×
Ad

ಗಾಂಧಿ, ನೆಹರೂ, ಅಂಬೇಡ್ಕರ್ ಬಗ್ಗೆ ಜನಜಾಗೃತಿಯಾಗಲಿ: ಸಚಿವ ಸತೀಶ್ ಜಾರಕಿಹೊಳಿ

Update: 2025-02-18 17:58 IST

ಮಂಗಳೂರು: ಬುದ್ಧ, ಬಸವಣ್ಣನವರ ತತ್ವಗಳು ಮನೆ ಮನೆಗಳಿಗೆ ತಲುಪಿರುವಂತೆ, ನೆಹರೂ, ಮಹಾತ್ಮ ಗಾಂಧಿ, ಬಿ.ಆರ್. ಅಂಬೇಡ್ಕರ್‌ರವರ ಚಿಂತನೆಗಳನ್ನು ತಲುಪಿಸಬೇಕಿದೆ. ಇದಕ್ಕಾಗಿ ಕಾರ್ನರ್, ಬೀದಿ ಸಭೆಗಳ ರೀತಿಯಲ್ಲಿ ಜನಜಾಗೃತಿಯನ್ನು ಮೂಡಿಸುವ ಕೆಲಸ ಆಗಬೇಕು ಎಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಿಸಿದ್ದಾರೆ.

ಮಂಗಳೂರು ನೆಹರೂ ವಿಚಾರ ವೇದಿಕೆ ವತಿಯಿಂದ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಜವಾಹರಲಾಲ್ ನೆಹರು ಅವರ ಕುರಿತಾಗಿ ಸ್ವಾತಂತ್ರ್ಯ-ಸಂವಿಧಾನ-ದೂರದೃಷ್ಟಿ ವಿಷಯದಲ್ಲಿ ಉರ್ವಾಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ವಿಚಾರಗೋಷ್ಠಿಯನ್ನು ‘ಗಾಂಧಿ ಚಕ್ರ’ವನ್ನು ತಿರುಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿಯ ಅಹಿಂಸೆಯ ತತ್ವ ವಿಶ್ವಕ್ಕೆ ಮಾದರಿಯಾಗಿದ್ದರೆ, ಅಂಬೇಡ್ಕರ್‌ರವರು ಸಂವಿಧಾನದ ಮೂಲಕ ನಮಗೆ ರಕ್ಷಣೆ ನೀಡಿದ್ದಾರೆ. ನೆಹರೂರವರ ದೂರದೃಷ್ಟಿಯ ರಾಜಕಾರಣ ವೈಜ್ಞಾನಿಕ ಮನೋಭಾವ ಬೆಳೆಸಿ ದೇಶ ವಿಶ್ವಗುರುವಾಗಿ ಈಗಾಗಲೇ ಹೊರಹೊಮ್ಮುವಲ್ಲಿ ಕಾರಣವಾಗಿದೆ. ಆದರೆ ಇತಿಹಾಸದಿಂದ ಇವರನ್ನು ಮರೆಮಾಚಿ ಮುಂದಿನ ಪೀಳಿಗೆ ಯಿಂದ ಈ ಮಹಾನ್ ಚೇತನಗಳನ್ನು ಬದಿಗೊತ್ತುವ ನಿಟ್ಟಿನಲ್ಲಿ ಇವರಿಗೆ ಪದೇ ಪದೇ ಅವಮಾನವನ್ನು ಬಿಜೆಪಿಯಿಂದ ನಡೆಸಲಾಗುತ್ತಿದೆ. ಇವರ ಬಗ್ಗೆ ಜನರಿಗೆ ತಿಳಿಸುವಲ್ಲಿ ಸಮಾಜದಲ್ಲಿ ಕಾರ್ಯಕರ್ತರ ಸೈನಿಕ ಪಡೆ ಹೆಚ್ಚಾಗಬೇಕು ಎಂದು ಅವರು ಹೇಳಿದರು.

