ಮಣ್ಣಗುಡ್ಡ : ಕೃಷ್ಣಾ ಹೆರಿಟೇಜ್‌ನಲ್ಲಿ ಬೆಂಕಿ ಅನಾಹುತ
Update: 2025-03-12 20:57 IST
ಮಂಗಳೂರು : ನಗರದ ಮಣ್ಣಗುಡ್ಡ ೮ನೇ ಅಡ್ಡ ರಸ್ತೆಯಲ್ಲಿರುವ ಕೃಷ್ಣಾ ಹೆರಿಟೇಜ್‌ನ ಹಿಂಬದಿಯ ಒಂದು ಭಾಗ ಬುಧವಾರ ಬೆಂಕಿಗಾಹುತಿಯಾದ ಬಗ್ಗೆ ವರದಿಯಾಗಿದೆ.
ಪೂ.11ಕ್ಕೆ ಎ.ಸಿ. ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು ಹೆಂಚಿನ ಮಾಡಿಗೆ ಪಸರಿಸಿದೆ ಎನ್ನಲಾಗಿದೆ. ಮಾಹಿತಿ ತಿಳಿದೊಡನೆ ಕದ್ರಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವರ್ಗ ಕಾರ್ಯಾಚರಣೆ ನಡೆಸಿದೆ. ಕದ್ರಿ ಠಾಣೆಯ ವಾಹನದಲ್ಲಿ ನೀರು ಖಾಲಿಯಾದ ಕಾರಣ ಪಾಂಡೇಶ್ವರ ಠಾಣೆಯ ಇನ್ನೊಂದು ವಾಹನ ಸ್ಥಳಕ್ಕೆ ತೆರಳಿ ಮಧ್ಯಾಹ್ನ 2ರ ತನಕ ಕಾರ್ಯಾಚರಣೆ ನಡೆಸಿದೆ.
ಕೃಷ್ಣಾ ಹೆರಿಟೇಜ್ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ಬಾಡಿಗೆಗೆ ನೀಡಲಾಗುತ್ತಿತ್ತು. ಬೆಂಕಿ ಅವಘಡ ಸಂಭವಿಸಿದಾಗ ತುರ್ತು ಕಾರ್ಯಾಚರಣೆಗೆ ಯಾವುದೇ ಸುರಕ್ಷತಾ ಕ್ರಮವನ್ನು ಅಳವಡಿಸಿರಲಿಲ್ಲ. ಇದರಿಂದಾಗಿ ಬೆಂಕಿಯು ಹೆಂಚಿನ ಮಾಡನ್ನು ಆಹುತಿ ಪಡೆದಿದೆ ಎಂದು ಹೇಳಲಾಗಿದೆ.