ಮನಪಾ ಬಜೆಟ್‌ನಲ್ಲಿ ಕ್ರೀಡೆಗೆ ಹೆಚ್ಚಿನ ಅನುದಾನ: ಮೇಯರ್ ಮನೋಜ್ ಕುಮಾರ್
ಮಂಗಳೂರು: ಕ್ರೀಡೆಗೆ ಹಾಗೂ ಕ್ರೀಡಾಪಟುವಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಲಾಗುವುದು ಎಂದು ಮನಪಾ ಮೇಯರ್ ಮನೋಜ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಹಾಗೂ ವಿ ವನ್ ಅಕ್ವಾಟಿಕ್ ಕ್ಲಬ್ ಸಹಯೋಗದಲ್ಲಿ ರವಿವಾರ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಎಮ್ಮೆಕೆರೆ ಈಜುಕೊಳದಲ್ಲಿ ‘ವಿ ವನ್ ಅಕ್ವಾ ಕಾರ್ನಿವಲ್ -2025 ಮೇಯರ್ ಕಪ್’ರಾಜ್ಯಮಟ್ಟದ ಈಜು ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಮಂಗಳೂರಿನಲ್ಲಿ ಈಜು ತರಬೇತಿ ಪಡೆದು ಉತ್ತಮ ಈಜುಪಟುಗಳಾಗಿ ರೂಪುಗೊಳ್ಳಲು ಉತ್ತಮ ಅವಕಾಶ ಇದೆ ಎಂದು ಅವರು ಹೇಳಿದರು.
ಸ್ಪರ್ಧೆಯು ಬಾಲಕ ಬಾಲಕಿಯರ ಒಟ್ಟು ಹದಿನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ರಾಜ್ಯದ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ನಾನ್ ಮೆಡ್ಲಿಸ್ಟ್ ವಿಭಾಗದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ೩೦೦ಕ್ಕೂ ಅಧಿಕ ಈಜುಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರು ಇದೇ ಸಂದರ್ಭದಲ್ಲಿ ಭಾರತೀಯ ಪ್ಯಾರಾಲಿಂಪಿಕ್ಸ್ ಈಜುಗಾರ ಶರತ್ ಎಂ. ಗಾಯಕ್ವಾಡ್ ಅವರನ್ನು ಸನ್ಮಾನಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿ ಸೋಜ ಶುಭ ಹಾರೈಸಿದರು.
ವಿ ವನ್ ಅಕ್ವಾಟಿಕ್ ಕ್ಲಬ್ ಅಧ್ಯಕ್ಷ ಮಧುರಾಜ್ ಜಿ, ನಿರ್ದೇಶಕರಾದ ನವೀನ್, ರೂಪಾ ಜಿ ಪ್ರಭು , ಈಜು ತರಬೇತುದಾರ ಲೋಕರಾಜ ವಿ.ಎಸ್. ಉಪಸ್ಥಿತರಿದ್ದರು. ಅಕ್ಷತಾ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.