ವಿ.ಟಿ. ರಾಜಶೇಖರ್, ಪಿ.ಬಿ. ಡೇಸಾ, ಪ್ರೊ. ಮುಝಫರ್ ಅಸ್ಸಾದಿ ಜನಮನ ತಟ್ಟಿದವರು, ಅವರ ಚಿಂತನೆ ಒಂದೇ ಆಗಿತ್ತು: ಡಾ. ಇಸ್ಮಾಯೀಲ್
ಮಂಗಳೂರು: ನಮ್ಮನ್ನಗಲಿದ ಹಿರಿಯ ಪತ್ರಕರ್ತ ವಿ.ಟಿ. ರಾಜಶೇಖರ ಶೆಟ್ಟಿ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಮುಝಫರ್ ಅಸ್ಸಾದಿ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಪಿ.ಬಿ.ಡೇಸಾ ಅವರು ಒಂದು ಕಾಲಕ್ಕೆ ಜನಸಾಮಾನ್ಯರ ಜನಮನ ತಟ್ಟಿದವರು ಮತ್ತು ಯುವಕರನ್ನು ಒಟ್ಟುಗೂಡಿಸಿದವರು ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ(ರಿ) ಕಾರ್ಯದರ್ಶಿ ಡಾ. ಇಸ್ಮಾಯೀಲ್ ಎನ್ ಹೇಳಿದ್ದಾರೆ.
ದಲಿತ್ ವಾಯ್ಸ್ ‘ಸಂಪಾದಕ ವಿ.ಟಿ.ರಾಜಶೇಖರ, ಪ್ರೊ. ಮುಝಫರ್ ಅಸ್ಸಾದಿ ಮತ್ತು ಪಿ.ಬಿ.ಡೇಸಾ ಇವರಿಗೆ ಮಂಗಳ ವಾರ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂವರು ಬೇರೆ ಬೇರೆ ಸಮುದಾಯದಿಂದ ಬಂದವರಾಗಿದ್ದರೂ ಇವರ ಚಿಂತನೆ ಒಂದೇ ಆಗಿತ್ತು ಎಂದರು.
ಮುಝಫರ್ ಅಸ್ಸಾದಿ ಮೈಸೂರು ವಿವಿಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಆ ವಿಭಾಗಕ್ಕೆ ದೊಡ್ಡ ಕೊಡುಗೆಯನ್ನು ಅವರು ನೀಡಿದ್ದರು. ಧೀಮಂತ ಅಧ್ಯಾಪಕರಾಗಿ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ತೆರೆದ ಕಣ್ಣುಗಳಿಂದ ಸಮಾಜವನ್ನು ನೋಡಿದವರು. ತನಗೆ ಬೇಕಾಗಿ ಸಂಘಟನೆ ಕಟ್ಟಿಕೊಂಡಿರಲಿಲ್ಲ. ಹೀಗಾಗಿ ಅವರಿಗೆ ವಿವಿ ಉಪಕುಲಪತಿಯಾಗಿ ಅವಕಾಶ ಸಿಗಲಿಲ್ಲ ಎಂದರು.
ಡೆಸಾ ಅವರು ತನ್ನ ಬಗ್ಗೆ ಚಿಂತನೆ ನಡೆಸುವುದಕ್ಕಿಂತ ಇನ್ನೊಬ್ಬರ ಬಗ್ಗೆ ಚಿಂತನೆ ನಡೆಸಿದವರು ಎಂದರು.
ಆಧುನಿಕ ಅಂಬೇಡ್ಕರ್ ವಿಟಿ ರಾಜಶೇಖರ್: ವಿಟಿ ರಾಜಶೇಖರ್ ಅವರ ಪುತ್ರ ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಸಲೀಲ್ ಶೆಟ್ಟಿ ಮಾತನಾಡಿ ದಲಿತರಿಗಾಗಿ ಶ್ರಮಿಸಿದ ಆಧುನಿಕ ಅಂಬೇಡ್ಕರ್ ಆಗಿದ್ದರು ವಿಟಿ ರಾಜಶೇಖರ್ ಎಂದು ಹೇಳಿದರು.
