ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ: ಸಂಸದ ಬ್ರಿಜೇಶ್ ಚೌಟ ಆರೋಪ
ಮಂಗಳೂರು : ಕರ್ನಾಟಕದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಸರಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳ ಸಂಖ್ಯೆ ಮಿತಿ ಮೀರು ತ್ತಿದೆ. ಸೈಬರ್ ಕೇಸ್‌ನಲ್ಲಿ ಜನರು 2600 ಕೋಟಿ ರೂ. ಕಳೆದುಕೊಂಡಿದ್ದರೂ, ಸರಕಾರ ಮೌನವಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ದಿಕ್ಕು ದೆಸೆ ಇಲ್ಲದ, ಸಾಂಸ್ಕೃತಿಕ ಪರಂಪರೆ ಗೊತ್ತಿಲ್ಲದ, ಹಿಂದೂ ಭಾವನೆ ಘಾಸಿಗೊಳಿಸಿ, ಜಿಹಾದಿ ಮನಃಸ್ಥಿತಿ ಬೆಂಬಲಿಸಿ, ಹಣಕಾಸು ದಿವಾಳಿ ಮಾಡಿದ ದಾರಿದ್ರ್ಯದ ಡ್ರಗ್ಸ್ ದಂದೆ ಪೋಷಿಸುವ ಸರಕಾರ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸಿನ ಸೋತ ಅಭ್ಯರ್ಥಿಗಳು ಪೊಲೀಸರ ವರ್ಗಾವಣೆ ಮಾಡುವ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ. ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಮಹಿಳೆಯರು, ದನಗಳು, ಉದ್ಯಮಿಗಳು, ಗುತ್ತಿಗೆದಾರರಿಗೆ ಸುರಕ್ಷೆ ಇಲ್ಲದಂತಾಗಿದೆ. ಬೆಂಗಳೂರು ಅಪರಾಧಗಳ ರಾಜಧಾನಿಯಾಗುತ್ತಿದೆ. ಕ್ರಿಮಿನಲ್‌ಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ದನಗಳ ಕೆಚ್ಚಲು ಕೊಯ್ಯುವ ಮಾನಸಿಕತೆ ಹೆಚ್ಚುತ್ತಿದೆ. ಪಿಎಫ್‌ಐ, ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರ ಕೇಸು ವಾಪಸ್ ಪಡೆಯಲಾಗಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದಾಗಲೂ, ಸಿಎಂ, ಡಿಸಿಎಂ, ಗೃಹ ಸಚಿವರು ಮೌನವಹಿಸಿ, ಪರೋಕ್ಷ ಬೆಂಬಲ ನೀಡಿದ್ದರು. ಕ್ರಿಮಿನಲ್, ಮೂಲಭೂತವಾದಿ, ಜಿಹಾದಿಗಳಿಗೆ ಪರೋಕ್ಷವಾಗಿ ಬೆಂಬಲಿಸಲಾಗುತ್ತಿದೆ ಎಂದು ಆಪಾದಿಸಿದ ಅವರು ಇದನ್ನೆಲ್ಲ ಮುಂಬರುವ ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಿರುವುದಾಗಿ ತಿಳಿಸಿದರು.
*ನಮ್ಮಲ್ಲಿ ಮನಸ್ತಾಪ ಇಲ್ಲ : ಶಾಸಕ ವೇದವ್ಯಾಸ ಕಾಮತ್
ಸಂಸದ ಬ್ರಿಜೇಶ್ ಚೌಟ ಜತೆ ಯಾವುದೇ ಮನಸ್ತಾಪ ಇಲ್ಲ. ಮನೆಗೆ ಬೆಂಕಿ ಬಿದ್ದಾಗ ಕೆಲವರು ಅದೇ ಬೆಂಕಿಯಿಂದ ಬೀಡಿ ಸೇದುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಚರ್ಚೆ ನಡೆಯುತ್ತವೆ. ಅದನ್ನು ಹೊರಗೆ ಬಿಂಬಿಸುವುದು ಸರಿಯಲ್ಲ. ಸುಮ್ಮನೆ ಗಾಸಿಪ್‌ಗಳಿಗೆ ಆಸ್ಪದ ಕೊಡಬಾರದು. ನಮ್ಮದು ಸಂಘಟನಾತ್ಮ ಜಿಲ್ಲೆ ಎಂದು ಪತ್ರಕರ್ತರ ಪ್ರಶ್ನೆಗೆ ಶಾಸಕ ಡಿ.ವೇದವ್ಯಾಸ ಕಾಮತ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
*ದರೋಡೆಯಲ್ಲಿ ಸ್ಥಳೀಯರ ಕೈವಾಡ: ಭರತ್ ಶೆಟ್ಟಿ
ವಾಮಂಜೂರು ಶೂಟೌಟ್ ಪ್ರಕರಣದಲ್ಲಿ ರಿವಾಲ್ವರ್ ಯಾರದ್ದು ಎಂಬ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ಮುಚ್ಚಿ ಹಾಕಿದ್ದಾರೆ. ಕೋಟೆಕಾರು ದರೋಡೆ ಪ್ರಕರಣದಲ್ಲೂ ಸ್ಥಳೀಯರ ಕೈವಾಡ ಎಂದು ಶಾಸಕ ಭರತ್ ಶೆಟ್ಟಿ ಅಭಿಪ್ರಾಯಪಟ್ಟರು
ಸುದ್ದಿಗೋಷ್ಠಿಯಲ್ಲಿಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ತಿಲಕ್ ರಾಜ್, ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.