×
Ad

ಬೆಳ್ತಂಗಡಿ| ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ವಾಲಿಬಾಲ್ ತರಬೇತುದಾರನಿಗೆ ಮಾರಣಾಂತಿಕ ಹಲ್ಲೆ

Update: 2025-04-27 21:52 IST

ಬೆಳ್ತಂಗಡಿ: ಖಾಸಗಿ ಕಾಲೇಜ್ ವಿದ್ಯಾರ್ಥಿನಿಗೆ ವಾಲಿಬಾಲ್ ತರಬೇತುದಾರ ಮೆಸೇಜ್ ಕಳುಹಿಸಿದ ಆರೋಪದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಹತ್ತಕ್ಕೂ ಹೆಚ್ಚು ಕಾರ್ಯಕರ್ತರ ತಂಡ ಕಾರ್ಕಳದ ಸಯ್ಯದ್ (24)ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ಇದೀಗ ಬೆಳ್ತಂಗಡಿ ಠಾಣೆಯಲ್ಲಿ ವಿದ್ಯಾರ್ಥಿನಿಯ ದೂರಿನಂತೆ ಸಯ್ಯದ್ ವಿರುದ್ಧ ಪೋಕ್ಸೋ ಪ್ರಕರಣ‌ ದಾಖಲಿಸಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಖಾಸಗಿ ಕಾಲೇಜಿನ 17ರ ಹರೆಯದ ವಿದ್ಯಾರ್ಥಿನಿಗೆ ಕಾರ್ಕಳ ನಿವಾಸಿ ಸಯ್ಯದ್  ಕಳೆದ ಕೆಲವು ದಿನಗಳಿಂದ‌ ಮೆಸೇಜ್ ಕಳುಹಿಸುತ್ತಾ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ದೂರು ನೀಡಲಾಗಿದೆ.

ಸಯ್ಯದ್ ಇಲ್ಲಿನ ಕಾಲೇಜೊಂದರಲ್ಲಿ ವಾಲಿಬಾಲ್ ಆಡಲು ಹಾಗೂ ತರಬೇತಿ ನೀಡಲು ಬರುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಉಜಿರೆಯ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಗುಂಪೊಂದು ಎ.26 ರಂದು ಉಜಿರೆಯಲ್ಲಿ ಸಯ್ಯದ್ ಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಪೊಲೀಸರು ಸಯ್ಯದ್ ನನ್ನು ವಶಕ್ಕೆ ಪಡೆದಿದ್ದರು.

ವಿದ್ಯಾರ್ಥಿನಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಎ.26 ರಂದು ಆರೋಪಿ ಸಯ್ಯದ್  ವಿರುದ್ಧ  ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು ಮಂಗಳೂರು ಫೋಕ್ಸೋ ನ್ಯಾಯಾಲಯದ ನ್ಯಾಯಧೀಶರ ಮನೆಗೆ ರಾತ್ರಿ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಇದೀಗ ಹಲ್ಲೆಗೆ ಒಳಗಾದ ಸಯ್ಯದ್ ಉಜಿರೆಯ ಪ್ರಜ್ವಲ್ ಹಾಗೂ ಇತರ ಹತ್ತಕ್ಕೂ ಹೆಚ್ಚು ಮಂದಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದಾನೆ. ಹಲ್ಲೆ ನಡೆಸಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News