ಸ್ಪೀಕರ್ ಯು.ಟಿ.ಖಾದರ್ ರಿಗೆ ಮಂಗಳೂರು ಏರ್‌ಪೋರ್ಟ್ ಟ್ಯಾಕ್ಸಿ ಅಸೋಸಿಯೇಶ್ ಮನವಿ
ಮಂಗಳೂರು: ಮಂಗಳೂರು ಏರ್‌ಪೋರ್ಟ್ ಆವರಣದಲ್ಲಿ ಟ್ಯಾಕ್ಸಿ ನಡೆಸುತ್ತಿರುವ ಟ್ಯಾಕ್ಸಿ ಡ್ರೈವರ್‌ಗಳ ’ಕೌಂಟರ್ ಸಿಬ್ಬಂದಿ ಪಾಸ್’ಗಳನ್ನು ಏರ್ಪೋರ್ಟ್ ಆಡಳಿತ ಸಂಸ್ಥೆಯಿಂದ ಸಕಾಲದಲ್ಲಿ ದೊರಕುವಂತೆ ಮಾಡಬೇಕು ಎಂದು ಮಂಗಳೂರು ಏರ್‌ಪೋರ್ಟ್ ಟ್ಯಾಕ್ಸಿ ಅಸೋಸಿಯೇಶ್‌ನ ನಿಯೋಗವು ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ಗೆ ಮನವಿ ಸಲ್ಲಿಸಿದೆ.
ಕಳೆದ ನಲ್ವತ್ತು ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ಟ್ಯಾಕ್ಸಿಗಳನ್ನು ಬಾಡಿಗೆಗೆ ನಡೆಸುತ್ತಾ ಬಂದ ಟ್ಯಾಕ್ಸಿ ಮಾಲಕರು ಮತ್ತು ಚಾಲಕರು ಕೆಲವು ದಿನಗಳಿಂದ ಏರ್‌ಪೋರ್ಟ್ ಪ್ರಾಂಗಣದಲ್ಲಿ ದುಡಿಯಲು ಏರ್‌ಪೋರ್ಟ್ ಆಡಳಿತವು ನೀಡಿದ್ದ ಕೌಂಟರ್ ಪಾಸ್‌ನ್ನು ನವೀಕರಣ ಗೊಳಿಸುವುದಿಲ್ಲ ಎಂಬ ಸ್ಥಳೀಯ ಮಟ್ಟದ ಏರ್ಪೋರ್ಟ್ ಸಿಬ್ಬಂದಿ ವರ್ಗದ ಹೇಳಿಕೆಯಿಂದ ಟ್ಯಾಕ್ಸಿ ಡ್ರೈವರ್‌ಗಳು ಅಘಾತಕ್ಕೊಳಗಾಗಿದ್ದರು. ಇನ್ನೂರಷ್ಟು ಕುಟುಂಬಗಳ ಜೀವನೋಪಾಯಕ್ಕೆ ಕುತ್ತು ಬರಲಿರುವ ಸಂಭವನೀಯತೆಯನ್ನು ಅರಿತ ಚಾಲಕ-ಮಾಲಕರ ಸಂಘದ ನಿಯೋಗವು ಸ್ಪೀಕರ್ ಯು.ಟಿ. ಖಾದರ್‌ರನ್ನು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಸಂಯೋಜಕ ಫಾರೂಕ್ ಉಳ್ಳಾಲ್‌ರ ನೇತೃತ್ವದಲ್ಲಿ ಮನವಿ ಸಲ್ಲಿಸಿತು.
ಅದರಂತೆ ಸ್ಪೀಕರ್ ಯು.ಟಿ.ಖಾದರ್ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ ಕೌಂಟರ್ ಪಾಸ್ ರದ್ದುಗೊಳ್ಳದಂತೆ ತಾತ್ಕಾಲಿಕ ನವೀಕರಣಕ್ಕೆ ಸೂಚನೆ ನೀಡಿದರು. ಸ್ಪೀಕರ್‌ರ ಸೂಚನೆಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ.
ಚಾಲಕ ಮಾಲಕರ ಸಂಘದ ನಿಯೀಗದಲ್ಲಿ ಸ್ಟಾನ್ಲಿ ಕುನ್ಹಾ, ನಿತ್ಯಾನಂದ ಪುತ್ರನ್, ಅಬ್ದುಲ್ ನಝೀರ್, ಆಸಿಫ್ ಬಜ್ಪೆ ಮತ್ತಿತರರಿದ್ದರು. ಮನವಿ ಸ್ವೀಕರಿಸಿ ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆಗೆ ಸ್ಪಂದಿಸಿದ ಸ್ಪೀಕರ್ ಯು.ಟಿ.ಖಾದರ್‌ಗೆ ಚಾಲಕ - ಮಾಲಕರ ಸಂಘದ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಅಭಿನಂದನೆ ಸಲ್ಲಿಸಿದ್ದಾರೆ.