ಮಂಗಳೂರು: ಸೆಲೂನ್‌ಗೆ ನುಗ್ಗಿ ರಾಮಸೇನೆ ಕಾರ್ಯಕರ್ತರಿಂದ ದಾಂಧಲೆ
ಮಂಗಳೂರು: ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಯುನಿಸೆಕ್ಸ್ ಸೆಲೂನ್‌ಗೆ ರಾಮಸೇನೆಯ ಕಾರ್ಯಕರ್ತರು ನುಗ್ಗಿ ದಾಂಧಲೆಗೈದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ದಾಂಧಲೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತುಕೊಂಡ ಪೊಲೀಸರು ರಾಮಸೇನೆಯ ಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ ಹಾಗೂ ಟಿವಿ ಚಾನೆಲ್‌ನ ಕ್ಯಾಮರಾಮ್ಯಾನ್ ಶರಣ್ ರಾಜ್ ಸಹಿತ 14 ಮಂದಿಯನ್ನು ಸಂಜೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಇತರ ಆರೋಪಿಗಳನ್ನು ಫರಂಗಿಪೇಟೆಯ ಹರ್ಷರಾಜ್ ಯಾನೆ ಹರ್ಷಿತ್, ಮೂಡುಶೆಡ್ಡೆಯ ಮೋಹನದಾಸ್ ಯಾನೆ ರವಿ, ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ಉಳಾಯಿಬೆಟ್ಟುವಿನ ರವೀಶ್, ಬೆಂಜನಪದವು ಶಿವಾಜಿನಗರದ ಸುಖೇತ್, ವಾಮಂಜೂರಿನ ಅಂಕಿತ್, ಮೂಡುಶೆಡ್ಡೆ ಶಿವಾಜಿನಗರದ ಕಾಲಿಮುತ್ತು, ಬೊಂಡಂತಿಲ ತಾರಿಗುಡ್ಡೆಯ ಅಭಿಲಾಶ್, ಮೂಡುಶೆಡ್ಡೆ ಶಿವಾಜಿನಗರದ ದೀಪಕ್, ಸರಿಪಳ್ಳದ ವಿಘ್ನೇಶ್, ಮೂಡುಶೆಡ್ಡೆಯ ಶಿವಾಜಿನಗರದ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ.
ಈ ಆರೋಪಿಗಳ ವಿರುದ್ಧ ಬರ್ಕೆ ಠಾಣೆಯಲ್ಲಿ ಸೆ.329 (2), 324 (5), 74, 351 (3), 115 (2), 109, 352, 190 ನಡಿ ಪ್ರಕರಣ ದಾಖಲಿಸಲಾಗಿದೆ.
*ಪ್ರಕರಣದ ವಿವರ: ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಟ್‌ನ ಮೂರನೇ ಮಹಡಿಯಲ್ಲಿ ಕಲರ್ಸ್ ಯುನಿಸೆಕ್ಸ್ ಸೆಲೂನ್ ಕಾರ್ಯಾಚರಿಸುತ್ತಿದೆ.ಈ ಸೆಲೂನ್‌ಗೆ ಗುರುವಾರ ಪೂರ್ವಾಹ್ನ ಸುಮಾರು 11.50ರ ವೇಳೆಗೆ ರಾಮಸೇನೆಯ ಕಾರ್ಯಕರ್ತರು ಎನ್ನಲಾದ ದುಷ್ಕರ್ಮಿಗಳು ಏಕಾಏಕಿ ನುಗ್ಗಿ ಅವಾಚ್ಯ ಶಬ್ದದಿಂದ ಬೈದು, ಸೆಲೂನ್‌ನಲ್ಲಿದ್ದ ಸಿಬ್ಬಂದಿಗಳಿಗೆ ಹಲ್ಲೆಗೈದು ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸೆಲೂನ್‌ನಲ್ಲಿದ್ದ ಪೀಠೋಪಕರಣಗಳು, ಟೆಲಿಫೋನ್, ಲಾಫಿಂಗ್ ಬುದ್ಧ, ಕನ್ನಡಿ, ಬಾಗಿಲು ಸಹಿತ ಸಾಮಗ್ರಿಗಳಿಗೆ ಹಾನಿಗೈದಿದ್ದಾರೆ ಎಂದು ದೂರಲಾಗಿದೆ. ಈ ದುಷ್ಕರ್ಮಿಗಳು ಮಹಿಳಾ ಸಿಬ್ಬಂದಿಗೂ ಬೈದು ಬೆದರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಸೆಲೂನ್‌ಗೆ ನುಗ್ಗಿದ ರಾಮ ಸೇನೆ ಕಾರ್ಯಕರ್ತರು ಕಾಂಡೋಮ್‌ಗಳನ್ನು ತಂದು ಬೆಡ್ ಮೇಲೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