ಗಾಂಧಿ, ನೆಹರೂ ಮತ್ತು ಅಂಬೇಡ್ಕರ್ ವಿರುದ್ಧ ಪ್ರಶ್ನೆಗಳನ್ನು ಎತ್ತುವ ಮೂಲಕ ಗೊಂದಲ ಸೃಷ್ಟಿಸಿ ನಮ್ಮ ಆಲೋಚನೆ ಗಳನ್ನು ನಿಲ್ಲಿಸುವ ಪ್ರಯತ್ನಗಳನ್ನು ಅತ್ಯಂತ ವ್ಯವಸ್ತಿತವಾಗಿ ನಡೆಸಲಾಗುತ್ತಿದ್ದು, ಇದಕ್ಕಾಗಿ ಆರೆಸ್ಸೆಸ್ ಹಾಗೂ ಬಿಜೆಪಿಯವರ ಪ್ರಶ್ನೆಗಳಿಗೆ ಪ್ರತಿ ಪ್ರಶ್ನೆಗಳನ್ನು ಕೇಳುವ ಕಾರ್ಯ ಆಗಬೇಕು ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಹೇಳಿದರು.

ಜವಾಹರ ಲಾಲ್ ನೆಹರೂ ಅವರನ್ನೇ ಯಾಕೆ ಪ್ರಧಾನಿ ಮಾಡಲಾಯಿತು ಎಂಬ ಪ್ರಶ್ನೆಗೆ, ಬಿಜೆಪಿಯ ಹಿರಿಯರಾದ ಎಲ್.ಕೆ. ಅಡ್ವಾಣಿ, ಜೆ.ಪಿ. ನಡ್ಡಾ, ಗಡ್ಕರಿಯವರ ಬದಲಾಗಿ ಮೋದಿಯನ್ನೇಗೆ ಪ್ರಧಾನಿಯನ್ನಾಗಿ ಮಾಡಲಾಯಿತು ಎಂದು ಪ್ರಶ್ನಿಸಬೇಕು.

ಅಂಬೇಡ್ಕರ್ ಮತ್ತು ನೆಹರೂ ಅವರ ನಡುವೆ ಭಿನ್ನಾಭಿಪ್ರಾಯವಿತ್ತು. ಹಾಗಾಗಿಯೇ ಅಂಬೇಡ್ಕರ್‌ವರು ಸಲ್ಲಿಸಿದ ಹಿಂದೂ ಕೋಡನ್ನು ನೆಹರೂ ತಿರಸ್ಕರಿಸಿದ್ದರು ಎಂದು ತಪ್ಪು ಕಲ್ಪನೆ ಹರಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ಕಾನೂನು ಸಚಿವರಾಗಿದ್ದಾಗ ಅಂಬೇಡ್ಕರ್‌ವರರು ಸಲ್ಲಿಸಿದ್ದ ಹಿಂದೂ ಕೋಡ್ ಬಿಲ್ (ಹಿಂದೂ ಸಂಹಿತೆ ಮಸೂದೆ) ತಿರಸ್ಕರಿಸಲ್ಪಟ್ಟರೂ, 1958ರಲ್ಲಿ ನೆಹರೂರವರು ನಾಲ್ಕು ಹೊಸ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಅಂಬೇಡ್ಕರ್‌ ವರರ ಹಿಂದೂ ಸಂಹಿತೆ ಮಸೂದೆಯ ಅಂಶಗಳನ್ನು ಪುರಸ್ಕರಿಸುತ್ತಾರೆ.ಈ ಬಗ್ಗೆ ಸ್ವತಹ ಅಂಬೇಡ್ಕರ್‌ರವರೇ ಈ ಕಾಯ್ದೆಗಳ ಜಾರಿ ಸಂವಿಧಾನಕ್ಕಿಂತ ಹೆಚ್ಚು ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಬಿಜೆಪಿಯವರು ಈ ಬಗ್ಗೆ ಮಾತನಾಡುವುದೇ ಇಲ್ಲ. ಪ್ರಧಾನಿ ಮೋದಿಯವರೂ ಅಂಬೇಡ್ಕರ್ ಮತ್ತು ನೆಹರೂ ನಡುವೆ ಭಿನ್ನಾಭಿಪ್ರಾಯದ ಬಗ್ಗೆ ಹೇಳುತ್ತಾರೆ. ಆದರೆ ವಾಸ್ತವ ವಿಷಯ ಅವರಿಗೆಲ್ಲಾ ಗೊತ್ತಿಲ್ಲವೆಂದಲ್ಲ. ಬದಲಾಗಿ ಮೊಸರಲ್ಲಿ ಕಲ್ಲು ಹುಡುಕುವ ಅವರ ಯತ್ನ, ಇದಕ್ಕೆ ನಾವು ಸರಿಯಾಗಿ ಉತ್ತರ ನೀಡದಿದ್ದರೆ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುತ್ತಾರೆ ಎಂದು ನ್ಯಾಯವಾದಿ ಬ್ರಿಜೇಶ್ ಕಾಳಪ್ಪ ಹೇಳಿದರು.

