ಪಿಸ್ತೂಲ್ ರವಿಯ ಪ್ರಚೋದನೆಯಿಂದ ಗುಂಪು ಹತ್ಯೆ: ದ.ಕ.ಜಿಲ್ಲಾ ಕಾಂಗ್ರೆಸ್ ಆರೋಪ
ಮಂಗಳೂರು: ಬಿಜೆಪಿ ಮಾಜಿ ಕಾರ್ಪೊರೇಟರ್‌ವೊಬ್ಬರ ಪತಿಯಾಗಿರುವ ಪಿಸ್ತೂಲ್ ರವಿಯ ಪ್ರಚೋದನೆಯಿಂದ ಕುಡುಪುವಿನಲ್ಲಿ ಗುಂಪು ಹತ್ಯೆ ನಡೆದಿದೆ. ಬಿಜೆಪಿ ಮುಖಂಡರು ಆಗಾಗ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ಮತೀಯ ಗಲಭೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸಚಿವ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಘಟನೆ ನಡೆದ ಬಳಿಕ ಪಿಸ್ತೂಲ್ ರವಿ ತಲೆಮರೆಸಿಕೊಂಡಿದ್ದಾನೆ. ಆತನ ಮೂರು ಮೊಬೈಲ್ ಸ್ವಿಚ್‌ಆಫ್ ಆಗಿದೆ. ಬಿಜೆಪಿ ನಾಯಕರು ಪ್ರಚೋದನಕಾರಿ ಭಾಷಣ ಮಾಡಿ ಹಿಂದುಳಿದ ವರ್ಗದ ಯುವಕರನ್ನು ಜೈಲು ಸೇರುವಂತೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ ಎಂದರು.
*ಪತ್ರಕರ್ತರ ಪ್ರಶ್ನೆಗೆ ಅಸಮರ್ಪಕ ಉತ್ತರ: ಕುಡುಪು ಗುಂಪು ಹತ್ಯೆ ಪ್ರಕರಣದಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌ರ ವೈಫಲ್ಯ ಎದ್ದು ಕಾಣುತ್ತಿವೆ. ಅವರ ವಿರುದ್ಧ ಕ್ರಮಕ್ಕೆ ಸರಕಾರಕ್ಕೆ ಮನವಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಇದೆ ಎಂದು ಹರೀಶ್ ಕುಮಾರ್ ಹೇಳಿದರು.
ಪೊಲೀಸ್ ಇಲಾಖೆಯ ವೈಫಲ್ಯ ಅಂದರೆ ಅದು ರಾಜ್ಯ ಸರಕಾರದ ವೈಫಲ್ಯ ಅಲ್ಲವೇ? ಗೃಹ ಸಚಿವರು ಯಾರ ಮಾತನ್ನು ಆಧರಿಸಿ ಹತ್ಯೆಗೀಡಾದ ಯುವಕ 'ಪಾಕಿಸ್ತಾನ ಝಿಂದಾಬಾದ್' ಎಂದಿರುವುದಾಗಿ ತಿಳಿಸಿದ್ದಾರೆ? ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ʼಅನ್ಯಕೋಮುʼ ಎಂಬ ಪದ ಬಳಕೆ ಎಷ್ಟು ಸರಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಹರೀಶ್ ಕುಮಾರ್ ಸಮರ್ಪಕ ಉತ್ತರ ನೀಡದೆ ಜಾರಿಕೊಂಡರು. ಒಂದು ಹಂತದಲ್ಲಿ ತಾನು ಪೊಲೀಸ್ ಇಲಾಖೆಯ ವೈಫಲ್ಯ ಎಂದು ಹೇಳಲೇ ಇಲ್ಲ ಎಂದು ಹೇಳಿಕೊಂಡು ಸ್ವತಃ ಗೊಂದಲ ಸೃಷ್ಟಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕೆ.ಕೆ.ಶಾಹುಲ್ ಹಮೀದ್, ಸುಹೈಲ್ ಕಂದಕ್, ನವಾಝ್, ಲಾರೆನ್ಸ್ ಡಿಸೋಜ, ವಿಶ್ವಾಸ್ ಕುಮಾರ್ ದಾಸ್, ಶಬ್ಬೀರ್ ಸಿದ್ದಕಟ್ಟೆ, ಟಿ.ಕೆ.ಸುಧೀರ್, ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ಹೊನ್ನಯ್ಯ ಉಪಸ್ಥಿತರಿದ್ದರು.