×
Ad

ಮಂಗಳೂರು-ಬೆಂಗಳೂರು ಕಾರಿಡಾರ್ ಯೋಜನೆ ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಲು ಮನವಿ

Update: 2025-03-12 22:36 IST

ಮಂಗಳೂರು, ಮಾ.12: ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರ್ ಅವರನ್ನು ಭೇಟಿಯಾಗಿ ಶಿರಾಡಿ ಘಾಟಿ ಬೈಪಾಸ್ ಯೋಜನೆ ಅನುಷ್ಠಾನ ಸೇರಿ ಬೆಂಗಳೂರು-ಮಂಗಳೂರು ಹೆದ್ದಾರಿ ಸಂಪರ್ಕ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತಂತೆ ಮಹತ್ವದ ಚರ್ಚೆ ನಡೆಸಿದ್ದಾರೆ.

 ಚೌಟ ಅವರು ಮಂಗಳೂರು-ಬೆಂಗಳೂರು ಹೆದ್ದಾರಿ ಯೋಜನೆಗಳ ಅನುಷ್ಠಾನ ವಿಚಾರದಲ್ಲಿ ರಾಜ್ಯ ಸರಕಾರದ ಹಂತದಲ್ಲಿ ಇಲಾಖಾಧಿಕಾರಿಗಳಿಂದ ಆಗುತ್ತಿರುವ ವಿಳಂಬಕ್ಕೆ ತುರ್ತಾಗಿ ಮಧ್ಯಪ್ರವೇಶ ಮಾಡಿ ಎದುರಾಗಿರುವ ಎಲ್ಲ ಅಡೆ-ತಡೆ ನಿವಾರಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ. ಅದರಲ್ಲಿಯೂ ಶಿರಾಡಿ ಘಾಟಿ ಮಾರ್ಗವನ್ನು ಮೇಲ್ದರ್ಜೆಗೇರಿಸುವಲ್ಲಿ ಸೂಕ್ತ ಪಥಗಳ ನಿಗದಿ ಹಾಗೂ ಯೋಜನೆಗೆ ಅರಣ್ಯ ಇಲಾಖೆಯ ಮಂಜೂರಾತಿ ಪಡೆಯುವ ಪ್ರಕ್ರಿಯೆ ಚುರುಕುಗೊಳಿಸುವಂತೆ ಮನವಿ ಮಾಡಿದ್ದಾರೆ.

ಶಿರಾಡಿ ಘಾಟಿಯಲ್ಲಿ ಬಹುಪಥಗಳ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಅನುಮತಿ ನೀಡುವ ಪ್ರಕ್ರಿಯೆ ನಿಧಾನವಾಗಿರುವ ಕಾರಣ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಹಿನ್ನಡೆಯಾಗಿದೆ. ಪ್ರಮುಖವಾಗಿ ಕರ್ನಾಟಕ ಸರ್ಕಾರದಿಂದ ಅರಣ್ಯ ಇಲಾಖೆಯ ಅನುಮತಿ ಬಾಕಿಯಿರುವ ಕಾರಣ ಈ ಯೋಜನೆ ಕಾರ್ಯರೂಪಕ್ಕೆ ತರುವುದಕ್ಕೆ ಹೆಚ್ಚಿನ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಶಿರಾಡಿ ಘಾಟಿ ರಸ್ತೆ ವಿಸ್ತರಣೆಗೆ ರಾಜ್ಯ ಸರ್ಕಾರದ ಕಡೆಯಿಂದ ಎದುರಾಗಿರುವ ಅಡೆ-ತಡೆ ನಿವಾರಣೆಗೆ ಹೆದ್ದಾರಿ ಸಚಿವಾಲಯದ ಕಡೆಯಿಂದ ಮಧ್ಯಸ್ಥಿಕೆ ವಹಿಸುವಂತೆಯೂ ಚೌಟ ಅವರು ಸಚಿವ ಗಡ್ಕರಿ ಅವರಲ್ಲಿ ವಿನಂತಿಸಿದ್ದಾರೆ.

ಇದೇ ಸಂದರ್ಭ ಸಂಸದರು, ಸಚಿವರೊಂದಿಗೆ ದಕ್ಷಿಣ ಕನ್ನಡದ ಪ್ರಗತಿಯಲ್ಲಿರುವ ಹೆದ್ದಾರಿ ಕಾಮಗಾರಿ ಗಳು ಹಾಗೂ ಮಂಗಳೂರು-ಬೆಂಗಳೂರು ಕಾರಿಡಾರ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸುವ ಪ್ರಕ್ರಿಯೆಗಳ ಪ್ರಗತಿ ಬಗ್ಗೆಯೂ ಮಾಹಿತಿ ಹಂಚಿಕೊಂಡರು.

ಈ ವೇಳೆ ಪ್ರಕ್ರಿಯಿಸಿರುವ ಸಚಿವ ನಿತಿನ್ ಗಡ್ಕರಿ ಅವರು, ಶಿರಾಡಿ ಘಾಟಿ ಹೆದ್ದಾರಿ ಮೇಲ್ದರ್ಜೆಗೇರಿಸು ವುದಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲ ರೀತಿಯ ಅನುಮತಿ ಹಾಗೂ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಮುಂದಿನ ಹಂತದ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News