ತುಳು ಪ್ರತ್ಯೇಕ ರಾಜ್ಯ ಸ್ಥಾಪನೆ: ‘ಬಂಗಾರ್ ಪರ್ಬ’ ಉತ್ಸವದಲ್ಲಿ ಹರಿಕೃಷ್ಣ ಪುನರೂರು ಪುನರುಚ್ಚಾರ
ಮಂಗಳೂರು: ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಸೇರ್ಪಡೆ ಮಾತ್ರವಲ್ಲ, ತುಳು ರಾಜ್ಯವಾಗಲೇ ಬೇಕು. ಗೋವಾ ಪ್ರತ್ಯೇಕ ರಾಜ್ಯವಾಗಲು ಸಾಧ್ಯವಿದ್ದರೆ, ತುಳು ರಾಜ್ಯ ಯಾಕೆ ಸಾಧ್ಯವಿಲ್ಲ? ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪ್ರಶ್ನಿಸಿದ್ದಾರೆ.
ತುಳು ಕೂಟ ಕುಡ್ಲ ‘ಬಂಗಾರ್ ಪರ್ಬ’ (50ನೇ ವರ್ಷಾಚರಣೆ) ಮಹೋತ್ಸವಾಚರಣೆ ಸಮಿತಿ ನೇತೃತ್ವ ದಲ್ಲಿ ನಗರದ ಕುದ್ಮಲ್ ರಂಗರಾವ್ ಪುರಭವನದ ಕೀರ್ತಿಶೇಷ ಮರೋಳಿ ಬಿ.ದಾಮೋದರ ನಿಸರ್ಗ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ ಬಂಗಾರ್ ಪರ್ಬಾಚರಣೆ ಉದ್ಘಾಟಿಸಿ ಅವರು ಮಾತಮಾಡಿದರು.
ದಕ್ಷಿಣ, ಕನ್ನಡ, ಉಡುಪಿ, ಕಾಸರಗೋಡು ಮಾತ್ರವಲ್ಲದೆ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಕೂಡ ತುಳು ಮಾತನಾಡುವವರು ಇದ್ದಾರೆ. ತುಳುವರು ಹೋರಾಟ ನಡೆಸಿದರೆ ತುಳು ರಾಜ್ಯ ರೂಪುಗೊಳ್ಳು ವುದು ನಿಶ್ಚಿತ . ಶಾಲೆಯಲ್ಲಿ ತುಳುವನ್ನು ಒಂದು ಭಾಷೆಯನ್ನಾಗಿ ಕಲಿಸುವುದು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.
1956 ರಲ್ಲಿ ಭಾಷಾವಾರು ವಿಂಗಡಣೆ ಸಂದರ್ಭ ತುಳುವರು ಹೋರಾಟ ಮಾಡಲಿಲ್ಲ. ಪರಿಣಾಮ ತುಳುವನ್ನು ಕನ್ನಡದ ಜತೆಗೆ ಸೇರಿಸಲಾಯಿತು. ಕಲಿತ ಪೋಷಕರು ಇಂದು ಮನೆಗಳಲ್ಲಿ ಕೂಡ ತಮ್ಮ ಮಕ್ಕಳ ಜತೆ ಇಂಗ್ಲಿಷ್ ನಲ್ಲಿ ಮಾತನಾಡುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಪೋಷಕರು ಮನೆಗಳಲ್ಲಿ ಮಕ್ಕಳಲ್ಲಿ ತುಳುವಿನಲ್ಲೇ ಅಭ್ಯಾಸ ಇಟ್ಟುಕೊಳ್ಳಬೇಕು ಎಂದರು.
ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಗಣೇಶ್ ಶೆಟ್ಟಿ, ಜಿಲ್ಲಾ ಮೂರ್ತೆದಾರರ ಮಹಾಮಂಡಲ (ಬಿ.ಸಿರೋಡ್)ದ ನಿರ್ದೇಶಕ ವಿಜಯ ಕುಮಾರ್ ಸೊರಕೆ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಹರಿಕಥಾ ಪರಿಷತ್ ಅಧ್ಯಕ್ಷ ಮಹಾಬಲ ಶೆಟ್ಟಿ ಕೂಡ್ಲು ಮುಖ್ಯ ಅತಿಥಿಗಳಾಗಿದ್ದರು.
ತುಳು ಕೂಟ ಕುಡ್ಲ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜೆ.ವಿ ಶೆಟ್ಟಿ ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಬಿ.ಪದ್ಮನಾಭ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಉಪಸ್ಥಿತರಿದ್ದರು.
* ಕಾರ್ಯಕ್ರಮದ ಭಾಗವಾಗಿ ತುಳು ವಿಚಾರಗೋಷ್ಠಿ, ಯಕ್ಷಮಣಿ- ಮಹಿಳಾ ತಾಳಮದ್ದಳೆ, ತುಳು ಸಾಂಸ್ಕೃತಿಕ ರಂಗು, ಸಾಧಕ ಸನ್ಮಾನ, ಬಂಗಾರ ಪಿಂಗಾರ- ಸ್ಮರಣ ಸಂಚಿಕೆ ಬಿಡುಗಡೆ, ‘ರೆಂಜೆ ಬನೊತ ಲೆಕ್ಕೆಸಿರಿ’ ತುಳು ಯಕ್ಷಗಾನ, ದೈವದ ಬೂಳ್ಯ- ಎನ್ನುವ ವಿಶಿಷ್ಟ ಸಂಯೋಜನೆಯ ತುಳು ನಾಟಕ ಪ್ರಸ್ತುತಗೊಂಡಿತು.