲ. ಅಂಬೇಡ್ಕರ್‌ರವರನ್ನು ಹೃದಯದಲ್ಲಿಟ್ಟು ಪೂಜಿಸುವ ಜನತೆ, ಅಂಬೇಡ್ಕರ್‌ಗೆ ಮಾಡಿರುವ ಅವಮಾನಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಂಸದೆ ಬೃಂದಾ ಕಾರಟ್ ಕೇಂದ್ರ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.














Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News