×
Ad

ಶೋಷಿತರ ಬೆಳಕು - ಕುದ್ಮುಲ್ ರಂಗರಾವ್ ಕೃತಿ ಬಿಡುಗಡೆ

Update: 2025-01-30 18:49 IST

ಮಂಗಳೂರು, ಜ.30: ಡಾ. ಕೆ.ಪಿ.ಮಹಾಲಿಂಗು ಕಲ್ಕುಂದ ಅವರ 13ನೇ ಕೃತಿ ಶೋಷಿತರ ಬೆಳಕು ಕುದ್ಮುಲ್ ರಂಗರಾವ್ ಗುರುವಾರ ಅನಾವರಣಗೊಂಡಿತು.

ಕುದ್ಮುಲ್ ರಂಗರಾವ್ ಅವರ 97ನೇ ಪುಣ್ಯ ತಿಥಿ ದಿನದ ಅಂಗವಾಗಿ ಅಖಿಲ ಭಾರತ ಮುಂಡಾಲ ಯುವ ವೇದಿಕೆ-ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕುದ್ಮುಲ್ ರಂಗರಾವ್ ಎಜುಕೇಶನಲ್ ಟ್ರಸ್ಟ್ ಬಾಬುಗುಡ್ಡ, ಹಾಗೂ ಚಳವಳಿ ಪ್ರಕಾಶನ ನಂಜನಗೂಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಸಮಾಧಿ ಸ್ಥಳದಲ್ಲಿ ನಡೆದ ಸಮಾರಂಭದಲ್ಲಿ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ನೂತನ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಕುದ್ಮುಲ್ ರಂಗರಾವ್ ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ ಅವರಿಗಿಂತ ಮೊದಲು ಮತ್ತು ಡಾ.ಅಂಬೇಡ್ಕರ್ ಸಾಮಾಜಿಕ ಹೋರಾಟಗಳನ್ನು ಮಾಡುವ ಮೊದಲೇ ಶೋಷಿತರ ಏಳಿಗೆಗಾಗಿ ದುಡಿದಿದ್ದಾರೆ. ಅಸ್ಪಶ್ಯತೆ ಆಚರಣೆ ವಿರುದ್ಧವಾಗಿ ಆನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ.ಅಸ್ಪಶ್ಯರಿಗಾಗಿ ಕುದ್ಮುಲ್ ರಂಗರಾವ್ 1892ರಲ್ಲಿ ಚಿಲಿಂಬಿಯಲ್ಲಿ ಶಾಲೆ ಪ್ರಾರಂಭಿಸಿ ಅಸ್ಪಶ್ಯರ ಜೀವನದಲ್ಲಿ ಹೊಸ ಬೆಳಕನ್ನು ಮೂಡಿಸಿದ್ದರು. ಅಸ್ಪಶ್ಯ ಹೆಣ್ಣು ಮಕ್ಕಳಿಆಗಗಿ ವಸತಿ ನಿಲಯ , ತರಬೇತಿ ಶಾಲೆ ಪ್ರಾರಂಭಿಸಿ ಅವರ ಹಿತಕ್ಕಾಗಿ ಶ್ರಮಿಸಿದ್ದರು. ಹೀಗಾಗಿಯೇ ಮಹಾತ್ಮ ಗಾಂಧಿ ಕುದ್ಮುಲ್ ರಂಗರಾವ್ ಅವರನ್ನು ‘ನನ್ನ ಗುರು’ ಎಂದು ಕರೆದರು. ಈಗ ಅವೆಲ್ಲವೂ ಇತಿಹಾಸ ಎಂದರು.

ಕುದ್ಮುಲ್ ರಂಗರಾವ್ ಸಮಾಧಿ ಸ್ಥಳವನ್ನು ಉತ್ತಮ ಸ್ಮಾರಕವಾಗಿ, ಥೀಮ್ ಪಾರ್ಕ್ ಆಗಿ ಸರಕಾರ ನಿರ್ಮಿಸಬೇಕು. ಕುದ್ಮುಲ್‌ರ ಧ್ಯೇಯ , ಆದರ್ಶಗಳು ಅಜರಾಮರವಾಗಿ ಉಳಿಯಬೇಕು ಎಂದು ಹೇಳಿದರು.

