×
Ad

ಉಳ್ಳಾಲ ನಗರ ಸಭೆ: ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನದ್ದೇ ಚರ್ಚೆ

Update: 2025-02-19 17:48 IST

ಉಳ್ಳಾಲ: ನಗರ ಸಭೆ ವ್ಯಾಪ್ತಿಯ ಕೆಲವು ಕಡೆ ಬೆಳೆದಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಗರ ಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ನಗರಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಮಾಜಿ ಅಧ್ಯಕ್ಷೆ ಚಿತ್ರ ಅವರು 23 ನೇ ವಾರ್ಡ್ ಕೃಷ್ಣ ನಗರಕ್ಕೆ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ.ಇದರಿಂದ ಬಹಳಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿಗೆ ಎಡಿಬಿ ನೀರು ಬೇಕು. ಶೀಘ್ರ ನೀರು ಪೂರೈಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಸದಸ್ಯ ಇಸ್ಮಾಯಿಲ್ ಅವರು ಉಪವಾಸ ಹತ್ತಿರ ಬರುತ್ತಿದೆ.ನೀರಿನ ಸಮಸ್ಯೆ ಆಗದಂತೆ ಕ್ರಮ ಆಗಬೇಕು.ನನ್ನ ವಾರ್ಡ್ ನಲ್ಲೂ ನೀರಿನ ಸಮಸ್ಯೆ ಇದೆ.ಕೆಲವು ಬಾವಿಗಳಲ್ಲಿ ಕೆಂಪು ಬಣ್ಣದ ನೀರು ಬರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಭಾರತಿ ಅವರು ಧರ್ಮನಗರ ವಾರ್ಡ್ ನಲ್ಲಿ ಪೈಪ್ ಲೈನ್ ಕಾಮಗಾರಿ ಆಗಿಲ್ಲ.ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.ಇದಕ್ಕೆ ಪರಿಹಾರ ಆಗಬೇಕು ಎಂದು ಸಭೆಯ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಮತಡಿ ಅವರು ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಕಡೆ ಉಂಟಾಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ಸಮಸ್ಯೆ ಪರಿಹಾರ ಮಾಡುವ ದೃಷ್ಟಿಯಿಂದ ಒಬ್ಬ ಇಂಜಿನಿಯರ್ ಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡುವ ಜವಾಬ್ದಾರಿ ನೀಡಲಾಗಿದೆ ಎಂದರು.

ಕುಡಿಯುವ ನೀರಿನ ಪರಿಹಾರ ಮಾಡುವ ದೃಷ್ಟಿಯಿಂದ ಈ ಸಮಸ್ಯೆ ಇರುವ ವಾರ್ಡ್ ಗಳಲ್ಲಿ ಕೊಳವೆ ಬಾವಿ ನಿರ್ಮಿಸುವ ಯೋಜನೆ ಗೆ ಸಭೆಯಲ್ಲಿ ಸಹಮತ ವ್ಯಕ್ತವಾಯಿತು. ಕಾರ್ಯ ಸೂಚಿ ಪಟ್ಟಿಯಲ್ಲಿ ಪ್ರಕಟವಾದ ಅಭಿವೃದ್ಧಿ ಕಾಮಗಾರಿ ಗಳ ಬಗ್ಗೆ ಯಾವುದೇ ಚರ್ಚೆ ನಡೆಸದೇ ಸಹ್ಯಾದ್ರಿ ಯಲ್ಲಿ ನಡೆಯಲಿರುವ ಹೊಂಬೆಳಕು ಪಂದ್ಯಾಟದ ಬಗೆ ಸದಸ್ಯರಿಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿ ಸದಸ್ಯರು ಅಧಿಕಾರಿಗಳನ್ನು ತರಾಟೆಗೈದು ಕಾಲಹರಣ ಮಾಡಿದ್ದರು. ಇದಕ್ಕೆ ಕೆಲವು ಸದಸ್ಯರಿಂದ ಅಸಮಾಧಾನ ಕೂಡ ವ್ಯಕ್ತವಾಯಿತು. ಚರ್ಚೆ ಮಾಡಬೇಕಾದ ಪ್ರಮುಖ ಸಮಸ್ಯೆಗಳು ನಗರ ಸಭೆ ಯಲ್ಲಿ ಇದ್ದರೂ. ಈ ಬಗ್ಗೆ ಚರ್ಚೆ ನಡೆಸದೇ ಹೊಂಬೆಳಕು ಪಂದ್ಯಾಟದ ಚರ್ಚೆ ಸಭೆಯಲ್ಲಿ ಅಗತ್ಯ ಇತ್ತೆ ಎಂದು ಸದಸ್ಯ ಮಹಮ್ಮದ್ ಮುಕಚೇರಿ ಅವರು ಸಭೆಯ ಬಳಿಕ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News