ಯಾವ ದೇಶ ಧರ್ಮದ ಆಧಾರದಲ್ಲಿ ನಿರ್ಮಾಣ ಆಗುತ್ತದೆಯೋ ಅದು ನಿರ್ಮಾಣ ಆಗುತ್ತದೆ. ರಾಜಕೀಯದಿಂದ ಧರ್ಮ ವನು ದೂರ ಇರಿಸಬೇಕೆಂಬ ಈ ಮೂವರು ವ್ಯಕ್ತಿಗಳ ನಂಬಿಕೆಯ ಮೇಲೆ ಇಂದಿಗೂ ಭಾರತ ದೇಶ ನಡೆಯುತ್ತಿದೆ. ನಮ್ಮ ದೇಶವೂ ಹಿಂಸೆಯ ಹಾದಿ ಹಿಡಿದಿದ್ದರೆ ಪಾಕಿಸ್ತಾನವಾಗುತ್ತಿತ್ತು. ಪ್ರಸಕ್ತ ದೇಶದ ಪ್ರಧಾನಿಯವರು ವಿದೇಶಕ್ಕೆ ಹೋಗಿ ದುಬಾರಿ ಉಡುಗೊರೆ ನೀಡಿ ಬರುವುದನ್ನೇ ಭಕ್ತಕೋಟಿಗಳು ಭಾರತದ ಅಭಿವೃದ್ಧಿ ಎಂದು ಬಿಂಬಿಸುತ್ತಿದ್ದಾರೆ. ಆದರೆ ನಮ್ಮ ದೇಶದ ಪ್ರಜೆಗಳು ವಿದೇಶದಿಂದ ಕೈಗೆ ಕೋಳ, ಕಾಲಿಗೆ ಬೇಡಿ ಹಾಕಿಸಿಕೊಂಡು ಬರುತ್ತಿರುವ ಬಗ್ಗೆ ಅವರು ಅಕ್ರಮ ವಾಸಿಗಳು, ಕಳ್ಳರು ಎಂದು ಉದ್ಗರಿಸುತ್ತಾರೆ. ಅವರೂ ಭಾರತೀಯರಲ್ಲವೇ ಅವರ ಬಗ್ಗೆ ಯಾಕೆ ಕನಿಕರ ಬರುವುದಿಲ್ಲ ಎಂಬುದು ಖೇದಕರ. ಅವರು ಅಲ್ಲಿ ಹೋಗಲು ಕಾರಣ ಯಾರು, 11 ವರ್ಷಗಳಲ್ಲಿ ಯಾರು ಅಧಿಕಾರದಲ್ಲಿ ಇರುವುದು, ಪಾಸ್‌ಪೋರ್ಟ್ ನೀಡುವುದು ಕೇಂದ್ರ ಸರಕಾರವಾದರೂ ಪಂಜಾಬ್ ವಿಚಾರ ಎಂದು ಯಾಕೆ ಹೇಳಲಾಗುತ್ತದೆ ಎಂಬು ದನ್ನು ಅರಿಯಬೇಕು ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.

