ದ.ಕ. ಜಿಲ್ಲಾ ಕಾರಾಗೃಹದ ಜೈಲರ್‌ಗೆ ಹಲ್ಲೆ: ಪ್ರಕರಣ ದಾಖಲು
ಮಂಗಳೂರು, ಜ.30: ನಗರದ ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ರಾಜಾ ಯಾನೆ ಜಪಾನ್ ಮಂಗ ಎಂಬಾತನು ಕರ್ತವ್ಯ ನಿರತ ಜೈಲರ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ತಾನು ಜೈಲಿನ ‘ಎ ಬ್ಲಾಕ್’ನ ಕೊಠಡಿ ಸಂಖ್ಯೆ 3ರಲ್ಲಿ ಬೀಗ ಮುದ್ರೆ ಮಾಡುವ ಸಂದರ್ಭ ಕೈದಿ ರಾಜಾ ಲೈಟರ್ ನೀಡುವಂತೆ ಒತ್ತಾಯ ಮಾಡಿದ್ದಾನೆ. ಆವಾಗ ತಾನು ನನ್ನ ಬಳಿ ಲೈಟರ್ ಸಿಗುವುದಿಲ್ಲ ಎಂದಾಗ ಏರುಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ‘ಇಲ್ಲ ಅಂದರೆ ಅಧೀಕ್ಷಕರಿಗೆ ಹೇಳು ರಾಜಾನಿಗೆ ಲೈಟರ್ ಬೇಕಂತೆ’ ಎಂದಿದ್ದಾನೆ. ಅದಕ್ಕೆ ತಾನು ಸರಿಯಾಗಿ ಮಾತನಾಡು ಅವಾಚ್ಯ ಶಬ್ದ ಬೇಡ ಎಂದು ಹೇಳಿದೆ. ಆಗ ಆತ ಮತ್ತಷ್ಟು ನಿಂದಿಸುತ್ತಾ ಕೊಠಡಿಯ ಒಳಗಡೆಯಿಂದಲೇ ತನ್ನ ಬಲಕೈಯನ್ನು ಎಳೆದು ಪರಚಿ ತಿರುಗಿಸಿದ್ದಾನೆ. ಇದರಿಂದ ತನ್ನ ಬಲಕೈಗೆ ತೀವ್ರ ಪೆಟ್ಟಾಗಿದೆ ಎಂದು ಜೈಲರ್ ವಿಜಯ್ ಕುಮಾರ್ ಸಂಕಾ ಬರ್ಕೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಜೈಲರ್ ವಿಜಯ್ ಕುಮಾರ್ ಸಂಕಾ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.