ಮೀಫ್‌ನಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ್ ಕಾರ್ಯಾಗಾರ
ಮಂಗಳೂರು, ಜ.30: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ( ಮೀಫ್ ) ಮತ್ತು ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಇವುಗಳ ಸಂಯುಕ್ತ ಆಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ಪಾಸಿಂಗ್ ಪ್ಯಾಕೇಜ್ ಕಾರ್ಯಾಗಾರ ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಆರಂಭಗೊಂಡಿತು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ನಿಧಾನ ಕಲಿಕಾ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳ 2 ದಿವಸಗಳ ವಿಶೇಷ ಕಾರ್ಯಾಗಾರ ವನ್ನು ಬಶ್ರಾ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಅಬ್ದುಲ್ ಅಝೀಝ್ ಬಿ.ಎ ಉದ್ಘಾಟಿಸಿದರು.
ಪುತ್ತೂರು ಬ್ಲಾಕ್ ಎಜುಕೇಶನಲ್ ಆಫೀಸರ್ ಲೋಕೇಶ್ ಎಸ್.ಆರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸದಸ್ಯರಾದ ಪರ್ವೆಝ್ ಅಲಿ, ಕಾರ್ಯಕ್ರಮ ಕಾರ್ಯದರ್ಶಿ ಮುಹಮ್ಮದ್ ಶಾರಿಕ್, ಬುಶ್ರಾ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬದ್ರುದ್ದೀನ್ ಬಿ.ಎ, ಉಪಸ್ಥಿತರಿದ್ದರು.
ಶಿಕ್ಷಣ ಇಲಾಖೆಯ ಜಿಲ್ಲಾ ತರಬೇತುದಾರರಾದ ಸಯ್ಯದ್ ಶರೀಫ್ ನಾರಾವಿ, ಆಶಾ ಮರಿಯಾ, ಇನಾಝ್ , ಅಕ್ಷತಾ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ.
ಪುತ್ತೂರು, ಸುಳ್ಯ, ಆತೂರು, ಉಪ್ಪಿನಂಗಡಿ, ವ್ಯಾಪ್ತಿಯ ವಿದ್ಯಾ ಸಂಸ್ಥೆಗಳ ಸುಮಾರು 110 ವಿದ್ಯಾರ್ಥಿಗಳು ಭಾಗವಹಿಸಿದ್ದು, ಮೀಫ್ ಆಡಳಿತ ಕಾರ್ಯದರ್ಶಿ ಅನ್ವರ್ ಹುಸೈನ್ ಸ್ವಾಗತಿಸಿದರು, ಮುಖ್ಯೋಪಾಧ್ಯಾಯಿನಿ ದೀಪಿಕಾ ವಂದಿಸಿ, ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.