ಬಂಟ್ವಾಳ| ರಸ್ತೆ ಸುರಕ್ಷತಾ ಮಾಸಾಚರಣೆ: ಹಲವು ಶಾಲಾ ವಾಹನಗಳು ವಶಕ್ಕೆ
ವಿಟ್ಲ: ವಿಟ್ಲದ ಹೃದಯ ಭಾಗದ ನಾಲ್ಕು ರಸ್ತೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ವಿಟ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಜಂಟಿಯಾಗಿ ಸಾರಿಗೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ನಡೆಸಿದರು.
ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಿದ್ದರೂ ಬೇಕಾಬಿಟ್ಟಿಯಾಗಿ ನಿಯಮ ಉಲ್ಲಂಘಿಸುವ ಸವಾರರಿಗೆ ಇಂದಿನ ಕಾರ್ಯಾಚರಣೆ ಬಿಸಿ ಮುಟ್ಟಿಸಿದೆ. ಮಾಸಾಚರಣೆ ಅಂಗವಾಗಿ ಯಾವುದೇ ದಂಡ ವಿಧಿಸಿದೇ ಸವಾರರಿಗೆ ಕಾನೂನಿನ ಬಗ್ಗೆ ವಿವರಿಸಿದ ಅಧಿಕಾರಿಗಳು ಮಿತಿ ದರದಲ್ಲಿ ತಲಾ ಐನೂರರಂತೆ ಹೆಲ್ಮೆಟ್ ಪಡೆಯಲು ಸೂಚಿಸಿದರು. ಎಳೆಯ ಪುಟಾಣಿಗಳ ಬೇಜವಾಬ್ದಾರಿಯಿಂದ ಕುಳ್ಳಿರಿಸುವ ಸವಾರರಿಗೆ ಇಲಾಖೆಯ ವತಿಯಿಂದಲೇ ಉಚಿತ ಸೇಫ್ಟಿ ಬೆಲ್ಟ್ ವಿತರಿಸಲಾಗಿದೆ.
ಶಾಲಾ ಮಕ್ಕಳನ್ನು ಕುರಿಗಳಂತೆ ತುಂಬಿಸಿ ಬೇಕಾಬಿಟ್ಟಿಯಾಗಿ ನಿಯಮ ಉಲ್ಲಂಘಿಸಿ ಕರೆದೊಯ್ಯುತ್ತಿದ್ದ ಶಾಲಾ ಬಸ್ಸುಗಳ ದಾಖಲೆ ಪರಿಶೀಲಿಸಲಾಯಿತು. ಈ ಸಂದರ್ಭ ಇನ್ಸೂರೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೇ ಐದಾರು ವರ್ಷಗಳಿಂದ ಓಡಾಡುತ್ತಿದ್ದ ಐದು ಬಸ್ಸುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಾಚರಣೆ ನಡೆಸುವ ಮೂಲಕ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಕಾನೂನಿನ ಶಿಕ್ಷೆ ನೀಡಲಿದ್ದೇವೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಬಂಟ್ವಾಳ ಪ್ರಾದೇಶಿಕ ಸಾರಿಗೆ ಕಛೇರಿಯ ಅಧಿಕಾರಿಗಳಾದ ಚರಣ್, ಪ್ರಮೋದ್ ಕೆ.ಭಟ್, ಸಚಿನ್, ಪೊಲೀಸ್ ಅಧಿಕಾರಿಗಳಾದ ಬಿ.ಎಸ್.ನಾಯಕ, ವಿದ್ಯಾ ಕೆ.ಜೆ. ಹಾಗೂ ಮತ್ತಿತರ ಸಿಬ್ಬಂದಿ ಹಾಜರಿದ್ದರು.