ಮೂಡುಬಿದಿರೆ: ಗ್ರೀನ್ ವ್ಯೂ ಕಾನೂನು ಕಾಲೇಜಿಗೆ ಡಾ. ಮೋಹನ್ ಆಳ್ವ ಶಿಲಾನ್ಯಾಸ
ಮೂಡುಬಿದಿರೆ: ದ.ಕ. ಮತ್ತು ಉಡುಪಿ ಜಮಿಯ್ಯತುಲ್ ಫಲಾಹ್ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳಲಿರುವ ಗ್ರೀನ್ ವ್ಯೂ ಕಾನೂನು ಕಾಲೇಜಿಗೆ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ರವಿವಾರ ಮೂಡುಬಿದಿರೆಯ ಬೆಳುವಾಯಿಯ ಚಿಲಿಂಬಿಯಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ವ್ಯಕ್ತಿಗಳ ಹಕ್ಕುಗಳ ಜೊತೆಜೊತೆಗೆ ಎಲ್ಲರೂ ಸಾಗಬೇಕಿರುವ ಕಾರಣಕ್ಕಾಗಿ ಎಲ್ಲರಿಗೂ ಕಾನೂನು ಶಿಕ್ಷಣ ಅಗತ್ಯವಾಗಿದೆ. ಬ್ರಿಟೀಷರ ಕಾಲದಲ್ಲಿ ಕಾನೂನು ಶಿಕ್ಷಣ ಆರಂಭಗೊಂಡಿದ್ದು, ಅವರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮಗಳಲ್ಲಿಯೂ ಅದೇ ಕಾನೂನು ಶಿಕ್ಷಣವಂತರೇ ಮುಂಚೂಣಿಯಲ್ಲಿದ್ದು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನುಡಿದರು.
ಜಮೀಯತುಲ್ ಫಲಾಹ್ ಸಾಮಾಝಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದಂತೆಯೇ ಕಾನೂನು ಶಿಕ್ಷಣ ಕ್ಷೇತ್ರದಲ್ಲೂ ಹೆಸರು ಮಾಡಲಿ, ಸಂಸ್ಥೆಯಿಂದ ಸಾವಿರಾರು ಕಾನೂನು ಪಾಲಕರು ಹುಟ್ಟಿ ಸದೃಢ ದೇಶ ನಿರ್ಮಾಣದಲ್ಲಿ ತಮ್ಮದೇ ಕೊಡುಗೆಗಳನ್ನು ನೀಡಲಿ ಎಂದು ಶುಭ ಹಾರೈಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮೂಡುಬಿದಿರೆ ತಾಲೂಕಿನಲ್ಲಿ ಈಗ ಶಂಕು ಸ್ಥಾಪನೆ ನೆರವೇರಿಸಲಾದ ಗ್ರೀನ್ ವ್ಯೂ ಕಾನೂನು ಕಾಲೇಜು ಸೇರಿ ಮೂರು ಕಾನೂನು ಕಾಲೇಜುಗಳನ್ನು ಹೊಂದಲಿದೆ. ಕಾನೂನು ಎನ್ನುವುದು ಪ್ರತೀ ಮನುಷ್ಯನ ಜೀವನದ ಪ್ರತೀ ಹಂತದಲ್ಲೂ ಮುಖ್ಯಪಾತ್ರ ವಹಿಸಲಿದೆ. ರಾಜ್ಯ ಮತ್ತು ದೇಶವನ್ನಾಳಿದ ಅತೀ ಹೆಚ್ಚಿನವರು ಕಾನೂನು ವಿದ್ಯಾಭ್ಯಾಸ ಪಡೆದುಕೊಂಡವರು ಎನ್ನುವುದು ಇಲ್ಲಿ ಗಮನಾರ್ಹ. ಮೂಡುಬಿದಿರೆ ತಾಲೂಕು ಸ್ಥಾಪನೆಗೂ ಮೊದಲೇ ಇಲ್ಲಿ ನ್ಯಾ. ನಝೀರ್ ಅವರ ಸಂಪೂರ್ಣ ಸಹಕಾರದಿಂದಾಗಿ ನ್ಯಾಯಾಲಯ ಸ್ಥಾಪನೆಯಾಗಿದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಮತ್ತು ಉಡುಪಿ ಜಮಿಯ್ಯತುಲ್ ಫಲಾಹ್ ಅಧ್ಯಕ್ಷರಾದ ಕೆ.ಕೆ. ಸಾಹುಲ್ ಹಮೀದ್ ವಹಿಸಿದ್ದರು. ಮೂಡುಬಿದಿರೆಯ ಲಾಡಿ ಮಸೀದಿಯ ಖತೀಬ್ ಫಯಾಝ್ ಅವರು ವಿಶೇಷ ದುವಾ ನೆರವೇರಿಸಿದರು.
ಸಮಾರಂದಲ್ಲಿ ನ್ಯಾಯವಾದಿ ಬಾಹುಬಲಿ ಪ್ರಸಾದ್, ಜಮಿಯ್ಯತುಲ್ ಫಲಾಹ್ ಕೇಂದ್ರ ಸಮಿತಿಯ ಖಜಾಂಚಿ ನ್ಯಾಯವಾದಿ ಕೆ.ಎಂ. ಸಿದ್ದಿಕ್, ವಕೀಲ ಎಂ.ಎಸ್. ಕೋಟ್ಯಾನ್, ಸೈಮನ್ ಮಸ್ಕರೇನಸ್, ಜಮಿಯ್ಯತುಲ್ ಫಲಾಹ್ ಜಿದ್ದಾ ಘಟಕದ ಅಧ್ಯಕ್ಷ ಮುಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯೋಜನಾ ನಿರ್ದೇಶಕ ಶೇಕ್ ನೂರುದ್ದೀನ್ ನಿರೂಪಿಸಿದರು. ಜೆಎಫ್‌ಸಿಸಿ ಪ್ರಧಾನ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್ ಧನ್ಯವಾದ ಸಮರ್ಪಿಸಿದರು.