*ಸೆಲೂನ್‌ನಲ್ಲಿ ದಾಂಧಲೆ ನಡೆಸಿರುವುದು ರಾಮ ಸೇನೆಯ ಕಾರ್ಯಕರ್ತರು ಎಂದು ಪ್ರಸಾದ್ ಅತ್ತಾವರನು ಕುಡುಪುವಿನಲ್ಲಿರುವ ತನ್ನ ಮನೆಯಲ್ಲಿ ಸುದ್ದಿಗಾರರೊಂದಿಗೆ ಹೇಳಿಕೊಳ್ಳುತ್ತಿರುವಾಗಲೇ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯ ವಿರುದ್ಧ 2009ರಲ್ಲಿ ಮಂಗಳೂರಿನಲ್ಲಿ ನಡೆದ ಪಬ್ ದಾಂಧಲೆ ಪ್ರಕರಣ, 2015ರ ಸೆ.3ರಂದು ಸಾಹಿತಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಫೇಸ್‌ಬುಕ್ ಕಮೆಂಟ್ ಹಾಕಿದ ಆರೋಪ, ಮಂಗಳೂರು ವಿವಿ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ 17.50 ಲಕ್ಷ ರೂ. ಪಡೆದು ವಂಚನೆಗೈದ ಆರೋಪವೂ ಇತ್ತು. ಈ ಎಲ್ಲಾ ಪ್ರಕರಣದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದರು.
*ಟಿವಿ ಚಾನೆಲ್‌ನ ಕ್ಯಾಮರಾಮ್ಯಾನ್ ಶರಣ್‌ರಾಜ್ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಚಾನೆಲ್‌ನ ಕ್ಯಾಮರಾಮ್ಯಾನ್ ಶರಣ್ ರಾಜ್ ಎಂಬಾತನನ್ನು ಪೊಲೀಸರು ನಗರದಲ್ಲಿ ಬಂಧಿಸಿದ್ದಾರೆ. ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರನನ್ನು ಬಂಧಿಸಿದ ಬೆನ್ನಿಗೆ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಶರಣ್ ರಾಜ್‌ನನ್ನೂ ತಕ್ಷಣ ಬಂಧಿಸಿದ್ದಾರೆ. ಸೆಲೂನ್‌ಗೆ ನುಗ್ಗಿ ದಾಂಧಲೆ ನಡೆಸುವಾಗ ಶರಣ್ ರಾಜ್ ಕೂಡ ಅವರೊಂದಿಗೆ ತೆರಳಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಎಂದು ಆರೋಪಿಸಲಾಗಿದೆ. ರಾಮಸೇನೆಯ ಕಾರ್ಯಕರ್ತರ ದಾಂಧಲೆಯ ಬಗ್ಗೆ ಪೂರ್ಣ ಮಾಹಿತಿ ಇದ್ದರೂ ಕೂಡ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲ್ಲ ಎಂಬ ಆರೋಪವು ಶರಣ್‌ರಾಜ್‌ನ ವಿರುದ್ಧ ಕೇಳಿ ಬಂದಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ 2009ರ ಮಂಗಳೂರು ಪಬ್ ದಾಂಧಲೆ ಪ್ರಕರಣದ ಸಂದರ್ಭವೂ ದಾಂಧಲೆಕೋರರ ಜೊತೆ ತೆರಳಿ ಶರಣ್ ರಾಜ್ ವಿಡಿಯೋ ಮಾಡಿದ್ದನೆಂಬ ಆರೋಪದ ಮೇರೆಗೆ ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದರು.
