×
Ad

ಗ್ರಾಮ ಆಡಳಿತ ಅಧಿಕಾರಿಗಳ ಮೌನ ಮುಷ್ಕರ ಎರಡನೇ ದಿನಕ್ಕೆ

Update: 2025-02-11 19:19 IST

ದೇರಳಕಟ್ಟೆ: ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಇದರ ಆಶ್ರಯದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಾಟೆಕಲ್ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರ ಆರಂಭಿಸಿದ ಅನಿರ್ದಿಷ್ಟಾವಧಿ ಎರಡನೇ ಹಂತದ ಮೌನ ಮುಷ್ಕರ ಮಂಗಳವಾರ ಕೂಡ ಮುಂದುವರಿದಿದೆ.

ಕೆಲಸದ ಒತ್ತಡ, ಮೂಲಭೂತ ಸೌಕರ್ಯ ಕೊರತೆ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಾಲ್ಕು ತಿಂಗಳ ಹಿಂದೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಬೇಡಿಕೆ ಈಡೇರಿಕೆ ಬಗೆ ಸರ್ಕಾರದ ಭರವಸೆ ದೊರೆತ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದಿದ್ದೆವು. ಆದರೆ ಸರ್ಕಾರ ನಮ್ಮ ಸಮಸ್ಯೆ ಬಗೆ ಗಂಭೀರವಾಗಿ ಪರಿಗಣಿಸಿದ ಕಾರಣ ಮತ್ತೆ ಮುಷ್ಕರ ಆರಂಭಿಸಿದ್ದೇವೆ ಎಂದು ಉಳ್ಳಾಲ ಗ್ರಾಮಕರಣಿಕ ಸುರೇಶ್ ತಿಳಿಸಿದರು.

ನಮಗೆ ಗ್ರಾಮಕರಣಿಕ ಹುದ್ದೆ ಮಾತ್ರ ಸರ್ಕಾರ ನೀಡಿದೆ. ಆದರೆ ವ್ಯವಸ್ಥೆ ಇಲ್ಲ. ನಮ್ಮದು ತಾಂತ್ರಿಕ ಕೆಲಸ ಅಲ್ಲ. ನಮಗೆ ಕೇಳಿದ ಕಡೆ ವರ್ಗಾವಣೆ ಕೊಡುತ್ತಿಲ್ಲ. ಗಂಡ ಒಂದು ಕಡೆ, ಹೆಂಡತಿ ಇನ್ನೊಂದು ಕಡೆ ಕೆಲಸ ಮಾಡುವವರು ಇದ್ದಾರೆ. ದಂಪತಿಗೆ ಒಂದೇ ಕಡೆ ಕೆಲಸ ನೀಡಲಿ. ಕೇವಲ ಕೆಲಸಕ್ಕಾಗಿ ಕುಟುಂಬ ಕಳಕೊಳ್ಳುವ ಪರಿಸ್ಥಿತಿ ಬಂದೊದಗಿದೆ ಎಂದು ಬಾಳೆಪುಣಿ ಇರಾ ಗ್ರಾಮದ ಗ್ರಾಮಕರಣಿಕ ಲಿಂಗಪ್ಪ ತಿಳಿಸಿದರು.

ತಾಲೂಕು ಕಚೇರಿಗೆ ಆಗಮಿಸಿದ ಗ್ರಾಮಸ್ಥರು: ಗ್ರಾಮಕರಣಿಕರ ಮೌನ ಮುಷ್ಕರದಿಂದ ಗ್ರಾಮಕರಣಿಕರ ಕೆಲಸ ಕಾರ್ಯಗಳು ಸ್ಥಗಿತಗೊಂಡಿದೆ. ಆದರೆ ಆದಾಯ ಪ್ರಮಾಣ ಪತ್ರ ಸಹಿತ ತುರ್ತಾಗಿ ಬೇಕಾದ ಇತರ ದಾಖಲೆಗಳಿಗೆ ಗ್ರಾಮಕರಣಿಕರ ಸಹಿ ಪಡೆದು ಕೊಳ್ಳಲು ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ನಾಟೆಕಲ್ ತಾಲೂಕು ಕಚೇರಿ ವರೆಗೆ ಅಲೆದಾಡಬೇಕಾಯಿತು. ವಿವಿಧ ಗ್ರಾಮಗಳ ಗ್ರಾಮಸ್ಥರ ಬಹುತೇಕ ಕೆಲಸಗಳನ್ನು ತಾಲೂಕು ಕಚೇರಿಯಲ್ಲೇ ಗ್ರಾಮಕರಣಿಕರು ಮಾಡಿದರು.

ಬೇಡಿಕೆ ಈಡೇರುವವರೆಗೆ ಮುಷ್ಕರ: ನಮ್ಮ ಸಮಸ್ಯೆ ಯನ್ನು ಸರ್ಕಾರ ಪಕ್ಕನೆ ಅರ್ಥ ಮಾಡಿಕೊಳ್ಳುವುದಿಲ್ಲ. ನಮ್ಮ ಬೇಡಿಕೆ ಈಡೇರಬೇಕು. ಸರ್ಕಾರ ದ ಸ್ಪಂದನೆ ಸಿಗದಿದ್ದರೆ ಬೇಡಿಕೆ ಈಡೇರುವವರೆಗೆ ಮುಷ್ಕರ ಮಾಡುತ್ತೇವೆ ಎಂದು ಗ್ರಾಮಕರಣಿಕರು ಈ ಸಂದರ್ಭದಲ್ಲಿ ‌ಎಚ್ಚರಿಸಿದ್ದಾರೆ.

ಬೆಂಬಲ: ಭೂದಾಖಲೆಗಳ ಸಹಾಯಕ ನಿರ್ದೇಶಕ ನಿಸಾರ್ ಅಹಮದ್ , ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕರು, ಉಪತಹಸೀಲ್ದಾರ್ ಪ್ರತಿಭಟನಾ ನಿರತರಾಗಿರುವ ಗ್ರಾಮಕರಣಿಕರ ಬಳಿ ತೆರಳಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಉಳ್ಳಾಲ ತಾಲೂಕು ವ್ಯಾಪ್ತಿಯ ಗ್ರಾಮಕರಣಿಕರು ಈ ಮೌನ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News