ಕಡಬ| ಆಡುಗಳನ್ನು ಕಳವುಗೈದು ಕೊಂದು ಆ್ಯಂಬುಲೆನ್ಸ್‌ನಲ್ಲಿ ಸಾಗಾಟಕ್ಕೆ ಯತ್ನ: ಸ್ಥಳೀಯರಿಗೆ ಸಿಕ್ಕಿಬಿದ್ದ ಆರೋಪಿಗಳು
ಕಡಬ: ಗುಡ್ಡದಲ್ಲಿ ಮೇಯಲು ಬಿಟ್ಟಿದ್ದ ಆಡುಗಳನ್ನು ಕಳವುಗೈದು ಕೊಂದು ವಿಶ್ವ ಹಿಂದೂ ಪರಿಷತ್‌ಗೆ ಸೇರಿದ್ದೆನ್ನಲಾದ ಆ್ಯಂಬುಲೆನ್ಸ್‌ನಲ್ಲಿ ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ಆರೋಪಿಗಳು ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಘಟನೆ ಸೋಮವಾರ ರಾತ್ರಿ ಐತ್ತೂರು ಗ್ರಾಮದ ಕೊಡೆಂಕೀರಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಗುಡ್ಡದಲ್ಲಿ ಮೇಯಲು ಬಿಟ್ಟಿದ್ದ ಕೊಡೆಂಕೀರಿ ನಿವಾಸಿ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಎರಡು ಆಡುಗಳನ್ನು ಸೋಮವಾರ ರಾತ್ರಿ ಬೈಕ್‌ನಲ್ಲಿ ಬಂದ ನಾಲ್ವರು ಕಳ್ಳರು ಹಿಡಿದು ಕೊಂದಿದ್ದಾರೆ. ಬಳಿಕ ಅವುಗಳನ್ನು ಕಡಬದ ವಿಶ್ವ ಹಿಂದೂ ಪರಿಷತ್‌ಗೆ ಸೇರಿದ್ದೆನ್ನಲಾದ ಆ್ಯಂಬುಲೆನ್ಸ್‌ನಲ್ಲಿ ಸಾಗಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆನ್ನಲಾಗಿದೆ. ಈ ವೇಳೆ ಸ್ಥಳೀಯ ಮಹಿಳೆಯೊಬ್ಬರು ಗಮನಿಸಿ ಬೊಬ್ಬೆ ಹೊಡೆದಿದ್ದಾರೆ. ಈ ವೇಳೆ ಬೈಕನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೈಕ್‌ನ ಜಾಡು ಹಿಡಿದ ಸ್ಥಳೀಯರು ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಿಸಿದಾಗ ಆಡನ್ನು ಕಳವುಗೈಯಲು ಯತ್ನಿಸಿರುವುದು ಬಯಲಾಗಿದೆ. ಆ ಬಳಿಕ ಆಡಿನ ಮಾಲಕನಿಗೆ ಪರಿಹಾರ ನೀಡುವ ಮೂಲಕ ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಕೃತ್ಯಕ್ಕೆ ಬಳಸಿದ ಆ್ಯಂಬುಲೆನ್ಸ್‌ನಲ್ಲಿ ಹಿಂದಿನಿಂದಲೂ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.