*ನಾವು ಕಳೆದ 2 ವರ್ಷದಿಂದ ಸೆಲೂನ್ ನಡೆಸುತ್ತಿದ್ದೇವೆ. ವಾರಕ್ಕೊಮ್ಮೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲನೆ ಮಾಡುತ್ತಿದ್ದಾರೆ. ಈ ದಿನ ದಿಢೀರ್ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕೆಲವು ವಸ್ತುಗಳನ್ನು ಸ್ವತಃ ಅವರೇ ತಂದು ಬಿಸಾಡಿಸಿದ್ದಾರೆ ಎಂದು ಸೆಲೂನ್‌ನ ಮಾಲಕ, ಬಿಜೈ ಆನೆಗುಂಡಿ ನಿವಾಸಿ ಸುಧೀರ್ ಶೆಟ್ಟಿ ಆರೋಪಿಸಿದ್ದಾರೆ.
ವಸೂಲಿಗಾಗಿ ದಾಂಧಲೆ: ನವೀನ್ ಸೂರಿಂಜೆ
ಪ್ರತೀ ದಾಂಧಲೆಯ ಸಂದರ್ಭ ಹಿಂದುತ್ವದ ರಕ್ಷಣೆಗಾಗಿ ನಡೆಸಲಾದ ಕೃತ್ಯ ಎಂದು ಪ್ರಸಾದ್ ಅತ್ತಾವರ ಹೇಳಿಕೊಳ್ಳುತ್ತಿ ದ್ದಾನೆ. ಆದರೆ ಆತ ವಸೂಲಿಗಾಗಿ ದಾಂಧಲೆ ನಡೆಸುತ್ತಿದ್ದಾನೆ. ಈ ಹಿಂದೆ ಅಮ್ನೇಶಿ ಪಬ್ ದಾಂಧಲೆ ಸಂದರ್ಭವೂ ಆತ ವಸೂಲಿಯನ್ನೇ ಅಸ್ತ್ರವಾಗಿಸಿದ್ದ. ಅಂದರೆ ಅಮ್ನೇಶಿ ಪಬ್‌ನ ಎದುರಿನ ಮತ್ತೊಂದು ಪಬ್‌ನಿಂದ ಹಫ್ತಾ ಪಡೆದ ಬಳಿಕ ತನ್ನ ಕಾರ್ಯಕರ್ತರೊಂದಿಗೆ ಸೇರಿ ದಾಂಧಲೆ ನಡೆಸಿದ್ದ. ಹಿಂದೆ ಈತನ ಮನೆಗೆ ಪೊಲೀಸರು ದಾಳಿ ನಡೆಸಿದಾಗ ಮಕ್ಕಳ ನೀಲಿಚಿತ್ರದ ವಿಡಿಯೋ ಸಿಕ್ಕಿತ್ತು. ಹಾಗಾಗಿ ಈತನಿಗೆ ನೈತಿಕತೆಯ ಪಾಠ ಮಾಡುವ ಹಕ್ಕಿಲ್ಲ. ಮುಸ್ಲಿಮರ ವಿರುದ್ಧ ಸದಾ ಕೆಂಡ ಕಾರುವ ಬಜರಂಗದಳ, ಶ್ರೀರಾಮ ಸೇನೆಯಿಂದ ಹಿಂದುಳಿದ ಸಮುದಾಯದ ಯುವಕರು ದೂರ ಸರಿಯುತ್ತಿದ್ದಾರೆ. ರಾಮಸೇನೆಯಲ್ಲೂ ಬೆರಳೆಣಿಕೆಯಷ್ಟು ಕಾರ್ಯಕರ್ತರು ಮಾತ್ರ ಇದ್ದಾರೆ. ಹಾಗಾಗಿ ಸಂಘಟನೆಗೆ ಅಮಾಯಕ ಯುವಕರನ್ನು ಸೆಳೆಯಲು ಮತ್ತು ತನ್ನ ವಸೂಲಿ ದಂಧೆ ಮುಂದುವರಿಸಲು ಈ ದಾಂಧಲೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ಪತ್ರಕರ್ತ ನವೀನ್ ಸೂರಿಂಜೆ ಪ್ರತಿಕ್ರಿಯಿಸಿದ್ದಾರೆ.
