×
Ad

ಕುಡುಬಿ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ: ಡಾ.ಮೋಹನ್ ಆಳ್ವ

Update: 2025-04-28 18:09 IST

ಮಂಗಳೂರು : ಕುಡುಬಿ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿಯುವಂತಾಗಲು ಶಿಕ್ಷಣಕ್ಕೆ ಹಚ್ಚು ನೀಡಬೇಕಾಗಿದೆ. ಶಿಕ್ಷಣ ಪಡೆಯುವುದರಿಂದ ಸ್ವಾವಲಂಭಿ ಬದುಕು ರೂಪಿಸಲು ಮತ್ತು ನಮ್ಮ ಎಲ್ಲ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯ ಎಂದು ಮೂಡಬಿದ್ರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದ್ದಾರೆ.

ಮಿಜಾರಿನ ಅಣ್ಣಪ್ಪ ಸಭಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ರವಿವಾರ ಆಯೋಜಿಸಲಾದ ಕುಡುಬಿ ಜಾನಪದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ತಮ್ಮ ವಿದ್ಯಾ ಸಂಸ್ಥೆಯಲ್ಲಿ ಕುಡುಬಿ ಸಮುದಾಯದ ಮಕ್ಕಳಿಗೆ ಉಚಿತ ಪ್ರವೇಶಾತಿ ನೀಡುವುದಾಗಿ ಭರವಸೆ ನೀಡಿದರು.

ಮೂಡಬಿದ್ರೆಯ ಉದ್ಯಮಿ ಶ್ರೀಪತಿ ಭಟ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಶೇಖರ್ ಗೌಡರವರು ಬರೆದ ‘ತ್ಹೊಹೀ ತ್ಹೊಹೀ ಗುಮ್ಮಟ್’ ಕೃತಿ ಬಿಡುಗಡೆಗೊಂಡಿತು.

ವೇದಿಕೆಯಲ್ಲಿ ಗೌರವ ಸಂಚಾಲಕ ಮೋನಪ್ಪ ಗುರಿಕಾರ, ನಿರ್ವಹಣಾ ಸಮಿತಿ ಸಂಚಾಲಕರು ಸದಾಶಿವ ಮಿಜಾರು, ಮುಬೈನ ಉದ್ಯಮಿ ಪದ್ಮನಾಭ, ಕರ್ನಾಟಕ ರಾಜ್ಯ ಕುಡುಬಿ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ್ ಗೋಳಿಯಂಗಡಿ , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆ ಮಿಯ ಸದಸ್ಯರಾದ ಶ್ರೀನಿವಾಸ್‌ಗೌಡ, ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ, ದಯಾನಂದ್ ಮಡ್ಕೇಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುಮಾರು 30 ಕ್ಕೂ ಮಿಕ್ಕಿ ಕುಡುಬಿ ಕಲಾತಂಡಗಳಿಂದ ಗುಮಟೆ, ಕೋಲಾಟ ಮತ್ತು ಜಾನಪದ ನೃತ್ಯ ರೂಪಕಗಳ ಪ್ರದರ್ಶನ ಜರಗಿತು.

ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಡಪದವಿನ ಸಮಾಜ ಸೇವಕ ಆರ್.ಕೆ. ಪ್ರಥ್ವಿರಾಜ್ ,ಮೂಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಶುಭ ಹಾರೈಸಿದರು.

ಕುಡುಬಿ ಸಮಾಜದ ಹಿರಿಯರಾದ ಸುಂದರ ಗೌಡರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ದ.ಕ. ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲ, ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ಕೊಂಪದವು, ಕಾರ್ಯದರ್ಶಿ ಶೇಖರ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ರಂಜಿತಾ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸುಮಾರು 5000 ಕ್ಕೂ ಮಿಕ್ಕಿ ಕುಡುಬಿ ಸಮಾಜದ ಜನರು ಭಾಗವಹಿಸಿದ್ದರು.

ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಮೆರವಣಿಗೆಯು ವೈಭವಯುತವಾಗಿ ದೂಮಚಡವು ಮುಖ್ಯರಸ್ತೆಯಿಂದ ಮಿಜಾರ್ ಅಣ್ಣಪ್ಪ ಸಭಾಭವನದವರೆಗೆ ನಡೆಯಿತು. ಮೆರವಣಿಗೆಯಲ್ಲಿ 1500ಕ್ಕೂ ಮಿಕ್ಕಿ ಜನರು ಭಾಗವಹಿಸಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News