ಕೆಪಿಸಿಸಿ ವಕ್ತಾರ ಮುನೀರ್ ಜನ್ಸಾಲೆ ಮಾತನಾಡಿ, ವಿದ್ಯಾರ್ಥಿ ಮಟ್ಟದಿಂದಲೇ ಗಾಂಧಿ, ಅಂಬೇಡ್ಕರ್ ಮತ್ತು ನೆಹರೂ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗುವ ಪ್ರಯತ್ನ ನಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಸುಳ್ಳುಗಳು ನಲಿದಾಡುತ್ತಿರುವ ಈ ಸಂದರ್ಭದಲ್ಲಿ ಸತ್ಯವನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು ಎಂದರು.

ದೇಶದ ಶೇ. 90ಕ್ಕಿಂತ ಹೆಚ್ಚಿನ ಜನರಿಗೆ ಸ್ವಾಭಿಮಾನದ ಬದುಕು ನೀಡಿರುವುದು ಸಂವಿಧಾನ. ಹಾಗಾಗಿ ಸಂವಿಧಾನವನ್ನು ಮುಟ್ಟುವುದು ಕಷ್ಟ ಎಂದು ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಅರಿವಿದೆ. ಹಾಗಿದ್ದರೂ ಮನುಸ್ಮತಿಯೇ ನಮ್ಮ ಸಂವಿಧಾನ ಎಂದು ದೇಶದ್ರೋಹದ ಮಾತುಗಳನ್ನು ಹೇಳಲಾಗುತ್ತಿದೆ. ಅಂಬೇಡ್ಕರ್ ಮುಸ್ಲಿಂ ವಿರೋಧಿ ಎನ್ನುವ ಹೊಸ ಅಜೆಂಡಾವನ್ನು ಆರೆಸೆಸ್ ಇಟ್ಟಿದೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ದೊರಕಿದ ಮರ್ಮಾಘಾತದಿಂದ ವಿಭಜನೆಯ ಹೊರತಾಗಿ ತಮಗೆ ಉಳಿಗಾಲ ಇಲ್ಲ ಎಂದು ಅರಿತ ಆರೆಸ್ಸೆಸ್ ಈ ಕುತಂತ್ರಕ್ಕೆ ಹೊರಟಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಅಶೋಕ್ ಕುಮಾರ್ ರೈ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಹರೀಶ್ ಕುಮಾರ್, ಬೆಂಗಳೂರು ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಅನಂತ ನಾಯ್ಕ, ದ.ಕ.ಜಿಲ್ಲಾ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಪದ್ಮರಾಜ್.ಆರ್, ಮುಖ್ಯಮಂತ್ರಿ ಪ್ರಶಸ್ತಿ ವಿಜೇತ ಕಾರ್ಮಿಕ ಮುಖಂಡ ನಾಪಂಡ ಮುತ್ತಪ್ಪ ಬೆಂಗಳೂರು, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ರಕ್ಷಿತ್ ಶಿವರಾಂ, ಎಂ.ಎಸ್. ಮುಹಮ್ಮದ್, ಮ.ನ.ಪಾ ವಿಪಕ್ಷ ನಾಯಕ ಅನಿಲ್ ಕುಮಾರ್, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಝ್, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕದ ಅಧ್ಯಕ್ಷ ದಿನೇಶ್ ಮುಳೂರು, ಮಾನವ ಬಂಧುತ್ವ ವೇದಿಕೆಯ ದ.ಕ.ಜಿಲ್ಲಾ ಪ್ರಧಾನ ಸಂಚಾಲಕ ಜಯರಾಮ್ ಪೂಜಾರಿ, ಕೊಡಗು ಜಿಲ್ಲೆಯ ಪ್ರಧಾನ ಸಂಚಾಲಕ ಜನಾರ್ಧನ ಕೆ.ಎಲ್, ಬಂಟ್ವಾಳ ತಾಲೂಕಿನ ಪ್ರಧಾನ ಸಂಚಾಲಕ ಕೇಶವ ಪೂಜಾರಿ ಪಂಜಿಕಲ್ಲು ಹಾಗೂ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಪಂಜಿಕಲ್ಲು ಮೊದಲಾದವರು ಉಪಸ್ಥಿತರಿದ್ದರು.