*ಮಂಗಳೂರಿನ ಸೆಲೂನ್‌ನಲ್ಲಿ ನಡೆಸಲಾದ ದಾಂಧಲೆಗೆ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ನೇರ ಹೊಣೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಇಂತಹ ಅಧಿಕಾರಿಯನ್ನು ಮಂಗಳೂರು ಹಿಂದೆಂದೂ ಕಂಡಿಲ್ಲ. ಮಸಾಜ್ ಸೆಂಟರ್, ಮರಳು ಮಾಫಿಯಾ, ವೇಶ್ಯಾವಾಟಿಕೆ, ಗ್ಯಾಂಬ್ಲಿಂಗ್‌ಗಳನ್ನು ನಡೆಸಲು ಕಮಿಷನರ್ ಮುಕ್ತ ಅವಕಾಶ ಒದಗಿಸಿದ್ದಾರೆ. ಅವರನ್ನು ವರ್ಗಾಯಿಸಿ ಎಂದು ಮಂಗಳೂರಿನ ಜನಪರ ಸಂಘಟನೆಗಳು ಹೋರಾಟ ನಡೆಸುತ್ತಾ ಬಂದರೂ ವರ್ಗಾಯಿಸಿಲ್ಲ. ಎಲ್ಲರೂ ಕಮಿಷನರ್‌ರನ್ನು ರಕ್ಷಿಸುತ್ತಿದ್ದಾರೆ. ಅದೀಗ ಗೂಂಡಾಗಿರಿ ಎಸಗಲು ರಾಮಸೇನೆಗೆ ನೆಪ ಒದಗಿಸಿದೆ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಕಳಂಕಿತ ಕಮಿಷನರ್ ಮೇಲೆ ಕ್ರಮ ಕೈಗೊಳ್ಳದ ಉಸ್ತುವಾರಿ ಸಚಿವರು, ಗೃಹ ಸಚಿವರೂ ಇಂದಿನ ಘಟನೆಗೆ ಹೊಣೆಗಾರರು. ಎಲ್ಲರ ವಿರೋಧದ ನಡುವೆಯೂ ಭ್ರಷ್ಟ ಕಮಿಷನರ್ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದರು ಎನ್ನಲಾದ ಸ್ಪೀಕರ್ ಯು.ಟಿ. ಖಾದರ್ ಹಾಗೂ ಅವರ ಸೋದರರಿಗೆ ಈಗ ತೃಪ್ತಿಯಾಗಬಹುದು ಎಂದು ಮುನೀರ್ ಕಾಟಿಪಳ್ಳ ವ್ಯಂಗ್ಯವಾಡಿದ್ದಾರೆ.
*ಬಿಜೈ ಬಳಿಯ ಕಲರ್ಸ್ ಯುನಿಸೆಕ್ಸ್ ಸೆಲೂನ್ ಮೇಲೆ ರಾಮಸೇನೆ ಕಾರ್ಯಕರ್ತರು ದಾಂಧಲೆ ನಡೆಸಲು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ನೇರ ಹೊಣೆ. ಅನೈತಿಕ ಚಟುವಟಿಕೆಗಳಿಗೆ ಮುಕ್ತ ಅವಕಾಶ ಮಾಡಿಕೊಟ್ಟು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಕಾರಣಕ್ಕೆ ಮತ್ತೆ ಗೂಂಡಾಗಿರಿ ತಲೆಎತ್ತಿದೆ ಎಂದು ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದ್ದಾರೆ.