×
Ad

ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ: ಬಚ್ಚಿಟ್ಟಿದ್ದ ಪಿಸ್ತೂಲು ಪತ್ತೆ

Update: 2025-02-02 19:47 IST

ಉಳ್ಳಾಲ: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ ಶಶಿ ಥೇವರ್ ಅಜ್ಜಿನಡ್ಕ ಬಳಿ ಬಚ್ಚಿಟ್ಟಿದ್ದ ಪಿಸ್ತೂಲು ಶನಿವಾರ ರಾತ್ರಿ ಪತ್ತೆಯಾಗಿದೆ.

ಅಜ್ಜಿನಡ್ಕ ಬಳಿ ಶಶಿ ಥೇವರ್ ಪಿಸ್ತೂಲು ಬಚ್ಚಿಟ್ಟಿರುವ ವಿಚಾರವನ್ನು ಆರೋಪಿ ಮುರುಗನ್ ಡಿ ಥೇವರ್ ತನಿಖೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ‌ಮುರುಗನ್ ಡಿ ಥೇವರ್ ಎಂಬಾತನನ್ನು ಪೊಲೀಸರು ಶನಿವಾರ ಮಹಜರು ನಡೆಸಲು ಅಜ್ಜಿನಡ್ಕ ಬಳಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಆತ ಪೊಲೀಸ್ ಕಾನ್ಸ್ ಟೇಬಲ್ ಮಂಜುನಾಥ್ ರವರ ಮರ್ಮಾಂಗಕ್ಕೆ ಒದ್ದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ಸಂದರ್ಭ  ಉಳ್ಳಾಲ ಇನ್ಸ್‌ಪೆಕ್ಟರ್ ಬಾಲಕೃಷ್ಣ ಗಾಳಿಯಲ್ಲಿ ಗುಂಡು ಹಾರಿಸಿದ್ದರು.

ಬಳಿಕ ಪೊಲೀಸ್ ಬಂದೋಬಸ್ತ್ ನಲ್ಲಿ ಪೊಲೀಸರು ಅಜ್ಜಿನಡ್ಕ ಬಳಿ ಬಚ್ಚಿಟ್ಟಿರುವ ಪಿಸ್ತೂಲು ಪತ್ತೆ ಹಚ್ಚಲು ಶೋಧ ನಡೆಸಿ ದಾಗ ಅಜ್ಜಿನಡ್ಕದ ಗುಡ್ಡದ ಬಳಿ ಕಲ್ಲಿನ ನಡುವೆ ಮಣ್ಣು ಶೇಖರಿಸಿ ಅದರ ನಡುವೆ ಇಟ್ಟಿದ್ದ ಪಿಸ್ತೂಲು ಪತ್ತೆಯಾಗಿದೆ. ಪಿಸ್ತೂಲುನ್ನು ಮೂರು ಪ್ಲಾಸ್ಟಿಕ್ ಕವರ್ ನಲ್ಲಿ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೃತ್ಯವನ್ನು ಈ ಬಂಧಿತ ಆರೋಪಿಗಳ ಜೊತೆ ಶಶಿ ಥೇವರ್ ಮಾಡಿಟ್ಟಿರಬೇಕು. ಶಶಿಥೇವರ್ ಇದೇ ಊರಿನ ವ್ಯಕ್ತಿ ಆಗಿದ್ದು, ಹೆಸರು ಬದಲಾಯಿಸಿ ಕೊಂಡಿದ್ದಾನೆ. ಆತನ ಬಂಧನ ಆದಲ್ಲಿ ಎಲ್ಲಾ ವಿಚಾರಗಳು ಬಹಿರಂಗವಾಗಲಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂಬೈಗೆ ತಂಡ: ತಲೆಮರೆಸಿಕೊಂಡಿರುವ ಆರೋಪಿ ಶಶಿ ಥೇವರ್ ಮುಂಬೈ ನಲ್ಲಿ ಇರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರ ಒಂದು ತಂಡ ಮುಂಬೈಗೆ ತೆರಳಿದೆ. ಈ ದರೋಡೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳಿದ್ದು, ಇನ್ನು ಮೂವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News