ಸತೀಶ್ ಅರಳ ಅವರ ಸಂವಿಧಾನ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯ ಅಧ್ಯಕ್ಷ ನವೀನ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನ್ ಕಾರ್ಯಕ್ರಮ ನಿರೂಪಿಸಿದರು.

ಸಂವಿಧಾನವೇ ಕಾಂಗ್ರೆಸ್ ಪಕ್ಷದ ಸಿದ್ಧಾತವೆಂದು ಎದೆತಟ್ಟಿ ಹೇಳಿ

ಭಾರತದಲ್ಲಿ ಸಂವಿಧಾನ ಅನುಷ್ಟಾನಕ್ಕೆ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಆದ್ದರಿಂದ ಸಂವಿಧಾನವೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಎಂಬುದನ್ನು ಪ್ರತಿಯೊಬ್ಬ ಕಾಂಗ್ರೆಸ್ಸಿಗರು ಎದೆತಟ್ಟಿ ಹೇಳಬೇಕು ಮತ್ತು ಅದನ್ನು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಅಂಬೇಡ್ಕರ್ ಮತ್ತು ಸಂವಿಧಾನ ವಿಷಯದ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಕಾಂಗ್ರೆಸ್ಸಿಗರಿಗೆ ಸಲಹೆ ನೀಡಿದ್ದಾರೆ.

145000 ಶಬ್ಧಗಳ 300ಕ್ಕೂ ಅಧಿಕ ಪರಿಚ್ಛೇದಗಳ ಸಂವಿಧಾನವನ್ನು ಇನ್ನಷ್ಟು ಜನಪ್ರಿಯ, ಜನಪರಗೊಳಿಸಬೇಕಾದ ಕಾಲಘಟ್ಟದಲ್ಲಿ, ಸಂವಿಧಾನ ರಚನೆಯ ೭೫ ವರ್ಷಗಳ ನಂತರ ಸಂವಿಧಾನ ರಕ್ಷಣೆಯ ವಿಚಾರದಲ್ಲಿ ನಾವು ಮಾತನಾಡು ತ್ತಿರಲು ಏನು ಕಾರಣ ಎಂಬ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕು. ಒಂದು ಸಿದ್ಧಾಂತವನ್ನು ಎದುರಿಸಲು ಅಥವಾ ಸೋಲಿಸಲು ಇನ್ನೊಂದು ಸಿದ್ಧಾಂತವನ್ನು ಹುಟ್ಟು ಹಾಕಬೇಕು. ಅದು ಕತ್ತಿ, ತ್ರಿಶೂಲಗಳಿಂದ ಆಗುವುದಿಲ್ಲ. ಬಿಜೆಪಿಯವರ ಸಿದ್ಧಾಂತ ಏನು ಎಂದರೆ ಅವರು ಹೇಳುತ್ತಾರೆ. ಅದೇ ರೀತಿ ಕಾಂಗ್ರೆಸ್‌ನವರು ತಮ್ಮ ಸಿದ್ಧಾಂತವನ್ನು ಹೇಳಬೇಕು. ಸಂವಿಧಾನದ ಅಸ್ತ್ರವನ್ನು ಎತ್ತಿ ಹಿಡಿಯಬೇಕು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News