×
Ad

ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ: ದ.ಕ. ಜಿ.ಪಂ. ಸಿಇಒ ಡಾ. ಆನಂದ್

Update: 2025-02-01 20:06 IST

ಮಂಗಳೂರು: ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರಕಾರವು ಯುವನಿಧಿ ಪ್ಲಸ್ ಯೋಜನೆಯಡಿ ಉಚಿತ ಕೌಶಲ್ಯ ತರಬೇತಿ ನೀಡಲು ಪ್ರಾರಂಭಿಸಿದೆ ಎಂದು ದ.ಕ. ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಹೇಳಿದ್ದಾರೆ.

ದ.ಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೌಶಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಯುವನಿಧಿ ಫಲಾನುಭವಿಗಳು ಕೌಶಲ್ಯ ತರಬೇತಿ ಪಡೆಯಲು ಈಗಾಗಲೇ ಅನುಮೋದನೆ ಪಡೆದಿರುವ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ, ಉದ್ಯಮಶೀಲತಾಭಿವೃದ್ಧಿ ಕೇಂದ್ರ ಕರ್ನಾಟಕ ಮತ್ತು ಸರಕಾರ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಸಂಪರ್ಕಿಸುವಂತೆ ಸೂಚಿಸಿದರು.

2024 ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೂ ಯುವನಿಧಿ ಯೋಜನೆಯನ್ನು ವಿಸ್ತರಿಸಿದ್ದು, ಎಲ್ಲಾ ಪದವಿ / ಡಿಪ್ಲೋಮಾ / ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನೋಂದಣಿ ಕೇಂದ್ರ ತೆರೆದು ನೋಂದಣಿ ಮೇಳ ಆಯೋಜಿಸಲಾಗುತ್ತದೆ. ನೋಂದಣಿ ಮೇಳ ಆಯೋಜಿಸಿರುವ ಕುರಿತು ಆಯಾ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿಗೆ ಮಾಹಿತಿ ನೀಡಿ ನೋಂದಣಿ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಸಿಇಒ ಸಲಹೆ ನೀಡಿದರು

ಸರ್ಕಾರದ ವತಿಯಿಂದ ಜಿಲ್ಲೆಯಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಇನ್ನಿತರ ವಿದ್ಯಾರ್ಹತೆ ಇರುವ ಉದ್ಯೋಗಾಸಕ್ತ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಜಿಲ್ಲೆಯಲ್ಲಿರುವ ಉದ್ಯೋಗದಾತ ಕೈಗಾರಿಕಾ ಸಂಸ್ಥೆಗಳು ಭಾಗವಹಿಸಿ ಈ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ರಾಜ್ಯ ಸರಕಾರದ ವತಿಯಿಂದ ವೃತ್ತಿಪರ ಅಲ್ಪಾವಧಿ ಕೌಶಲ್ಯ ತರಬೇತಿ ನೀಡಿ ಉದ್ಯೋಗಾವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದಿಂದ ಅನುಮೋದನೆ ಪಡೆಯಲು ಸೂಕ್ತ ಪ್ರಸ್ತಾವನೆಯನ್ನು ಕೈಗಾರಿಕಾ ಸಂಸ್ಥೆಗಳಿಂದ ಜಿಲ್ಲಾ, ಕೌಶಲ್ಯಾಭಿವೃದ್ಧಿ ಕಛೇರಿಗೆ ಸಲ್ಲಿಸುವಂತೆ ಎಲ್ಲಾ ಕೈಗಾರಿಕಾ ಸಂಸ್ಥೆಗಳಿಗೆ ಡಾ. ಆನಂದ್ ಕೆ ಸೂಚಿಸಿದರು.

ಜಿ.ಪಂ ಉಪ ಕಾರ್ಯದರ್ಶಿ ಜಯಲಕ್ಷ್ಮೀ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿ ಸೋಜ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರದ ಜಂಟಿ ನಿರ್ದೇಶಕ ಅರವಿಂದ ಡಿ ಬಾಳೇರಿ, ರುಡ್ ಸೆಟ್ ನಿರ್ದೇಶಕ ಅಜೇಯ, ಕೆನರಾ ಕೈಗಾರಿಕಾ ಸಂಘದ ಉಪಾಧ್ಯಕ್ಷ ಎಂ.ಡಿ. ಪೂಜಾರಿ, ಕೆಸಿಸಿಐ ಮೈತ್ರೇಯ ಎ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News