ಮೈಸೂರಿನ ಡಾ.ಕೆ.ಪಿ. ಮಾಹಲಿಂಗು ಕಲ್ಕುಂದ ಅವರ 13ನೇ ಕೃತಿ ‘ಶೋಷಿತರ ಬೆಳಕು’ ಕುದ್ಮುಲ್ ರಂಗರಾವ್ ಉತ್ತಮವಾಗಿ ಮೂಡಿ ಬಂದಿದೆ. ಮೈಸೂರಿನ ವ್ಯಕ್ತಿ ದಕ್ಷಿಣ ಕನ್ನಡದ ಸಾಮಾಜಿಕ ಹೋರಾಟಗಾರ ಕುದ್ಮುಲ್ ರಂಗರಾವ್ ಬಗ್ಗೆ ಕೃತಿ ರಚಿಸಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ ಎಂದು ಹೇಳಿದರು.

ಲೇಖಕರಾದ ಅಣ್ಣು , ಬಾಬುಗುಡ್ಡ ಕುದ್ಮುಲ್ ರಂಗರಾವ್ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷ ಬಿ.ಆರ್. ಹೃದಯನಾಥ್, ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕಾಪಿಕಾಡ್ , ಮಂಗಳುರು ವಿವಿ ಸಿಂಡಿಕೇಟ್ ಸದಸ್ಯ ರಘುರಾಜ್ ಕದ್ರಿ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ನಾಯಕ್ ಇಂದಾಜೆ, ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಉಪಕರಣ ಕೇಂದ್ರದ ಮುಖ್ಯಸ್ಥ ಎ.ಜಿ. ವಿವೇಕಾನಂದ, ಕರಾಮುವಿ ಮಂಗಳೂರು ಪ್ರಾದೇಶಿಕ ಕೇಂದ್ರ ಪ್ರಾದೇಶಿಕ ನಿರ್ದೇಶಕರು ಡಾ. ಬಿ. ಬಸವರಾಜು, ಮಂಗಳೂರಿನ ಪರಿಶಿಷ್ಠಜಾತಿ ಪರಿಶಿಷ್ಠ ವರ್ಗಗಳ ಅಧ್ಯಯನ ಮತ್ತು ಅಭಿವೃದ್ದಿ ಟ್ರಸ್ಟ್‌ನ ಮೋಹನಾಂಗಯ್ಯ ಸ್ವಾಮಿ , ಕುದ್ಮುಲ್ ರಂಗರಾವ್ ಸ್ಮಾರಕ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ದೇವೇಂದ್ರ. ಕೆ , ಆಕೃತಿ ಪಬ್ಲಿಕೇಶನ್ಸ್‌ನ ಕಲ್ಲೂರು ನಾಗೇಶ್, ಚಿಂತಕ ಭೂಪೇಶ್ ಪಾಲನ್ , ಉಡುಪಿಯ ಉಪನ್ಯಾಸಕ ಕೆ.ಕೃಷ್ಣಾನಂದ ಮತ್ತಿತರರು ಭಾಗವಹಿಸಿದ್ದರು. ಸಚಿನ್ ಪರ್ಕಳ ಸ್ವಾಗತಿಸಿದರು. ಡಾ. ಕೆ.ಪಿ.ಮಹಾಲಿಂಗು ಕಲ್ಕುಂದ ವಂದಿಸಿದರು.

ಕುದ್ಮುಲ್ ರಂಗರಾವ್ ಸಮಾಧಿಗೆ ಪುಷ್ಪನಮನ: ಕುದ್ಮುಲ್ ರಂಗರಾವ್ ಪುಣ್ಯತಿಥಿಯ ಅಂಗವಾಗಿ ಅವರ ಸಮಾಧಿಗೆ ಭೇಟಿ ನೀಡಿದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ಮನೋಜ್ ಕುಮಾರ್, ಉಪಮೇಯರ್ ಭಾನುಮತಿ ಮತ್ತಿತರರು ಪುಷ್ಪಾರ್ಜನೆ ಮಾಡಿ , ಗೌರವ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News