ಪುತ್ತೂರು: ತಾಯಿಯ ಸಾವಿಗೆ ಕಾರಣವಾದ ಆರೋಪಿ ಮಗನಿಗೆ ಜೈಲುಶಿಕ್ಷೆ, ದಂಡ
ಪುತ್ತೂರು: ಆರು ವರ್ಷಗಳ ಹಿಂದೆ ನಡೆದ ಘಟನೆಯೊಂದರಲ್ಲಿ ತನ್ನ ತಾಯಿಯ ಸಾವಿಗೆ ಕಾರಣವಾದ ಆರೋಪಿ ಮಗನಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಡಬ ತಾಲೂಕಿನ ಕ್ಯಾಮಣ ಗ್ರಾಮ ನಿವಾಸಿ ಗೋಪಾಲ ಯಾನೆ ಗೋಪ ಜೈಲುಶಿಕ್ಷೆಗೆ ಒಳಗಾದ ಆರೋಪಿ.
ಈತ 2019ರ ಫೆ.15 ರಂದು ರಾತ್ರಿ ತನ್ನ ತಾಯಿ ಚೀಂಕುರು ಎಂಬವರೊಂದಿಗೆ ಜಗಳವಾಡಿ ಎಲೆ ಅಡಿಕೆ ಹುಡಿಮಾಡುವ ಕಲ್ಲಿನಿಂದ ಹಲ್ಲೆ ನಡೆಸಿದ್ದು, ಬಳಿಕ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ವಹಿಸಿದ ಕಾರಣ 2019ರ ಫೆ.19 ರಂದು ಚೀಂಕುರು ಮೃತಪಟ್ಟಿದ್ದರು.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಆರೋಪಿಗೆ 5 ವರ್ಷ ಜೈಲುಶಿಕ್ಷೆ ಮತ್ತು 5,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಜೈಲುಶಿಕ್ಷೆ ಅನುಭವಿಸುವಂತೆ ಆದೇಶಿಸಿ ತೀರ್ಪು ನೀಡಿದೆ.