ಮಕ್ಕಳ ಮೊಬೈಲ್ ಬಳಕೆಯ ಬಗ್ಗೆ ಪೋಷಕರ ಗಮನವಿರಲಿ: ಫಾರೂಕ್ ಉಳ್ಳಾಲ್
ಉಳ್ಳಾಲ:ಆಧುನಿಕ ಸವಲತ್ತುಗಳ ರಹದಾರಿಯಾಗಬೇಕಿದ್ದ ಮೊಬೈಲ್ ಫೋನ್ ದುರ್ವ್ಯಸನಗಳಿಗೆ ಸಹಕಾರಿಯಾಗುತ್ತಿವೆ. ಕುಟುಂಬದ ನೆಮ್ಮದಿ ಕೆಡಿಸುತ್ತಿದೆ, ಪೋಷಕರು ತಮ್ಮ ಮಕ್ಕಳ ಕೈಯಲ್ಲಿರುವ ಮೊಬೈಲ್ ಬಳಕೆ ತಪ್ಪುದಾರಿಯಲ್ಲಿವೆಯೇ ಎಂದು ಒಮ್ಮೆಯಾದರೂ ಪರಿಶೀಲಿಸುವ ಪ್ರಯತ್ನ ಮಾಡಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಫಾರೂಕ್ ಉಳ್ಳಾಲ್ ಕರೆ ನೀಡಿದರು.
ಭಾನುವಾರ ನಡೆದ ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿಯ 94ನೇ ರಾತೀಬ್ ನೇರ್ಚೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಎನ್ನುವುದು ಅಕ್ಷರ ಜ್ಞಾನಕ್ಕೆ ಮಾತ್ರ ಸೀಮಿತವಾಗಬಾರದು. ಗುರು ಹಿರಿಯರಿಗೆ ಗೌರವ ನೀಡದ ಶಿಕ್ಷಣ ನಿಷ್ಪ್ರಯೋಜಕ. ಮುಸ್ಲಿಂ ಸಮುದಾಯದಲ್ಲಿ ಹೆಣ್ಮಕ್ಕಳು ಶಿಕ್ಷಣದಲ್ಲಿ ಮುಂದಿದ್ದು ಗಂಡು ಮಕ್ಕಳೂ ಆಸಕ್ತರಾಗಿ ಉನ್ನತ ಸ್ಥಾನ ತಲುಪಬೇಕು ಎಂದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಪ್ರತಿಯೊಬ್ಬರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ಮುಹಿಯುದ್ದೀನ್ ಮಸೀದಿಯ ಅಧೀನದಲ್ಲಿ ಆರು ಮೊಹಲ್ಲಾಗಳಿದ್ದು, ಮದ್ರಸಾದಲ್ಲಿ 600 ಮಕ್ಕಳು ಹಾಗೂ ಶರೀಯತ್ ಕಾಲೇಜಿನಲ್ಲಿ 50ರಷ್ಟು ಹೆಣ್ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು.ಟಿ. ಮೊಹಮ್ಮದ್, ಎಸ್ ವೈಎಸ್ ಅಧ್ಯಕ್ಷ ಕೆ.ಎಸ್.ಮೊಯಿದ್ದೀನ್, ಅಬ್ದುಲ್ ಸತ್ತಾರ್ ಉಸ್ತಾದ್, ಅಶ್ರಫ್ ಸಖಾಫಿ , ಉಸ್ಮಾನ್ ಉಸ್ತಾದ್ ಮತ್ತಿತರರು ಉಪಸ್ಥಿತರಿದ್ದರು.
ಮಸೀದಿಯ ಖತೀಬ್ ಅನಸ್ ಅಝ್ಹರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಾಂ ಮದನಿ ಕಾರ್ಯಕ್ರಮ ನಿರೂಪಿಸಿದರು.