ಅವರು ಬರೆದದ್ದು ಇಂಗ್ಲಿಷ್‌ನಲ್ಲಿ ಜಾಸ್ತಿ. ಅದು ದಲಿತರಿಗೆ ಹೆಚ್ಚು ಮುಟ್ಟಲಿಲ್ಲ. ಅವರ ಚಿಂತನೆಗಳು ಎಂದೆಂದಿಗೂ ಸಕಾಲಿಕವಾಗಿದೆ ಎಂದರು.
ಪಿಬಿ ಡೆಸಾ ಅವರ ಪುತ್ರಿ ಪ್ರೀತಿಕಾ ಅವರು ಮಾತನಾಡಿ ತನ್ನ ತಂದೆಯ ಜೀವನ ಸರಳವಾಗಿತ್ತು. ನಾನಾ ಸವಾಲುಗಳು ಅವರ ಬದುಕಿನಲ್ಲಿ ಎದುರಾಗಿದ್ದರೂ ಅವೆಲ್ಲವನ್ನು ಬದಿಗೊತ್ತಿ ಇತರಿಗಾಗಿ ದುಡಿದರು ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟು ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಮಾತನಾಡಿದರು.
ಮಂಗಳೂರು ವಿವಿ ಪ್ರಾಧ್ಯಾಪಕ ಎಂ.ಪಿ.ಉಮೇಶ್ ಚಂದ್ರ, ವಕೀಲರಾದ ಬಿ.ಎ. ಮೊಹಮ್ಮದ್ ಹನೀಫ್, ಪ್ರಮುಖರಾದ ಎನ್.ಜಿ. ಮೋಹನ್, ಖಾಲಿದ್ ತಣ್ಣೀರುಬಾವಿ, ಜೋಶಿ ಸತ್ಯಾನಂದ್, ವಿಕ್ಟರ್ ಕ್ರಾಸ್ತಾ, ರೆನ್ನಿ ಡಿ ಸೋಜ, ಭರತೇಶ್ ಬಜಾಲ್, ಯೂಸುಫ್ ವಕ್ತಾರ್, ಬಾವ ಪದರಂಗಿ, ಯೋಗೀಶ್ ಜೆಪ್ಪು, ಕಾಂತಪ್ಪ ಆಲಂಗಾರು, ಸದಾಶಿವ ಸಾಲ್ಯಾನ್, ಸೋಮಪ್ಪ ಆಲಂಗಾರು, ಯಾದವ್ ಶೆಟ್ಟಿ, ಡಾ.ಹರೀದಾಸ್ ರೈ, ಶಾಹಿದಾ, ದಿಲ್‌ಶಾದ್, ಶಾಹಿನ್ ಮತ್ತಿತರರು ಭಾಗವಹಿಸಿದ್ದರು.
‘‘ಮಲಿನವಾಗಿರುವ ದ.ಕ.ಜಿಲ್ಲೆಯ ವಾತಾವರಣವನ್ನು ಶುದ್ಧೀಕರಿಸುವ ಶಕ್ತಿ ಅಗಲಿದ ಮೂವರಲ್ಲೂ ಇತ್ತು. ಯಾರಿಗೂ ಹೆದರದವರು ರಾಜಶೇಖರ್. ಬಿಎಸ್ಪಿ ನಾಯಕಿ ರಾಜ್ಯಸಭೆಗೆ ನೇರ ನೇಮಕದ ಆಫರ್ ನೀಡಿದ್ದರೂ ಅವರು ಅದನ್ನು ನಿರಾಕರಿಸಿದ್ದರು. ಅಸ್ಸಾದಿ ಅವರ ಪ್ರಭಾವಿತರಾದ ಸಮುದಾಯ ಇತ್ತು. ಡೆಸಾ ಜನಪರ ಕಾಳಜಿ ಇರುವ ನೇತಾರ".
-ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷರು
"ಮೂವರು ಶೋಷಿತ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಂಡು. ಅವರಿಗೆ ಶಕ್ತಿ ತುಂಬಿದವರು"
-ಲೋಲಾಕ್ಷ