ರೋಟರಿ ಸಂಸ್ಥೆಯ ಸ್ಥಾಪನಾ ದಿನಾಚರಣೆ: ಮೂವರು ಸಾಧಕರಿಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ
ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಅಂತರ್‌ರಾಷ್ಟ್ರೀಯ ರೋಟರಿ ಸಂಸ್ಥೆಯ 121ನೇ ಸ್ಥಾಪನಾ ದಿನಾಚರಣೆ ಹಾಗೂ ಮೂವರು ಸಾಧಕರಿಗೆ ಶ್ರೇಷ್ಠ ವೃತ್ತಿಪರ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಗರದ ಆಫಿಸರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಗಣೇಶ್ ಕೊಡ್ಲಮೊಗರು ಅವರು ನಿಸ್ವಾರ್ಥ ಸೇವಾ ಮನೋಭಾವದಿಂದ ಕೊಡುಗೆ ನೀಡಿದವರನ್ನು ರೋಟರಿ ಸಂಸ್ಥೆಯು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮೂವರು ಸಾಧಕರಾದ ಸಚಿನ್ ಕರ್ಕೇರ (ಹೋಟೇಲ್ ಉದ್ಯಮ), ವಿಕ್ಟರ್ ಅಂದ್ರಾಡೆ (ಮುದ್ರಣ ತಂತ್ರಜ್ಞಾನ), ಮಹಮ್ಮದ್ ಯಾಸೀರ್ (ಅಮೂಲ್ಯ ಪ್ರಾಚೀನ ವಸ್ತುಗಳ ಸಂಗ್ರಹಣೆ) ಇವರ ಸಾಧನೆ, ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಭಾರತೀಯ ರಕ್ಷಣಾ ಪಡೆಯ ನಿವೃತ್ತ ಸೇನಾಧಿಕಾರಿ ಕರ್ನಲ್ ನಿತಿನ್ ಬಿಡೆ ರೋಟರಿ ಸಂಸ್ಥೆಯ ಪ್ರಾಮಾಣಿಕ, ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. ರೋಟರಿ ವಲಯ ಸಹಾಯಕ ಗವರ್ನರ್ ಅಶೋಕ್ ಕುಮಾರ್ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.
ನಿಯೋಜಿತ ಅಧ್ಯಕ್ಷ ಸನ್ನಿತ್ ಶೇಟ್‌ರವರು ಪ್ರಶಸ್ತಿ ವಿಜೇತರ ಪರಿಚಯ ಮತ್ತು ಸಾಧನೆಗಳ ವಿವರ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಪ್ರಶಾಂತ್ ರೈ ಮತ್ತು ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ಕ್ಯಾನುಟ್
ಪಿಂಟೊ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುದೇಶ್ ವಂದಿಸಿದರು.